ಬೆಂಗಳೂರು: ಜನಪ್ರತಿನಿಧಿಗಳ ನಡವಳಿಕೆಯಿಂದ ಸದನದ ಗೌರವ ಹೆಚ್ಚುತ್ತದೆ. ಸದನದ ಗೌರವ ಹೆಚ್ಚಿಸುವುದು ಎಲ್ಲಾ ಪಕ್ಷಗಳ ಜವಾಬ್ದಾರಿಯಾಗಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸದನದ ಗೌರವ ಹೆಚ್ಚಿಸುವಲ್ಲಿ ಜನಪ್ರತಿನಿಧಿಗಳ ಕೊಡುಗೆ ಅಪಾರವಾಗಿದೆ. ಸದನದ ಗೌರವ ಹೆಚ್ಚಿಸುವುದು ಎಲ್ಲಾ ಪಕ್ಷಗಳ ಜವಾಬ್ದಾರಿಯಾಗಿದೆ. ಯಾವುದೇ ಕಾನೂನು ತರುವ ಹೊಣೆ ಸರ್ಕಾರದ್ದಾಗಿದೆ. ಸ್ಪೀಕರ್ ಆ ಬಗ್ಗೆ ಚರ್ಚೆ ನಡೆಯುವಂತೆ ನೋಡಿಕೊಳ್ಳಬೇಕು. ನಮ್ಮ ಕೆಲಸ ಸರ್ಕಾರ ತರುವ ನೀತಿ-ನಿಯಮಗಳ ಮೇಲೆ ಚರ್ಚೆ ನಡೆಸುವಂತೆ ಮಾಡುವುದಾಗಿದೆ ಎಂದರು.
ಸದನದ ಗೌರವ ಹೆಚ್ಚಿಸುವುದು ಎಲ್ಲಾ ಪಕ್ಷಗಳ ಜವಾಬ್ದಾರಿ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸಂಸತ್ ಮತ್ತು ವಿಧಾನಸಭೆಗಳ ಮೂಲಕ ಜb ನರ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಲೋಕತಂತ್ರದ ಸಂಸ್ಥೆಗಳು ಗಟ್ಟಿಯಾಗಬೇಕು. ಸದನ ನಡೆಸಲು ಎಸ್ಒಪಿಯನ್ನೂ ರಚಿಸುತ್ತೇವೆ. ಅದನ್ನು ಎಲ್ಲಾ ರಾಜ್ಯಗಳು ತಮ್ಮಲ್ಲಿ ಅಳವಡಿಸಬಹುದಾಗಿದೆ ಎಂದರು.
ಸದನದಲ್ಲಿನ ಗದ್ದಲ ಚಿಂತೆಯ ವಿಚಾರ:
ಸದನದಲ್ಲಿ ಗದ್ದಲ ಉಂಟಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸದನ ಸುಗಮವಾಗಿ ನಡೆಯುವಂತೆ ಮಾಡುವುದು ಸಾಮೂಹಿಕ ಹೊಣೆಗಾರಿಕೆ ಎಂದರು. ಸದನದಲ್ಲಿ ಗದ್ದಲ ನಮಗೆ ಚಿಂತೆಯ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳ ಸ್ಪೀಕರ್, ಸಿಎಂಗಳು ವ್ಯಾಪಕವಾದ ಚರ್ಚೆ ನಡೆಸಿದ್ದಾರೆ. ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳ ಸದನದಲ್ಲಿ ಗದ್ದಲ ಉಂಟಾಗದಂತೆ, ಚರ್ಚೆ ಆಗುವಂತೆ ನೋಡಿಕೊಳ್ಳುವುದು ಎಲ್ಲರ ಸಾಮೂಹಿಕ ಹೊಣೆಯಾಗಿದೆ. ಪ್ರತಿಪಕ್ಷಗಳು ತಮ್ಮ ವಿಚಾರಗಳ ಬಗ್ಗೆ ಸುಗಮವಾಗಿ ಚರ್ಚೆ ನಡೆಸಬೇಕು ಎಂದು ಸಲಹೆ ನೀಡಿದರು.
