ಬೆಂಗಳೂರು: ನಗದು ಹಾಗೂ ಚೆಕ್ ರೂಪದಲ್ಲಿ ಲಂಚ ಸ್ವೀಕರಿಸುತ್ತಿದ್ದ ದಾಸನಪುರದ ಕಂದಾಯ ನಿರೀಕ್ಷಕ ಮತ್ತು ಮತ್ತು ಆತನ ಆಪ್ತನನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಕಂದಾಯ ನಿರೀಕ್ಷಕನನ್ನು ವಸಂತ್ ಎಂದು ಗುರುತಿಸಲಾಗಿದೆ. ವಸಂತ್ 3.5 ಲಕ್ಷ ರೂ. ನಗದು ಹಾಗೂ 4 ಲಕ್ಷ ಚೆಕ್ ರೂಪದಲ್ಲಿ ಪಡೆದಿದ್ದ ಎಂದು ತಿಳಿದುಬಂದಿದೆ.
ಕಂದಾಯ ನಿರೀಕ್ಷಕ ವಸಂತ್ ಅವರು ಬೆಟ್ಟಸ್ವಾಮಿ ಗೌಡ ಎಂಬುವವರಿಗೆ ಖಾತೆ ಪೋಡಿ ಮಾಡಿ ಕೊಡಲು 28 ಲಕ್ಷ ರೂ ಹಣಕ್ಕೆ ಬೇಡಿಕೆಯಿಟ್ಟಿದ್ದ. ಇದರಲ್ಲಿ ಮೊದಲೇ ಚೆಕ್ ರೂಪದಲ್ಲಿ 4 ಲಕ್ಷ ರೂ. ಹಣವನ್ನು ಪಡೆದಿದ್ದ. ಬಳಿಕ ಬುಧವಾರ ಖಾಸಗಿ ಹೋಟೆಲ್‍ನಲ್ಲಿ 3.5 ಲಕ್ಷ ರೂ. ಪಡೆಯುತ್ತಿದ್ದಾಗ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಅಧಿಕಾರಿಗಳು ವಸಂತ್ ಹಾಗೂ ಆತನ ಆಪ್ತನನ್ನು ರೆಡ್‍ಹ್ಯಾಂಡ್ ಆಗಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಯು ಹಣವನ್ನು ಮನೆಯಲ್ಲಿ ಇಟ್ಟಿರುವುದಾಗಿ ಹೇಳಿದ್ದು, ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿ 9 ಲಕ್ಷ ರೂ. ಹಣವನ್ನು ವಶಕ್ಕೆ ಪಡೆದಿದ್ದಾರೆ.
ಇತ್ತೀಚಿನ ಪ್ರಕರಣಗಳು- ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ : ಕಳೆದ ಅಕ್ಟೋಬರ್ 30ರಂದು ಆದಾಯಕ್ಕೂ ಮೀರಿ ಅಧಿಕ ಗಳಿಕೆ, ಅಕ್ರಮ ಆಸ್ತಿ ಸಂಗ್ರಹಣೆ ಆರೋಪದಡಿ ವಿವಿಧ ಇಲಾಖೆಗಳ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಲೋಕಾಯುಕ್ತ ಪೊಲೀಸರು ಏಕಕಾಲಕ್ಕೆ ಬೆಂಗಳೂರು ಸೇರಿ ರಾಜ್ಯಾದ್ಯಂತ 17 ಸರ್ಕಾರಿ ಅಧಿಕಾರಿಗಳ ಕಚೇರಿ ಮತ್ತು ಸಂಬಂಧಿಕರ ನಿವಾಸ ಸೇರಿ 90 ಕಡೆಗಳಲ್ಲಿ ದಾಳಿ ಮಾಡಿ ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದರು.