ಬೆಂಗಳೂರು:ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್‌ಡಿಎಲ್) ರಾಸಾಯನಿಕ ಪೂರೈಸುವ ಟೆಂಡರ್ ನೀಡಲು 40 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದ ಪ್ರಶಾಂತ್ ಮಾಡಾಳ್ ಅವರನ್ನು ನಿನ್ನೆ ಬಂಧಿಸಿದ್ದ ಲೋಕಾಯುಕ್ತ ಅಧಿಕಾರಿಗಳು ತಡರಾತ್ರಿ ಮಿಂಚಿನ ಕಾರ್ಯಾಚರಣೆ ಕೈಗೊಂಡಿದ್ದರು. ಬೆಂಗಳೂರು ಜಲಮಂಡಳಿಯಲ್ಲಿ ಚೀಫ್ ಅಕೌಂಟೆಂಟ್ ಆಗಿರುವ ಪ್ರಶಾಂತ್ ಮಾಡಾಳ್ ಹಾಗೂ ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್.ಎಂ. ಅವರ ಮನೆಯಲ್ಲಿ ತನಿಖಾಧಿಕಾರಿಗಳು ಶೋಧ ತೀವ್ರಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಶಾಂತ್ ಮಾಡಾಳ್ ಮನೆಯಲ್ಲಿ 6 ಕೋಟಿ ರೂ. ಜಪ್ತಿ ಮಾಡಲಾಗಿದೆ.
ಕೆಎಸ್‌ಡಿಎಲ್ ಅಧ್ಯಕ್ಷ ಹಾಗೂ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಪ್ರಶಾಂತ್ ಮಾಡಾಳ್ ಟೆಂಡರ್ ಆಕಾಂಕ್ಷಿಯೊಬ್ಬರಿಂದ 80 ಲಕ್ಷ ಹಣಕ್ಕೆ ಬೇಡಿಕೆಯಿಟ್ಟು 40 ಲಕ್ಷ ರೂ ಸ್ವೀಕರಿಸುತ್ತಿದ್ದಾಗ ಕ್ರೆಸೆಂಟ್ ರಸ್ತೆಯ ಅವರ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಇಂದು ಬೆಳಗಿನ ಜಾವ 4 ಗಂಟೆವರೆಗೂ ಶೋಧ ನಡೆಸಿರುವ ಅಧಿಕಾರಿಗಳು ಪ್ರಶಾಂತ್ ಮಾಡಾಳ್, ಅವರ ಸಂಬಂಧಿ ಸಿದ್ದೇಶ್, ಅಕೌಂಟೆಂಟ್ ಸುರೇಂದ್ರ, ಹಣ ಕೊಡಲು ಬಂದಿದ್ದ ನಿಕೋಲಸ್ ಹಾಗೂ ಗಂಗಾಧರ್ ಎಂಬಾತನನ್ನು ಬಂಧಿಸಿದ್ದಾರೆ.
14 ದಿನ ನ್ಯಾಯಾಂಗ ಬಂಧನ:ಬಂಧಿತ ಪ್ರಶಾಂತ್ ಮಾಡಾಳ್ ಸೇರಿ ಐವರಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಶುಕ್ರವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಪ್ರಶಾಂತ್ರನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ವಿಚಾರಣೆ, ಪರಿಶೀಲನೆ ಇನ್ನೂ ಬಾಕಿ ಇರುವ ಹಿನ್ನೆಲೆ ಮತ್ತೆ ಕಸ್ಟಡಿಗೆ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದರು. ಸದ್ಯ ಪ್ರಶಾಂತ್ ಮಾಡಾಳ್ ಸೇರಿ ಐವರಿಗೂ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.