ಬೆಂಗಳೂರು: ಬಿಬಿಎಂಪಿಯ ಕಂದಾಯ ಹಾಗೂ ನಗರ ಯೋಜನಾ ವಿಭಾಗಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಕುರಿತ ದೂರುಗಳ ಆಧರಿಸಿ, ನಗರದ 45 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಡತ ವಿಲೇವಾರಿಗೆ ವಿಳಂಬ, ಖಾತಾ ಬದಲಾವಣೆ ಹಾಗೂ ಕಟ್ಟಡ ನಿರ್ಮಾಣಕ್ಕೆ ನಿರಾಕ್ಷೇಪಣ ಪತ್ರ ಪಡೆಯಲು ಲಂಚ ಕೇಳುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡ ಬಿಬಿಎಂಪಿಯ ಎಲ್ಲಾ ವಲಯಗಳ ಆರ್ಓ, ಎಆರ್ಓ, ಎಡಿಟಿಪಿ ಕಚೇರಿಗಳು ಸೇರಿದಂತೆ 45 ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ.
ದಾಖಲೆ ಹಾಗೂ ಕಡತಗಳ ಪರಿಶೀಲನೆ: ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಆರ್ಓ, ಎಆರ್ಓ, ಎಡಿಟಿಪಿ ಕಚೇರಿಗಳು, ರೆವಿನ್ಯೂ ಮತ್ತು ನಗರ ಯೋಜನಾ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಇಂದು ಸಂಜೆ ನಾಲ್ಕು ಗಂಟೆಗೆ ದಾಳಿ ನಡೆಸಿರುವ ಲೋಕಾ ಅಧಿಕಾರಿಗಳು, ದಾಖಲೆ ಹಾಗೂ ಕಡತಗಳ ಪರಿಶೀಲನೆ ನಡೆಸ್ತಿದ್ದಾರೆ.
ಲೋಕಾಯುಕ್ತ ಬಲೆಗೆ ಡಿಡಿಪಿಐ, ಎಸ್‌ಡಿಎ: ಇನ್ನೊಂದೆಡೆ ಹಾವೇರಿ ಜಿಲ್ಲೆಯ ಡಿಡಿಪಿಐ ಕಚೇರಿಯಲ್ಲಿ ನಿವೃತ್ತ ಶಿಕ್ಷಕನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹಾಗೂ ಎಸ್‌ಡಿಎ ಸಿಬ್ಬಂದಿಯೊಬ್ಬರು ಲೋಕಾಯುಕ್ತರ ಬಲೆಗೆ (ಜುಲೈ 21-2023) ಸಿಕ್ಕಿಬಿದ್ದಿದ್ದರು.
ಹಾವೇರಿ ಜಿಲ್ಲಾ ಡಿಡಿಪಿಐ ಅಂದಾನೆಪ್ಪ ವಡಗೇರಿ ಮತ್ತು ದ್ವಿತೀಯ ದರ್ಜೆ ಸಹಾಯಕ ದತ್ತಾತ್ರೇಯ ಕುಂಟೆ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು ಎಂಬುದು ತಿಳಿದುಬಂದಿತ್ತು. ಏಳು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ ತಕ್ಷಣ ಡಿಡಿಪಿಐ ಮತ್ತು ಎಸ್ಡಿಸಿ ಸಿಬ್ಬಂದಿಯನ್ನು ವಶಕ್ಕೆ ಪಡೆದರು. ನಿವೃತ್ತ ಶಿಕ್ಷಕ ಮೊಹಮ್ಮದ ಜಾಫರ್ ಲೋದಿ ಅವರ ಫೈಲ್ ಅನ್ನು ಎಜಿ ಕಚೇರಿಗೆ ಕಳಿಸಲು ಡಿಡಿಪಿಐ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿತ್ತು.
ಇದನ್ನೂ ಓದಿ:ಲಂಚ ಪಡೆಯುವಾಗ ಸಿಕ್ಕಿಬಿದ್ದು ಸಾಕ್ಷಿ ನಾಶಕ್ಕಾಗಿ 4,500 ರೂಪಾಯಿ ನೋಟುಗಳನ್ನೇ ನುಂಗಿದ ಚಾಲಾಕಿ ಅಧಿಕಾರಿ!
ರಟ್ಟಿಹಳ್ಳಿ ನಿವೃತ್ತ ಶಿಕ್ಷಕ ಮೊಹಮ್ಮದ ಜಾಫರ್ ಲೋದಿ ಎಂಬುವರ ಬಳಿ 7 ಸಾವಿರ ರೂಪಾಯಿ ಲಂಚವನ್ನು ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ಮಾಡಿ, ಹಾವೇರಿ ಜಿಲ್ಲಾ ಡಿಡಿಪಿಐ ಅಂದಾನೆಪ್ಪ ವಡಗೇರಿ ಮತ್ತು ದ್ವಿತೀಯ ದರ್ಜೆ ಸಹಾಯಕ ದತ್ತಾತ್ರೇಯ ಕುಂಟೆ ಅವರನ್ನು ಬಲೆಗೆ ಕೆಡವಿದ್ದರು.
ಲಂಚ ಸ್ವೀಕರಿಸುವ ಕುರಿತು ಪ್ರಕರಣ:ನಿವೃತ್ತ ಶಿಕ್ಷಕ ನಿಖರ ಮಾಹಿತಿ ನೀಡಿದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಹಾವೇರಿ ಲೋಕಾಯುಕ್ತ ಕಚೇರಿಯಲ್ಲಿ ಡಿಡಿಪಿಐ, ಎಸ್‌ಡಿಎ ಲಂಚ ಸ್ವೀಕರಿಸುವ ಕುರಿತು ಪ್ರಕರಣ ದಾಖಲಾಗಿತ್ತು. ಎಸ್‌ಡಿಎ ದತ್ತಾತ್ರೇಯ ಕುಂಟೆ ಸಿಬ್ಬಂದಿ ಡಿಡಿಪಿಐಗೆ ಲಂಚ ಪಡೆಯಲು ಸಹಾಯ ಮಾಡುತ್ತಿದ್ದರು ಎನ್ನಲಾಗಿತ್ತು.
ಇದನ್ನೂ ಓದಿ:ಲೋಕಾಯುಕ್ತ ಬಲೆಗೆ ಡಿಡಿಪಿಐ, ಎಸ್‌ಡಿಎ: ನಿವೃತ್ತ ಶಿಕ್ಷಕನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