ಕರ್ನಾಟಕ

karnataka

ETV Bharat / state

Lokayukta Raids: ರಾಜ್ಯದ 9 ಜಿಲ್ಲೆಯ 14 ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ: ಯಾರ ಮನೆಯಲ್ಲಿ ಎಷ್ಟು ಆಸ್ತಿ ಪತ್ತೆ? - ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ

Lokayukta Raids: ರಾಜ್ಯದ 9 ಜಿಲ್ಲೆಯ 14 ಸರ್ಕಾರಿ ಅಧಿಕಾರಿಗಳ ನಿವಾಸ ಮತ್ತು ಕಚೇರಿ ಸೇರಿ 45ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ನಗದು ಹಾಗೂ ಆಸ್ತಿ-ಪಾಸ್ತಿ ಪತ್ತೆ ಮಾಡಿದ್ದಾರೆ.

Etv Bharat
Etv Bharat

By

Published : Aug 17, 2023, 11:03 PM IST

Updated : Aug 18, 2023, 10:58 AM IST

ಬೆಂಗಳೂರು:ಅಕ್ರಮ ಆಸ್ತಿ ಸಂಪಾದನೆ ಅಪಾದನೆ ಹಿನ್ನೆಲೆ ಗುರುವಾರ ರಾಜ್ಯದ 9 ಜಿಲ್ಲೆಯ 14 ಸರ್ಕಾರಿ ಅಧಿಕಾರಿಗಳ ನಿವಾಸ ಮತ್ತು ಕಚೇರಿ ಸೇರಿ 45ಕ್ಕೂ ಹೆಚ್ಚು ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ದಾಖಲೆಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಅಪಾರ ಪ್ರಮಾಣದ ನಗದು ಹಾಗೂ ಆಸ್ತಿ-ಪಾಸ್ತಿ ಪತ್ತೆಯಾಗಿದೆ.

ಬೆಂಗಳೂರು, ತುಮಕೂರು, ಮೈಸೂರು, ಕೊಡಗು, ದಾವಣಗೆರೆ, ಚಿತ್ರದುರ್ಗ,ಧಾರವಾಡ, ಬೀದರ್, ಕೊಪ್ಪಳದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಿದರು. 45ಕ್ಕೂ ಹೆಚ್ಚು ಕಡೆಗಳಲ್ಲಿ 250ಕ್ಕೂ ಅಧಿಕ ಅಧಿಕಾರಿಗಳು ಹಾಗೂ ಸಿಬ್ಬಂದಿ ಏಕಕಾಲಕ್ಕೆ ದಾಳಿ ಮಾಡಿದರು. ಕಳೆದ ಕೆಲವು ದಿನಗಳಿಂದ ಬಂದ ದೂರುಗಳನ್ನು ಆಧರಿಸಿ ಈ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಮಹದೇವಪುರ ವಲಯದ ಕಂದಾಯ ನಿರೀಕ್ಷಕ ಎಸ್.ನಟರಾಜ್ ಅವರಿಗೆ ಸೇರಿದ 4 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಬೆಂಗಳೂರಿನ ಎಂ.ಎಸ್.ಬಿಲ್ಡಿಂಗ್ ಕಚೇರಿಯ ಗ್ರೇಡ್-1 ತಹಶೀಲ್ದಾರ್ ಆಗಿರುವ ಶಿವರಾಜು ಅವರಿಗೆ ಸೇರಿದ 12 ಸ್ಥಳಗಳ ಮೇಲೆ, ಬೆಂಗಳೂರಿನ ಚಿಕ್ಕಜಾಲ ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮೀಪತಿ ಅವರಿಗೆ ಸೇರಿದ 6 ಸ್ಥಳಗಳು, ಬಿಬಿಎಂಪಿ ಕಾರ್ಯನಿರ್ವಾಕ ಇಂಜಿನಿಯರ್ (ಇಇ) ಎಸ್.ಭಾರತಿ ಅವರಿಗೆ ಸೇರಿದ ನಿವಾಸ ಮತ್ತು ಕಚೇರಿಯ ಮೇಲೆ ದಾಳಿ ಮಾಡಲಾಗಿದೆ.

ಅಲ್ಲದೇ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಜಂಟಿ ನಿರ್ದೇಶಕ ಕೆ.ಎನ್.ನಾಗರಾಜು ಮನೆ ಹಾಗೂ ಕಚೇರಿ, ಚಿತ್ರದುರ್ಗದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಕೆ.ಮಹೇಶ್ ಅವರಿಗೆ ಸೇರಿದ 3 ಸ್ಥಳಗಳು, ಕೊಡಗು ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರಿಗೆ ಸೇರಿದ 6 ಸ್ಥಳಗಳು ಹಾಗೂ ಕೊಡಗಿನ ಹಾರಂಗಿ ಜಲಾಶಯದ ಅಧೀಕ್ಷಕ ಇಂಜಿನಿಯರ್ ಕೆ.ಕೆ ರಘುಪತಿ ಅವರಿಗೆ ಸೇರಿದ 3 ಸ್ಥಳಗಳು, ಕೊಪ್ಪಳದ ನಿರ್ಮಿತಿ ಕೇಂದ್ರದಲ್ಲಿ ಕಚೇರಿ ವ್ಯವಸ್ಥಾಪಕ ಮಂಜುನಾಥ ಅವರಿಗೆ ಸೇರಿದ 3 ಸ್ಥಳಗಳು ಮತ್ತು ಬಿದರ್ ಜಿಲ್ಲೆಯ ಚಿಟಗುಪ್ಪ ಪೊಲೀಸ್ ಠಾಣೆಯ ಕಾನ್​ಸ್ಟೇಬಲ್ ವಿಜಯಕುಮಾರ್‌ಗೆ ಸೇರಿದ 3 ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದಾರೆ.

