ಬೆಂಗಳೂರು: ಪ್ರಶಾಂತ್ ಮಾಡಾಳ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ಅವರ ತಂದೆ, ಶಾಸಕ ವಿರೂಪಾಕ್ಷಪ್ಪ ಮಾಡಾಳ್ಗೆ ನೋಟಿಸ್ ನೀಡಲು ಲೋಕಾಯುಕ್ತ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ಪುತ್ರನ ಬಂಧನದ ಬಳಿಕ ನೈತಿಕ ಹೊಣೆ ಹೊತ್ತು ಕೆಎಸ್ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದ ಬಳಿಕ ವಿರೂಪಾಕ್ಷಪ್ಪ ಮಾಡಾಳ್ ಕಾಣಿಸಿಕೊಂಡಿಲ್ಲ. ಹೀಗಾಗಿ, ಸಿಆರ್ಪಿಸಿ 41(a) ಅಡಿಯಲ್ಲಿ ನೋಟಿಸ್ ನೀಡಲು ಸಿದ್ಧತೆ ನಡೆಸಿರುವುದಾಗಿ ಲೋಕಾಯುಕ್ತ ಮೂಲಗಳು ತಿಳಿಸಿವೆ.
ಲೋಕಾಯುಕ್ತ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವಂತೆ ವಿರೂಪಾಕ್ಷಪ್ಪ ಮನೆ, ಎಲ್.ಹೆಚ್ ನಿವಾಸದ 119 ಕೊಠಡಿ, ಕೆಎಸ್ಡಿಎಲ್ ಕಚೇರಿ ಹಾಗೂ ಚನ್ನಗಿರಿಯಲ್ಲಿರುವ ಅವರ ಮನೆಗೆ ನೋಟಿಸ್ ನೀಡಲು ಸಿದ್ಧತೆ ನಡೆದಿದೆ. ಇಂದು ಮಧ್ಯಾಹ್ನದ ವೇಳೆಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದ್ದು ಶಾಸಕ ವಿಚಾರಣೆಗೆ ಹಾಜರಾಗುತ್ತಾರಾ? ಎಂಬುದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನಿವಾಸದಲ್ಲಿ ಲೋಕಾಯುಕ್ತರಿಂದ ಲಕ್ಷಾಂತರ ನಗದು, ಚಿನ್ನಾಭರಣ ಜಪ್ತಿ
ಕೆಎಸ್ಡಿಎಲ್ಗೆ ರಾಸಾಯನಿಕ ಪೂರೈಸುವ ಟೆಂಡರ್ ನೀಡಲು 40 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದ ಪ್ರಶಾಂತ್ ಮಾಡಾಳ್‌ರನ್ನು ಮಾರ್ಚ್ 2ರಂದು ಬಂಧಿಸಿದ್ದ ಲೋಕಾಯುಕ್ತ ಅಧಿಕಾರಿಗಳು ಬಳಿಕ ಕೆಎಸ್ಡಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್, ಅಧ್ಯಕ್ಷ ವಿರೂಪಾಕ್ಷಪ್ಪ ಮಾಡಾಳ್ ಹಾಗೂ ಪುತ್ರ ಪ್ರಶಾಂತ್ ಮಾಡಾಳ್ ಮನೆಯಲ್ಲಿ ಶೋಧ ನಡೆಸಿದ್ದರು. ಪರಿಶೀಲನೆ ಸಂದರ್ಭದಲ್ಲಿ ಪ್ರಶಾಂತ್ ಮಾಡಾಳ್ ಮನೆಯಲ್ಲಿ 6 ಕೋಟಿ ರೂ. ನಗದು ಜಪ್ತಿ ಮಾಡಲಾಗಿತ್ತು.