ಬೆಂಗಳೂರು : ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಗಮದಲ್ಲಿ (ಕೆಎಸ್ಡಿಎಲ್) ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು ಇಂದು ಲೋಕಾಯುಕ್ತ ಅಧಿಕಾರಿಗಳು ಸರ್ಚ್ ವಾರೆಂಟ್ ಪಡೆದು ತನಿಖೆ ನಡೆಸುತ್ತಿದ್ದಾರೆ. ನಿಗಮದ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕರಾಗಿರುವ ಮಾಡಾಳ್ ವಿರುಪಾಕ್ಷಪ್ಪ ಅವರ ಅವಧಿಯಲ್ಲಿ ಸಾಬೂನು ಹಾಗೂ ಮಾರ್ಜಕ ತಯಾರಿಸಲು ರಾಸಾಯನಿಕವನ್ನು ಆಮದು ಮಾಡಿಕೊಳ್ಳಲು ಕರೆಯಲಾಗಿದ್ದ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿತ್ತು.
ಶಿವಶಂಕರ್ ಸೇರಿದಂತೆ ಹಲವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಈ ದೂರನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಲಯದಿಂದ ದಾಳಿಗೆ ಅನುಮತಿ ಪಡೆಯಲಾಗಿತ್ತು. ಓರ್ವ ಡಿವೈಎಸ್ಪಿ ಹಾಗೂ 10 ಮಂದಿ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಕೆಎಸ್ಡಿಎಲ್ ಪ್ರಧಾನ ಕಚೇರಿ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಮಾಡಾಳ್ ವಿರುಪಾಕ್ಷಪ್ಪ ಆಡಳಿತ ಅವಧಿಯಲ್ಲಿ ಟೆಂಡರ್‌ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬಂದಿದ್ದವು. ಅಲ್ಲದೇ ಮಾಡಾಳ್ ಪುತ್ರ ಪ್ರಶಾಂತ್ ಮಾಡಾಳ್ ಕೂಡ ಟೆಂಡರ್ ನೀಡಲು ಗುತ್ತಿಗೆದಾರರಿಂದ ಲಕ್ಷಾಂತರ ರೂಪಾಯಿ ಹಣ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ತನಿಖೆಯಲ್ಲಿ ತಂದೆ ಮಾಡಾಳ್ ವಿರುಪಾಕ್ಷಪ್ಪ ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ಖಚಿತ ಮಾಹಿತಿ ಆಧರಿಸಿ ಕಳೆದ ಏಪ್ರಿಲ್‌ನಲ್ಲಿ ಮಾಡಾಳ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ತನಿಖೆಯಲ್ಲಿ ಟೆಂಡರ್, ಕಚ್ಚಾವಸ್ತು ಸೇರಿ ಹಲವು ವಸ್ತುಗಳು ಖರೀದಿಯಲ್ಲಿ ಅವ್ಯವಹಾರ ನಡೆದಿರುವುದು ಗೊತ್ತಾಗಿತ್ತು.