ಬೆಂಗಳೂರು:ವ್ಯಾಪಕ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರ ನೇತೃತ್ವದ ತಂಡ ನಗರದಲ್ಲಿನ 12 ಪ್ರಾದೇಶಿಕ ಸಾರಿಗೆ ಕಚೇರಿಗಳ (ಆರ್ಟಿಓ) ಮೇಲೆ ದಾಳಿ ನಡೆಸಿದೆ. ಬೆಂಗಳೂರಿನಲ್ಲಿ ಆರ್ಟಿಓ ಕಚೇರಿಗಳಲ್ಲಿ ನಿರಂತರ ಅವ್ಯವಹಾರ ಹಾಗೂ ಅಕ್ರಮ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆ, ಗೌಪ್ಯ ಮಾಹಿತಿ ಆಧರಿಸಿ ಬುಧವಾರ ಖುದ್ದು ಲೋಕಾಯುಕ್ತ ನ್ಯಾಯಮೂರ್ತಿಗಳು ಆರ್ಟಿಓ ಕಚೇರಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು.
ಜಯನಗರ ಹಾಗೂ ರಾಜಾಜಿನಗರದ ಆರ್ಟಿಓ ಕಚೇರಿಗಳಿಗೆ ಲೋಕಾಯುಕ್ತರು ತೆರಳಿ ತಪಾಸಣೆ ನಡೆಸಿದರು. ಉಪ ಲೋಕಾಯುಕ್ತ ಕೆ ಎನ್ ಫಣೀಂದ್ರ ಅವರು ಯಶವಂತಪುರ ಆರ್ಟಿಓ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಜೊತೆಗೆ ಯಲಹಂಕ, ಇಂದಿರಾನಗರ, ಕೆ ಆರ್ ಪುರ, ಹೆಚ್ಎಸ್ಆರ್ ಲೇಔಟ್ ಸೇರಿ ನಗರದ 12 ಪ್ರಾದೇಶಿಕ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
ಪರಿಶೀಲನೆ ವೇಳೆ, ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಹನದ ದಾಖಲಾತಿ ನೀಡದೇ ವಿಳಂಬ ಧೋರಣೆ, ಹೊಸ ನೋಂದಣಿ ಮಾಡಿಸದೇ ಬಾಕಿ ಉಳಿಸಿಕೊಂಡಿರುವುದು, ಸ್ಥಳೀಯ ಏಜೆಂಟರೊಂದಿಗೆ ಸಿಬ್ಬಂದಿ ಭಾಗಿಯಾಗಿ ಅವ್ಯವಹಾರದಲ್ಲಿ ಶಾಮೀಲು ಸೇರಿದಂತೆ ವಿವಿಧ ರೀತಿಯ ಅಕ್ರಮ ಎಸಗಿರುತ್ತಿರುವುದು ಕಂಡು ಬಂದಿದೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೇವನಹಳ್ಳಿಯಲ್ಲೂ ಲೋಕಾಯುಕ್ತ ದಾಳಿ:ಸಾರ್ವಜನಿಕರ ದೂರಿನ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದೇವನಹಳ್ಳಿ ಆರ್ಟಿಓ ಕಚೇರಿ ಮೇಲೆಯೂ ಇಂದು ದಾಳಿ ನಡೆಸಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಪವನ್ ನಜೀರ್ ನೇತೃತ್ವದಲ್ಲಿ ಓರ್ವ ಡಿವೈಎಸ್ಪಿ ಮತ್ತು ಇಬ್ಬರು ಇನ್ಸ್ಪೆಕ್ಟರ್ಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಸತತ 2 ಗಂಟೆಗೂ ಅಧಿಕ ಕಾಲ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಆರ್ಟಿಒ ಹಾಗೂ ಇತರ ಅಧಿಕಾರಿಗಳನ್ನು ಕೂರಿಸಿಕೊಂಡು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ತನಿಖೆ ವಿಳಂಬಕ್ಕೆ.. ಲೋಕಾಯುಕ್ತ ಸಂಸ್ಥೆಯನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಲು ಹೈಕೋರ್ಟ್ ಸೂಚನೆ