ಬೆಂಗಳೂರು: ರಾಜ್ಯದ ಹಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕೋಪಯೋಗಿ, ಪಂಚಾಯತ್ ಅಭಿವೃದ್ಧಿ, ಬೆಸ್ಕಾಂ, ಕರ್ನಾಟಕ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ವಿರುದ್ಧದ ಆರು ಪ್ರಕರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು, ರಾಮನಗರ ಹಾಗೂ ಬಳ್ಳಾರಿ ಸೇರಿದಂತೆ ಮೂವತ್ತಕ್ಕೂ ಅಧಿಕ ಸ್ಥಳಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.
ಕುಂದಣ ಪಿಡಿಒ ಪದ್ಮನಾಭ ಅವರಿಗೆ ಸೇರಿದ ಮೂರು ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆ ಪರಿಶೀಲಿಸುತ್ತಿದ್ದಾರೆ. ಜೊತೆಗೆ ದಾಬಸ್‌ಪೇಟೆ ಹಾಗೂ ತುಮಕೂರಿನಲ್ಲೂ ಪದ್ಮನಾಭ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಪರಿಶೀಲನೆ ಮುಂದುವರೆದಿದೆ. ಇವರ ಮಲ್ಲೇಶ್ವರಂನ ನಿವಾಸ, ಸಪ್ತಗಿರಿ ಲೇಔಟ್ ಬಳಿಯ ಎಜಿಬಿ ಲೇಔಟ್‌ನಲ್ಲಿರುವ 4 ಅಂತಸ್ತಿನ ಮನೆ, ತುಮಕೂರು ಜಿಲ್ಲೆ ಅನುಪನಹಳ್ಳಿಯಲ್ಲಿರುವ ಫಾರ್ಮ್ ಹೌಸ್, 5 ಎಕರೆ ಕೃಷಿ ಭೂಮಿ, ಸೋಂಪುರದಲ್ಲಿರುವ ವಾಣಿಜ್ಯ ಕಟ್ಟಡ, ದಾಬಸ್‌ಪೇಟೆ, ಸೋಂಪುರದಲ್ಲಿ ಕೈಗಾರಿಕಾ ಶೆಡ್ಗಳಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ವಿಜಯನಗರ ಜಿಲ್ಲೆಯ ಬೆಸ್ಕಾಂ ಚೀಫ್ ಜನರಲ್ ಮ್ಯಾನೇಜರ್ ನಾಗರಾಜ್ ಮತ್ತು ಅವರ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾಗರಾಜ್ ಅವರಿಗೆ ಸೇರಿದ ಸಿವಿ ರಾಮನ್ ನಗರದ ನಾಗವಾರಪಾಳ್ಯದ ಮನೆ, ನಾಗರಾಜ್ ವಾಸವಿದ್ದ ಕ್ವಾಟ್ರಸ್, ಬಳ್ಳಾರಿಯ ಹುಟ್ಟೂರಿನಲ್ಲಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ನಾಗರಾಜ್ ಅವರು ಕೂಡ್ಲಿಗಿ ಪಟ್ಟಣ, ಗುಡೇಕೋಟೆ ಗ್ರಾಮದಲ್ಲಿ ಅಕ್ರಮ ಆಸ್ತಿ, ಪೆಟ್ರೋಲ್ ಬಂಕ್, ಮನೆ, ಜಮೀನು ಹೊಂದಿರುವ ಆರೋಪವಿದೆ.
ನಾಗರಾಜ್ ಕೆಲ ದಿನಗಳ ಹಿಂದಷ್ಟೇ 7.50 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದರು. ಇದಲ್ಲದೆ ಮಂಡ್ಯ ಮೂಲದ ಬಿಬಿಎಂಪಿ ಅಧಿಕಾರಿ ಮಂಜೇಶ್ ಹಾಗೂ ಅವರ ಸಂಬಂಧಿಕರ ಮನೆ ಮೇಲೆ, ಬೆಸ್ಕಾಂ ಎಇಇ ಅಹಮದ್, ಸೂಪರಿಂಡೆಂಟ್ ಎನ್. ಸತೀಶ್, ಬೆಂಗಳೂರು ದಕ್ಷಿಣ ಚೆನ್ನೇನಹಳ್ಳಿ ಗ್ರಾಮ ಪಂಚಾಯತಿಯ ಸದಸ್ಯ ಸುರೇಶ್ ಗೆ ಸೇರಿದ ಸ್ಥಳಗಳಲ್ಲೂ ಲೋಕಾಯುಕ್ತ ಅಧಿಕಾರಿಗಳು ಶೋಧ ಮುಂದುವರೆಸಿದ್ದಾರೆ.