ಬೆಂಗಳೂರು:ಚುನಾವಣೆಗೂ ಮುನ್ನ ಬೆಂಗಳೂರಿನ ಕೆಲವೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ. ಪ್ರಮುಖವಾಗಿ ಯಲಹಂಕದಲ್ಲಿರುವ ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯರ ಯಲಹಂಕ, ಮಹಾಲಕ್ಷ್ಮಿ ಲೇಔಟ್ನ ನಿವಾಸಗಳಲ್ಲಿ ಲೋಕಾಯುಕ್ತ ಪರಿಶೀಲನೆ ನಡೆಸಲಾಗುತ್ತಿದೆ. ಲೋಕಾಯುಕ್ತ ಎಸ್ಪಿ ಅಶೋಕ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು, ಗಂಗಾಧರಯ್ಯರ ಮನೆಯಲ್ಲಿ ಬೆಳ್ಳಿ, ಬಂಗಾರ, ಸೀರೆ, ಆಸ್ತಿ ಪತ್ರಗಳು, ಫಾರಿನ್ ಕರೆನ್ಸಿ ಪತ್ತೆಯಾಗಿದೆ. ಅಂದಾಜು 2 ಕೋಟಿಗೂ ಅಧಿಕ ಮೌಲ್ಯದ ಸಂಪತ್ತು ಪತ್ತೆಯಾಗಿದ್ದು, ಅಧಿಕೃತ ಮಾಹಿತಿ ಲಭ್ಯವಾಗಬೇಕಿದೆ. ಚುನಾವಣೆಯ ಕಾರ್ಯಕ್ಕೂ ಸಹ ನೇಮಕವಾಗಿದ್ದ ಗಂಗಾಧರಯ್ಯರ ಕಾರಿನ ಮೇಲೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಸ್ಟಿಕ್ಕರ್ ಸಹ ಪತ್ತೆಯಾಗಿದೆ. ಸದ್ಯ ಹಣದ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಗಂಗಾಧರಯ್ಯ ಸಂಪತ್ತಿನ ವಿವರ: ಯಲಹಂಕ, ಜೆ.ಸಿ.ನಗರ, ಹೆಬ್ಬಾಳದಲ್ಲಿ ಫ್ಲ್ಯಾಟ್ಗಳ ಸಹಿತ 12 ಮನೆಗಳು, ನೆಲಮಂಗಲದಲ್ಲಿ 1.5 ಕೋಟಿ ಮೌಲ್ಯದ 5 ಎಕರೆ ಜಮೀನು, ಮಲ್ಲೇಶ್ವರಂನಲ್ಲಿ 3.65 ಕೋಟಿ ಮೌಲ್ಯದ ನಿವೇಶನ, 1 ಕೋಟಿ ಮೌಲ್ಯದ ವಜ್ರ, ಚಿನ್ನಾಭರಣಗಳು ಹಾಗೂ 1.40 ಕೋಟಿ ರೂ ನಗದು ಪತ್ತೆಯಾಗಿದ್ದು, ಲೋಕಾಯುಕ್ತ ಪೊಲೀಸರಿಂದ ಕಾರ್ಯಾಚರಣೆ ಮುಂದುವರೆದಿದೆ.
