ಬೆಂಗಳೂರು: ಸುದೀರ್ಘ ಕಾಲ ನಡೆದ ಬಜೆಟ್ ಅಧಿವೇಶನಕ್ಕೆ ಇಂದು ತೆರೆ ಬಿದ್ದಿದೆ. ಕೊರೊನಾ ಭೀತಿ ಹಿನ್ನೆಲೆ ಮೊಟಕುಗೊಂಡ ಬಜೆಟ್ ಅಧಿವೇಶನ ಒಟ್ಟು 21 ದಿನಗಳ ಕಾಲ ನಡೆಯಿತು. ಮಾರ್ಚ್ ಅಂತ್ಯದವರೆಗೆ ನಡೆಯಬೇಕಾಗಿದ್ದ ಅಧಿವೇಶನಕ್ಕೆ ಕೊರೊನಾ ಭೀತಿ ಬ್ರೇಕ್ ಹಾಕಿತು. ಎಲ್ಲಾ ಶಾಸಕರು ಕೊರೊನಾ ಸೋಂಕು ಹರಡುವ ಆತಂಕ ವ್ಯಕ್ತಪಡಿಸಿದ ಹಿನ್ನೆಲೆ ಸರ್ಕಾರ ಅಧಿವೇಶನವನ್ನು ಇಂದಿಗೆ ಕೊನೆಗೊಳಿಸಲು ತೀರ್ಮಾನಿಸಿತು.
21 ದಿನಗಳ ಕಾಲ ನಡೆದ ವಿಧಾನಸಭೆ ಅಧಿವೇಶನದ ಸಂಕ್ಷಿಪ್ತ ವರದಿ ಓದಿದ ಸ್ಪೀಕರ್, ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ 25 ಸದಸ್ಯರು ಚರ್ಚೆ ಮಾಡಿದ್ದಾರೆ. ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ 47 ಸದಸ್ಯರು ಭಾಗಿಯಾಗಿದ್ದಾರೆ. ಒಟ್ಟು 27 ಗಂಟೆ 46 ನಿಮಿಷಗಳ ಕಾಲ ಸಂವಿಧಾನದ ಮೇಲೆ ಚರ್ಚೆ ನಡೆದಿದೆ ಎಂದು ತಿಳಿಸಿದರು.
ವಿಧಾನಮಂಡಲ 12 ಸಮಿತಿಗಳ ವರದಿಗಳ ಮಂಡನೆ ಮಾಡಲಾಯಿತು. ಇನ್ನು ಸದನದಲ್ಲಿ 26 ವಿಧೇಯಕಗಳ ಮಂಡನೆ ಮಾಡಲಾಗಿದೆ. ಈ ಪೈಕಿ 25 ವಿಧೇಯಕಗಳಿಗೆ ಅಂಗೀಕಾರ ನೀಡಲಾಗಿದೆ ಎಂದರು.