ಸದನದ ಒಳಗಡೆ ಅನುಶಾಸನ, ಗೌರವ ಕಾಪಾಡುವ ನಿಟ್ಟಿನಲ್ಲಿ ಶಿಮ್ಲಾದಲ್ಲಿ ನಡೆಯುವ ಸಮ್ಮೇಳನದಲ್ಲಿ ಸಮಾಲೋಚನೆ ನಡೆಸುತ್ತೇವೆ. ಲೋಕತಂತ್ರಗಳ ಸಂಸ್ಥೆಗಳ ಎಲ್ಲಾ ಪೀಠಾಸೀನ ಅಧಿಕಾರಿಗಳ ಜೊತೆ ಚರ್ಚಿಸಿ ಪೂರಕವಾದ ಒಂದು ನಿರ್ಧಾರಕ್ಕೆ ಬರಲಿದ್ದೇವೆ. ಲೋಕತಂತ್ರ ದೇಶದ ಆತ್ಮವಾಗಿದೆ. ನಮ್ಮ ಜೀವನ, ಸಂಸ್ಕೃತಿ ವಿಚಾರದಲ್ಲಿ ಸದಾ ಲೋಕತಂತ್ರ ಇರುತ್ತದೆ. ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ಲೋಕತಾಂತ್ರಿಕವಾಗಿನೇ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತು. ಹೀಗಾಗಿ ಲೋಕತಾಂತ್ರಿಕ ಸಂಸ್ಥೆಯನ್ನು ಇನ್ನಷ್ಟು ಬಲಪಡಿಸಿ ಜನರ ಕಲ್ಯಾಣ ಕೆಲಸ ಮಾಡಬೇಕಾಗಿದೆ ಎಂದು ವಿವರಿಸಿದರು.
ಚರ್ಚೆಯಾಗದೇ ಬಿಲ್ ಪಾಸ್ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಸದನದಲ್ಲಿ ವಿಧೇಯಕದ ಮೇಲೆ ಚರ್ಚೆಯಾಗದೇ ಅಂಗೀಕಾರವಾಗುವುದು ಒಳ್ಳೆಯ ಬೆಳವಣಿಗೆಯಲ್ಲ. ಚರ್ಚೆ ಆಗಬೇಕು. ಆಗ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಅಭಿಪ್ರಾಯಪಟ್ಟರು.
ಪಕ್ಷಾಂತರ ನಿಷೇಧ ಕಾಯ್ದೆ ಸಂಬಂಧ ಶೀಘ್ರ ನಿರ್ಧಾರ:
ಪಕ್ಷಾಂತರ ನಿಷೇಧ ಕಾಯ್ದೆ ಸಂಬಂಧಪಟ್ಟಂತೆ ರಾಜಸ್ತಾನ ಸ್ಪೀಕರ್ ಸಿ.ಪಿ ಜೋಶಿ ನೇತೃತ್ವದ ಸಮಿತಿ ವರದಿ ನೀಡಿದೆ. ಈ ವರದಿಯನ್ನು ಅ.26-28ರ ವರೆಗೆ ಶಿಮ್ಲಾದಲ್ಲಿ ನಡೆಯಲಿರುವ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಸ್ಪೀಕರ್ ಅವರ ಕಾರ್ಯವ್ಯಾಪ್ತಿ, ನಿಯಮದಲ್ಲಿನ ಸ್ಪಷ್ಟತೆ ಮತ್ತು ಯಾವ ಕಾಲಮಿತಿಯೊಳಗೆ ಮಾಡಬೇಕು ಎಂಬ ಬಗ್ಗೆ ನಿಯಮ ರೂಪಿಸಲಾಗುತ್ತದೆ. ಪೀಠಾಸೀನ ಅಧಿಕಾರಿಗಳು ಪಕ್ಷಾಂತರ ನಿಷೇಧ ಕಾಯ್ದೆಯಡಿ ನಿರ್ಣಯ ಕೈಗೊಳ್ಳಬೇಕಾದ ಕಾಲಾವಧಿ ಏನು?. ಈ ಸಂಬಂಧ ಸ್ಪೀಕರ್ಗಳ ಅಧಿಕಾರ ಸೀಮಿತ ಮಾಡುವ ಬಗ್ಗೆನೂ ಪ್ರಸ್ತಾಪಿಸಿದ್ದಾರೆ. ಈ ಎಲ್ಲದರ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸ್ಪೀಕರ್ ಬಿರ್ಲಾ ಹೇಳಿದರು.
ಸಂಸತ್ ಭವನ ದೇಶದ ಸಂಸ್ಕೃತಿ ಪ್ರತಿಬಿಂಬಿಸಲಿದೆ
ಸದ್ಯದ ಸಂಸತ್ ಭವನಕ್ಕೆ 100 ವರ್ಷ ಆಗಿದೆ. ಅಕ್ಟೋಬರ್ 2022ಕ್ಕೆ ನೂತನ ಸಂಸತ್ ಭವನ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಸಂಸತ್ ಭವನ ದೇಶದ ವೈವಿಧ್ಯತೆ, ಸಂಸ್ಕೃತಿ ಪ್ರತಿಬಿಂಬಿಸಲಿದೆ ಎಂದಿದ್ದಾರೆ.