ದೊಡ್ಡಬಳ್ಳಾಪುರ : ನಗರದ ವಿಭಾಗಾಧಿಕಾರಿ ಕಚೇರಿಯಲ್ಲಿರುವ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ವಲಯದ ಎಸ್ಪಿ ಡಾ.ರಾಮ್ ಅರಸಿದ್ದಿ, ಡಿವೈಎಸ್ಪಿ ವೀರೇಂದ್ರ ನೇತೃತ್ವದಲ್ಲಿ 15 ಜನರ ತಂಡ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಮೇಲೆ ಕೇಳಿ ಬಂದ ಆರೋಪಗಳ ಮೇಲೆ ದಾಳಿ ನಡೆಸಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಕಡತಗಳ ತಪಾಸಣೆ ನಡೆಸಿದೆ.
ಕಚೇರಿಯ ಬಾಗಿಲು ಬಂದ್ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು, ಸಿಬ್ಬಂದಿ ತಪಾಸಣೆ ಮಾಡಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ರೈಡ್ ಆಗಿರುವ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನಿರೀಕ್ಷೆ ಮಾಡಲಾಗುತ್ತಿದೆ. ದೊಡ್ಡಬಳ್ಳಾಪುರ ಎಡಿಎಲ್ಆರ್ ಕಚೇರಿಗೆ ಖುದ್ದು ಲೋಕಾಯುಕ್ತ ನ್ಯಾಯಾಧೀಶೆ ಹಾಗೂ ಡೆಪ್ಯುಟಿ ರಿಜಿಸ್ಟ್ರಾರ್ ಅನಿತಾ ಅವರ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ದಾಳಿ ವೇಳೆ ಸಾರ್ವಜನಿಕರೊಬ್ಬರು ಜೋರು ದನಿಯಲ್ಲಿ ಅಧಿಕಾರಿಗಳ ವಿಳಂಬ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ. ಪೋಡಿ ದರಕಾಸ್ತು ಮಾಡಿಸಲು ಅರ್ಜಿ ನೀಡಿ ಎರಡು ವರ್ಷ ಕಳೆದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ಆ ಸಾರ್ವಜನಿಕ ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಡಿವೈಎಸ್ಪಿ ವೀರೇಂದ್ರ ಅವರು ಆ ವ್ಯಕ್ತಿಯನ್ನು ಮನವೊಲಿಸಿ, ಅವರ ಸಮಸ್ಯೆ ಆಲಿಸಿ ತಮ್ಮ ದೂರಿನ ಬಗ್ಗೆ ವಿವರಿಸುವಂತೆ ಕೇಳಿದರು. ಅಲ್ಲದೇ ಅವರನ್ನು ಸಮಾಧಾನ ಕೂಡಾ ಮಾಡಿದರು ಎಂದು ಹೇಳಲಾಗಿದೆ.