ಕರ್ನಾಟಕ

karnataka

ETV Bharat / state

ಲೋಕಾಯುಕ್ತ ಕಸ್ಟಡಿ ಅವಧಿ ಅಂತ್ಯ: ಶಾಸಕ ವಿರೂಪಾಕ್ಷಪ್ಪ ಮಾಡಾಳ್​ಗೆ ನ್ಯಾಯಾಂಗ ಬಂಧನ - ಶಾಸಕ ಮಾಡಾಳ್​ ವಿರೂಪಾಕ್ಷಪ್ಪ

ಲೋಕಾಯುಕ್ತ ದಾಳಿ ಪ್ರಕರಣದಲ್ಲಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್​ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶಿಸಿದೆ.

MLA Madal Virupakshappa
ಶಾಸಕ ಮಾಡಾಳ್​ ವಿರೂಪಾಕ್ಷಪ್ಪ

By

Published : Apr 1, 2023, 5:59 PM IST

Updated : Apr 1, 2023, 7:38 PM IST

ಬೆಂಗಳೂರು:ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರ ಲೋಕಾಯುಕ್ತ ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಏಪ್ರಿಲ್ 11 ರವರೆಗೆ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶ ಪ್ರಕಟಿಸಿದೆ.

ಇದೇ ವೇಳೆ ವಿರೂಪಾಕ್ಷಪ್ಪ ಮಾಡಾಳ್ ಪರ ಜಾಮೀನು ಅರ್ಜಿ ಸಲ್ಲಿಕೆಯಾಗಿದ್ದು, ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತಕ್ಕೆ ಸೂಚಿಸಲಾಗಿದೆ. ಏಪ್ರಿಲ್ 6 ರಂದು ಜಾಮೀನು ಅರ್ಜಿ ವಿಚಾರಣೆ ಮುಂದೂಡಿ‌ ನ್ಯಾಯಾಲಯ ಆದೇಶಿಸಿದೆ. ಇದೇ ವೇಳೆ ಆರೋಗ್ಯ ಸರಿಯಿಲ್ಲದ ಕಾರಣ ಜೈಲಿನಲ್ಲಿ ಮನೆ ಊಟ, ಬಿಸಿ ನೀರು ನೀಡುವಂತೆ ಮಾಡಾಳ್​ ಪರ ವಕೀಲರು ಮನವಿ ಮಾಡಿದರು. ಆರೋಗ್ಯ ಸರಿಯಿಲ್ಲದ ಕಾರಣ ಮನೆಯೂಟ ನೀಡಬೇಕು. ಹಾಗೂ ಹೊರಗಡೆ ತಪಾಸಣೆ ನಡೆಸಿದ ಮೆಡಿಕಲ್ ವರದಿಯೂ ಇದೆ. ಅದರಂತೆ ಮೆಡಿಸಿನ್ ತೆಗೆದುಕೊಳ್ಳಬೇಕಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಜೈಲಿನ ನಿಯಮದ ಪ್ರಕಾರ ಅಲ್ಲಿನ ಮ್ಯಾನ್ಯುಯಲ್​ನಂತೆ ಊಟ ಕೊಡುತ್ತಾರೆ ಎಂದು ತಿಳಿಸಿದರು. ಬಳಿಕ ನ್ಯಾಯಾಂಗ ಬಂಧನ ಹಿನ್ನೆಲೆಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಪೊಲೀಸ್ ವಾಹನದಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಅರ್ಜಿ ರದ್ದಾದ ಹಿನ್ನೆಲೆಯಲ್ಲಿ ಮಾರ್ಚ್ 27 ರಂದು ಲೋಕಾಯುಕ್ತ ಪೊಲೀಸರು ವಿರೂಪಾಕ್ಷಪ್ಪ ಮಾಡಾಳ್ ಅವರನ್ನು ಬಂಧಿಸಿದ್ದರು.

ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ಕಚ್ಚಾ ವಸ್ತುಗಳ ಪೂರೈಕೆ ಸಂಬಂಧ ಟೆಂಡರ್​ ವಿಚಾರವಾಗಿ ಟೆಂಡರ್​ ಆಕಾಂಕ್ಷಿಗಳಿಂದ ಶಾಸಕ ವಿರೂಪಾಕ್ಷಪ್ಪ ಮಾಡಳ್​ ಅವರ ಮಗ ಪ್ರಶಾಂತ್​ ಮಾಡಾಳ್ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು ಪ್ರಶಾಂತ್​ ಮಾಡಾಳ್​ ಅವರನ್ನು ಬಂಧಿಸಿದ್ದ ಅಧಿಕಾರಿಗಳು, ಅದೇ ದಿನ ಬೆಂಗಳೂರಿನಲ್ಲಿರುವ ಪ್ರಶಾಂತ್​ ಮಾಡಾಳ್​ ಅವರ ಮನೆ ಹಾಗೂ ಚನ್ನಗಿರಿ ತಾಲೂಕಿನಲ್ಲಿರುವ ಶಾಸಕ ವಿರೂಪಾಕ್ಷಪ್ಪ ಮಾಡಾಳ್​ ಅವರ ಮನೆಯಲ್ಲೂ ಶೋಧ ಕಾರ್ಯ ನಡೆಸಿತ್ತು. ದಾಳಿ ವೇಳೆ 8 ಕೋಟಿ ಹಣ ಪತ್ತೆಯಾಗಿತ್ತು.

ಪುತ್ರ ಪ್ರಶಾಂತ್​ ಮಾಡಾಳ್​ ಲಂಚ ಪ್ರಕರಣದಲ್ಲಿ ಬಂಧನವಾಗುತ್ತಿದ್ದಂತೆ ಶಾಸಕ ವಿರೂಪಾಕ್ಷಪ್ಪ ಮಾಡಾಳ್​ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಪತ್ರವನ್ನು ಮುಖ್ಯಮಂತ್ರಿಗೆ ಕಳುಹಿಸಿದ್ದರು. ನಂತರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ವಿರೂಪಾಕ್ಷಪ್ಪ ಮಾಡಾಳ್​ ಲೋಕಾಯುಕ್ತ ವಿಚಾರಣೆಗೆ ಹಾಜರಾಗಿದ್ದರು.

ನಂತರ ವಿರೂಪಾಕ್ಷಪ್ಪ ಮಾಡಾಳ್​ ಅರ್ಜಿ ವಿಚಾರಣೆ ಕೈಗೊಂಡ ಹೈಕೋರ್ಟ್​ ನಿರೀಕ್ಷಣಾ ಜಾಮೀನನ್ನು ವಜಾಗೊಳಿಸಿತ್ತು. ನಿರೀಕ್ಷಣಾ ಜಾಮೀನು ವಜಾಗೊಂಡ ಬೆನ್ನಲ್ಲೆ ಬೆಂಗಳೂರು ಕಡೆ ಹೋಗುತ್ತಿದ್ದ ಅವರನ್ನು ತುಮಕೂರು ಜಿಲ್ಲೆಯ ಕ್ಯಾತಸಂದ್ರ ಚೆಕ್​ಪೋಸ್ಟ್​ ಬಳಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಬಂಧನದ ನಂತರ ಅವರನ್ನು ಲೋಕಾಯುಕ್ತ ಪೊಲೀಸರು ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ವಿಶೇಷ ನ್ಯಾಯಾಲಯ ಮಾಡಾಳ್​ ಅವರನ್ನು ಐದು ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ನೀಡಿತ್ತು. ಇದೀಗ ಲೋಕಾಯುಕ್ತ ಕಸ್ಟಡಿ ಅವಧಿ ಮುಕ್ತಾಯಗೊಂಡಿದ್ದು, ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ:ಮಾಡಾಳ್‌ ಪ್ರಕರಣ: ಆಟೋಮಾಸ್ ಕಂಪನಿಯ ಪಾಲುದಾರರಿಗೆ ನಿರೀಕ್ಷಣಾ ಜಾಮೀನು

Last Updated : Apr 1, 2023, 7:38 PM IST

ABOUT THE AUTHOR

...view details