ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಕೆ.ಆರ್.ಪುರ ತಹಶೀಲ್ದಾರ್ ಅಜಿತ್ ರೈ ಅವರನ್ನು ಬಂಧಿಸಿ ತನಿಖೆ ಚುರುಕುಗೊಳಿಸಿರುವ ಲೋಕಾಯುಕ್ತ ಪೊಲೀಸರು ನಾಳೆ ಬೆಳಗ್ಗೆ 11 ಗಂಟೆಯೊಳಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲು ಸಿದ್ದತೆ ನಡೆಸುತ್ತಿದ್ದಾರೆ.
ಆದಾಯಕ್ಕೂ ಮೀರಿ ಆಸ್ತಿ ಸಂಪಾದನೆ ಆಪಾದನೆ ಹಿನ್ನೆಲೆಯಲ್ಲಿ ಸಹಕಾರ ನಗರದಲ್ಲಿರುವ ನಿವಾಸ ಸೇರಿದಂತೆ 12 ಕಡೆಗಳಲ್ಲಿ ದಾಳಿ ನಡೆಸಿದಾಗ 40 ಲಕ್ಷ ರೂಪಾಯಿ ನಗದು, ಕೋಟ್ಯಂತರ ಭೂ ದಾಖಲಾತಿ ಪತ್ರಗಳು, ದುಬಾರಿ ಬೆಲೆಯ ಕಾರು ಖರೀದಿಸಿದ ರಶೀದಿಗಳು, ದೇಶ-ವಿದೇಶಿ ಬ್ರ್ಯಾಂಡ್ ಮದ್ಯಗಳು ಪತ್ತೆಯಾಗಿದ್ದವು. ಸತತ 30 ಗಂಟೆ ಶೋಧ ಮುಕ್ತಾಯ ಬಳಿಕ ಮಹಜರು ಮಾಡಿದ ಸ್ಥಿರಾಸ್ತಿ-ಚರಾಸ್ತಿ ಪರಿಶೀಲಿಸಿದಾಗ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಜಿತ್ ರೈ ಅವರನ್ನು ಅಧಿಕಾರಿಗಳು ಬಂಧಿಸಿದ್ದರು. ನಾಳೆ ಬೆಳಗ್ಗೆ 11 ಗಂಟೆಯೊಳಗೆ ನ್ಯಾಯಾಲಯಕ್ಕೆ ಹಾಜರುಪಡಿಸಿ 10 ದಿನಗಳ ಕಾಲ ಅಜಿತ್ ಅವರನ್ನು ಪೊಲೀಸ್ ವಶಕ್ಕೆ ಪಡೆಯಲು ನಿರ್ಧರಿಸಿದ್ದಾರೆ.
ನಾಲ್ವರಿಗೆ ನೋಟಿಸ್ ಜಾರಿ :ದಾಳಿ ವೇಳೆ ಪತ್ತೆಯಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನು ಪತ್ರಗಳು ಬೇನಾಮಿಗಳ ಹೆಸರಿನಲ್ಲಿ ಇರುವುದನ್ನು ತನಿಖಾಧಿಕಾರಿಗಳು ಕಂಡುಕೊಂಡಿದ್ದರು. ಅಜಿತ್ ಸಹೋದರ ಆಶಿಕ್ ರೈ, ಸ್ನೇಹಿತ ಗೌರವ್, ಹರ್ಷವರ್ಧನ್, ನವೀನ್ ಹಾಗೂ ಅಜಿತ್ ಸಹೋದರನಿಗೆ ನೋಟಿಸ್ ಜಾರಿ ಮಾಡಿರುವ ಅಧಿಕಾರಿಗಳು ನಾಳೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಅಶೋಕ್ ಮಾಹಿತಿ ನೀಡಿದ್ದಾರೆ.