ದಾಳಿಯ ವೇಳೆ ಪತ್ತೆಯಾಗಿದ್ದೇನು?:ಬೆಂಗಳೂರಿನ ಆರ್‌ಐ ಎಸ್.ನಟರಾಜ್‌ಗೆ ಸೇರಿದ 4 ಸ್ಥಳಗಳಲ್ಲಿ ದಾಳಿ ವೇಳೆ, 3.91 ಕೋಟಿ ರೂ. ಸ್ಥಿರಾಸ್ತಿ, 1 ಕೋಟಿ ರೂ. ಚರಾಸ್ತಿ, ನಿಗದಿತ ಆದಾಯಕ್ಕಿಂತ ಶೇಕಡಾ 391ಕ್ಕಿಂತ ಹೆಚ್ಚು ಆಸ್ತಿ ಪತ್ತೆಯಾಗಿದೆ. ಗ್ರೇಡ್-2 ತಹಶೀಲ್ದಾರ್ ಶಿವರಾಜು ಮನೆ ಮೇಲೆ ದಾಳಿ ವೇಳೆ 3.50 ಕೋಟಿ ರೂ. ಸ್ಥಿರಾಸ್ತಿ, 65 ಲಕ್ಷ ರೂ. ಚರಾಸ್ತಿ ಸೇರಿದಂತೆ ಒಟ್ಟು 4.15 ಕೋಟಿ ರೂ. ಪತ್ತೆ ಹಚ್ಚಲಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯ ಲಕ್ಷ್ಮೀಪತಿ ಅವರಿಗೆ ಸೇರಿದ 6 ಸ್ಥಳಗಳಲ್ಲಿ ದಾಳಿ ವೇಳೆ 2.80 ಕೋಟಿ ರೂ. ಸ್ಥಿರಾಸ್ತಿ, 1.15 ಕೋಟಿ ರೂ. ಚರಾಸ್ತಿ ಸೇರಿದಂತೆ ಒಟ್ಟು 3.95 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಕೊಡಗು ಅಪರ ಜಿಲ್ಲಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

ಚಿತ್ರದುರ್ಗದ ಎ.ಇ. ಕೆ.ಮಹೇಶ್​ ಬಳಿ ಅಂದಾಜು 20 ಲಕ್ಷ ರೂ. ಮೌಲ್ಯದ ಚರಾಸ್ತಿ, 88 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 1.08 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಇದು ಇವರ ಆದಾಯಕ್ಕಿಂತ ಮೌಲ್ಯ ಶೇ.211ರಷ್ಟು ಹೆಚ್ಚಳವಾಗಿದೆ. ತುಮಕೂರಿನ ಜಂಟಿ ನಿರ್ದೇಶಕ ಕೆ.ಎನ್. ನಾಗರಾಜು ಬಳಿ 41 ಲಕ್ಷ ರೂ. ಮೌಲ್ಯದ ಚರಾಸ್ತಿ, 3 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 3.41 ಕೋಟಿ ರೂ. ಆಸಿ ಪತ್ತೆಯಾಗಿದೆ.

ಮಡಿಕೇರಿಯ ಕಂದಾಯ ಇಲಾಖೆ ಅಧಿಕಾರಿ ಡಾ. ನಂಜುಂಡೇಗೌಡ ಬಳಿ 98 ಲಕ್ಷಕ್ಕೂ ಅಧಿಕ ಮೌಲ್ಯದ ಚರಾಸ್ತಿ, 2.55 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 3,53,43,518 ಕೋಟಿ ಆಸ್ತಿ ಪತ್ತೆಯಾಗಿದೆ. ಕೊಡಗಿನ ಎಇ ಕೆಕೆ ರಘುಪತಿ ಬಳಿ 1.32 ಕೋಟಿ ರೂ. ಮೌಲ್ಯದ ಚರಾಸ್ತಿ, 2.34 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 3.66 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ ಹಚ್ಚಲಾಗಿದೆ.

ದಾವಣಗೆರೆಯ ಎಸ್.ಸತೀಶ್​ ಬಳಿ 46 ಲಕ್ಷ ರೂ. ಮೌಲ್ಯದ ಚರಾಸ್ತಿ, 1.16 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 1.62 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಕೊಪ್ಪಳದ ಮಂಜುನಾಥ ಬಳಿ 57 ಲಕ್ಷ ರೂ. ಮೌಲ್ಯದ ಚರಾಸ್ತಿ, 2.22 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 2.79 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆ ಹಚ್ಚಲಾಗಿದೆ. ಬೀದರ್​ನ ಕಾನ್​ಸ್ಟೇಬಲ್ ವಿಜಯಕುಮಾರ್ ಬಳಿ 54 ಲಕ್ಷ ರೂ. ಮೌಲ್ಯದ ಚರಾಸ್ತಿ, 1.26 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಸೇರಿ ಒಟ್ಟು 1.80 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: ಕೊಡಗು ಅಪರ ಜಿಲ್ಲಾಧಿಕಾರಿ ಮನೆಯಲ್ಲೂ ಪರಿಶೀಲನೆ

Last Updated : Aug 18, 2023, 10:58 AM IST

ABOUT THE AUTHOR

...view details