ಬೆಂಗಳೂರು:ರಾಜ್ಯದಲ್ಲಿ ಲೋಕಾಯುಕ್ತ ಮರುಸ್ಥಾಪನೆ ಬೆನ್ನಲ್ಲೇ ಭ್ರಷ್ಟರ ಬೇಟೆಗೆ ಇಳಿದಿದೆ. ಪಶ್ಚಿಮ ವಿಭಾಗ ಬಿಬಿಎಂಪಿ ಕಚೇರಿ ಮೇಲೆ ಇಂದು ಲೋಕಾಯುಕ್ತ ಸಂಸ್ಥೆ ದಾಳಿ ಮಾಡಿದೆ. ಖಾತೆ ಬದಲಾವಣೆಗಾಗಿ ದೂರುದಾರರಿಂದ ಲಂಚ ಪಡೆಯುತ್ತಿದ್ದ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಹಾಗೂ ಆಪ್ತ ಸಹಾಯಕ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಜಂಟಿ ಆಯುಕ್ತ ಶ್ರೀನಿವಾಸ್ ಹಾಗೂ ಎಫ್ಡಿಎ ಸಿಬ್ಬಂದಿ ಉಮೇಶ್ ಬಂಧಿತರಾಗಿದ್ದಾರೆ. ಇಂದು ಮಂಜುನಾಥ್ ಎಂಬುವರಿಂದ ನಾಲ್ಕು ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.
ಖಾತೆಗಳನ್ನು ಬದಲಾಯಿಸುವಂತೆ ಪಶ್ಚಿಮ ವಿಭಾಗದ ಕಚೇರಿಗೆ ಮಂಜುನಾಥ್ ಅರ್ಜಿ ಹಾಕಿದ್ದರು. ಖಾತೆ ಬದಲಾಯಿಸಿಕೊಡಲು 12 ಲಕ್ಷ ಹಣ ನೀಡುವಂತೆ ಶ್ರೀನಿವಾಸ್ ಡಿಮ್ಯಾಂಡ್ ಮಾಡಿದ್ದರಂತೆ. ಮಾತುಕತೆ ಬಳಿಕ 4 ಲಕ್ಷಕ್ಕೆ ಡೀಲ್ ಕುದುರಿಸಿ ಇಂದು ದೂರುದಾರರಿಂದ ಹಣ ಪಡೆಯುವಾಗ ಲೋಕಾಯುಕ್ತ ಎಸ್ಪಿ ಅಶೋಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದೆ.