ಬೆಂಗಳೂರು:ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಡಿ ಕೆ ಆರ್ ಪುರಂ ತಾಲೂಕು ಕಚೇರಿ ಸರ್ವೆ ಸೂಪರ್ವೈಸರ್ ಕೆ ಟಿ ಶ್ರೀನಿವಾಸ್ ಮೂರ್ತಿ ಅವರ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಕಲ್ಕೆರೆ ಬಳಿಯಿರುವ ಕೆ ಟಿ ಶ್ರೀನಿವಾಸ್ ನಿವಾಸ, ಹೆಣ್ಣೂರಿನಲ್ಲಿರುವ ಸಹೋದರಿ ನಿವಾಸ, ತುಮಕೂರಿನಲ್ಲಿರುವ ಸಹೋದರಿಯ ನಿವಾಸ, ಸೇರಿದಂತೆ ಸುಮಾರು 14 ಸ್ಥಳಗಳಲ್ಲಿ ಪರಿಶೀಲನೆ ಮುಂದುವರೆದಿದೆ.
ದಾಳಿ ವೇಳೆ ಕೆ ಟಿ ಶ್ರೀನಿವಾಸ್ ಅಂಧ್ರಳ್ಳಿಯಲ್ಲಿ ನಿವೇಶನ, ಅವರ ಪತ್ನಿ ರಾಯಪುರದಲ್ಲಿ ಭೋಗ್ಯಕ್ಕೆ ಪಡೆದಿರುವ ಜಮೀನು, ಪತ್ನಿ ಹಾಗೂ ಸಹೋದರಿಯ ಸಹಭಾಗಿತ್ವದಲ್ಲಿ ಹೊಂದಿರುವ ಹೋಟೆಲ್ ಮತ್ತು ಬೋರ್ಡಿಂಗ್ಸ್, 5ಕ್ಕೂ ಅಧಿಕ ಅಬಕಾರಿ ಲೈಸೆನ್ಸ್, ಹೆಣ್ಣೂರು ಗ್ರಾಮದಲ್ಲಿ 2 ಸಾವಿರ ಚದರ್ ಮೀಟರ್ ವಿಸ್ತೀರ್ಣದ ಒಂದು ನಿವೇಶನ, ನಿರ್ಮಾಣ ಹಂತದ ಕಟ್ಟಡ, ಕೊತ್ತನೂರು ಗ್ರಾಮದಲ್ಲಿ ನಿವೇಶನ, ಲಕ್ಕೇನಹಳ್ಳಿಯಲ್ಲಿ ಒಂದು ಹೊಸ ಮನೆ, 5ಕ್ಕೂ ಅಧಿಕ ಅಬಕಾರಿ ಲೈಸೆನ್ಸ್ ಹೊಂದಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
9 ಜಿಲ್ಲೆಯ 14 ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು: ಆಗಸ್ಟ್ 17 ರಂದು ರಾಜ್ಯದ 9 ಜಿಲ್ಲೆಯ 14 ಸರ್ಕಾರಿ ಅಧಿಕಾರಿಗಳ ನಿವಾಸ ಮತ್ತು ಕಚೇರಿ ಸೇರಿ 45ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ನಗದು ಹಾಗೂ ಆಸ್ತಿ-ಪಾಸ್ತಿ ಪತ್ತೆ ಮಾಡಿದ್ದರು. ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ರಾಜ್ಯದ 9 ಜಿಲ್ಲೆಯ 14 ಸರ್ಕಾರಿ ಅಧಿಕಾರಿಗಳ ನಿವಾಸ ಮತ್ತು ಕಚೇರಿ ಸೇರಿ 45ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳು ಪರಿಶೀಲನೆ ನಡೆಸಿದ್ದರು.