ದಾವಣಗೆರೆ ಮತ್ತು ಶಿವಮೊಗ್ಗದಲ್ಲಿಯೂ ದಾಳಿ: ಕಳೆದ ಒಂದು ವಾರದ ಹಿಂದಷ್ಟೆ ಬಿಜೆಪಿ ಸೇರ್ಪಡೆಗೊಂಡಿದ್ದ ನಿವೃತ್ತ ಐಎಫ್ಎಸ್ ಅಧಿಕಾರಿ ಮನೆ ಹಾಗೂ ಇತರಡೆ ಕೂಡ ಲೋಕಾಯುಕ್ತ ದಾಳಿ ನಡೆಸಿದೆ. ಶಿವಮೊಗ್ಗ ವನ್ಯಜೀವಿ ವಿಭಾಗದ ನಿವೃತ್ತ ಡಿಎಫ್ಒ ಐ.ಎಂ.ನಾಗರಾಜ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದೆ. 2022ರ ಡಿಸಂಬರ್ 31 ರಂದು ತಮ್ಮ ಹುದ್ದೆಯಿಂದ ನಾಗರಾಜದ ನಿವೃತ್ತರಾಗಿದ್ದರು. ಇವರ ಮೇಲೆ ಅಕ್ರಮ ಆಸ್ತಿ ಗಳಿಕೆ ದೂರು ಕೇಳಿ ಬಂದ ಕಾರಣ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಶಿವಮೊಗ್ಗದ ಗೋಪಾಲಗೌಡ ಬಡಾವಣೆ, ಲಗಾನ್ ಮಂದಿರದ ಹಿಂಭಾಗದ ವಿಸ್ಮಯ ಮನೆ ಮೇಲೆ ದಾಳಿ ನಡೆಸಲಾಗಿದೆ. ಅಲ್ಲದೇ ಸಾಗರ ರಸ್ತೆಯ ಪೆಟ್ರೋಲ್ ಬಂಕ್ ಸೇರಿದಂತೆ ದಾವಣಗೆರೆ ಜಿಲ್ಲೆ ಹೂನ್ನಾಳಿಯಲ್ಲೂ ಸಹ ದಾಳಿ ನಡೆಸಲಾಗಿದೆ. ದಾಳಿಯ ವೇಳೆ ಹಲವು ಮಹತ್ವ ದಾಖಲೆಗಳು ಪತ್ತೆಯಾಗಿವೆ ಎನ್ನಲಾಗಿದೆ.
ಇನ್ನೂ ಈ ಹಿಂದೆ ಶಿವಮೊಗ್ಗದ ತಹಶೀಲ್ದಾರ್ ಆಗಿದ್ದ, ಹಾಲಿ ಚಿತ್ರದುರ್ಗ ಜಿಲ್ಲೆ ಹೊಳಲ್ಕರೆ ತಹಶೀಲ್ದಾರ್ ಆಗಿರುವ ನಾಗರಾಜ್ ಅವರ ಮನೆ ಮೇಲೆಯೂ ಲೋಕಾಯುಕ್ತ ದಾಳಿಯಾಗಿದೆ. ಅವರ ಸಂಬಂಧಿಕರ ಮನೆ ಶಿಕಾರಿಪುರದ ಚನ್ನಕೇಶವ ನಗರದಲ್ಲಿ ಈ ದಾಳಿ ನಡೆಸಲಾಗಿದೆ. ಒಂದೆಡೆ ಚಿತ್ರದುರ್ಗ ಲೋಕಾಯುಕ್ತರಾದ ವಸಂತ ಕುಮಾರ ನೇತೃತ್ವದಲ್ಲಿ 7 ಕಡೆ ದಾಳಿ ನಡೆದರೆ, ಮತ್ತೊಂದೆಡೆ ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತ್ರತ್ವದಲ್ಲಿ 20ಕ್ಕೂ ಹೆಚ್ಚು ಸಿಬ್ಬಂದಿಯಿಂದ ದಾಳಿ ನಡೆದಿದೆ.
ಬಳ್ಳಾರಿ: ಜೆಸ್ಕಾಂ ಎಇಇ ಆಗಿರುವ ಹುಸೇನ್ ಸಾಬ್ ಅವರ ಮನೆ ಮೇಲೂ ಲೋಕಾಯುಕ್ತ ದಾಳಿ ನಡೆಸಲಾಗಿದೆ. ಇಂದು ಬೆಳಗ್ಗೆ ಬೆಂಗಳೂರು ಮತ್ತು ಬಳ್ಳಾರಿಯ ಲೋಕಾಯುಕ್ತ ತಂಡಗಳು ಬಳ್ಳಾರಿ ಬುಡಾ ಕಾಂಪ್ಲೆಕ್ಸ್‌ನಲ್ಲಿರುವ ಕಚೇರಿ, ರಾಘವೇಂದ್ರ ಕಾಲೋನಿಯಲ್ಲಿರುವ ಮನೆ ಮತ್ತು ಹುಟ್ಟೂರು ಶಿಡಿಗಿನಮೊಳದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.