ಕರ್ನಾಟಕ

karnataka

ETV Bharat / state

ಬಿಡಿಎ ನಿವೇಶನಗಳಲ್ಲಿ ಕಸದ ರಾಶಿ: ಪರಿಶೀಲನೆಗೆ 3 ವಿಶೇಷ ತಂಡ ರಚನೆ - etv bharat kannada

ಬಿಡಿಎ ವತಿಯಿಂದ ಹಂಚಿಕೆಯಾಗಿರುವ ಖಾಲಿ ನಿವೇಶನದಲ್ಲಿನ ಕಸದ ರಾಶಿ, ಭಗ್ನಾವಶೇಷಗಳಿಂದ ಆಗುತ್ತಿರುವ ತೊಂದರೆ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಮೂರು ಪೊಲೀಸ್ ವಿಶೇಷ ತಂಡಗಳನ್ನು ರಚಿಸಿ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಆದೇಶಿಸಿದ್ದಾರೆ.

Etv Bharatlokayukta-justice-formed-a-three-special-team-for-review-bda-sites
ಬಿಡಿಎ ನಿವೇಶನಗಳಲ್ಲಿ ಕಸದ ರಾಶಿ: ಪರಿಶೀಲನೆಗೆ ಮೂರು ವಿಶೇಷ ತಂಡ ರಚಿಸಿದ ಲೋಕಾಯುಕ್ತ

By ETV Bharat Karnataka Team

Published : Dec 29, 2023, 5:57 PM IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ನಗರದ ನಾನಾ ಕಡೆಗಳಲ್ಲಿ ಹಂಚಿಕೆಯಾದ ಬಡಾವಣೆಗಳ ಖಾಲಿ ನಿವೇಶನದಲ್ಲಿನ ಕಸದ ರಾಶಿ, ಭಗ್ನಾವಶೇಷಗಳಿಂದ ಆಗುತ್ತಿರುವ ತೊಂದರೆ ಕುರಿತು ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಸಮಗ್ರವಾಗಿ ಪರಿಶೀಲಿಸಿ ಮೂರು ಪೊಲೀಸ್ ವಿಶೇಷ ತಂಡ ರಚಿಸಿ ವರದಿ ನೀಡುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಆದೇಶಿಸಿದ್ದಾರೆ. ರಾಜ್ಯ ಸರ್ಕಾರ ಮುಖ್ಯಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ, ಬಿಬಿಎಂಪಿಯ ಆಯಾ ವಲಯ ಜಂಟಿ ಆಯುಕ್ತರು ಹಾಗೂ ಅಧಿಕಾರಿಗಳು ಒಳಗೊಂಡಂತೆ 19 ಮಂದಿಯನ್ನು ಪ್ರತಿವಾದಿಗಳಾಗಿ ಮಾಡಲಾಗಿದ್ದು, ಆರು ವಾರದೊಳಗೆ ವರದಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.

ಕಲ್ಯಾಣನಗರದ ನಿವಾಸಿಯಾಗಿರುವ ಸಿ.ಎಂ.ಸುಬ್ಬಯ್ಯ ಎಂಬವರು ನೀಡಿದ‌ ದೂರಿನಲ್ಲಿ ಬಿಡಿಎ ವತಿಯಿಂದ 48 ವರ್ಷಗಳ ಹಿಂದೆ ಹೆಚ್​ಆರ್​ಬಿಆರ್, ಒಎಂಬಿಆರ್, ಈಸ್ಟ್ ಆಫ್‌ ಎನ್ ಜಿಇಎಫ್ ಹಾಗೂ ಹೆಚ್​ಬಿಆರ್ ಲೇಔಟ್​ಗಳನ್ನ ನಿರ್ಮಿಸಿ ಅರ್ಹರಿಗೆ ನಿವೇಶನ ಹಂಚಿಕೆ‌ ಮಾಡಲಾಗಿತ್ತು. ನಿವೇಶನ ನೀಡಿದ ಮೂರು ವರ್ಷದೊಳಗೆ ಮನೆ‌ ಕಟ್ಟಿಕೊಳ್ಳಬೇಕೆಂಬ ಷರತ್ತಿನ ಮೇರೆಗೆ ನಿವೇಶನಗಳನ್ನು ಮಂಜೂರು ಮಾಡಲಾಗಿತ್ತು. ನಿವೇಶನ ನೀಡಿ ಹಲವು ವರ್ಷಗಳಾದರೂ ಮನೆ ಕಟ್ಟಿಕೊಳ್ಳದ ಹಿನ್ನೆಲೆ ನಿವೇಶನದಲ್ಲಿ ಗಿಡ-ಮರಗಳು ಬೆಳೆದು ಪೊದೆಗಳಾಗಿ ಮಾರ್ಪಟ್ಟಿವೆ. ತ್ಯಾಜ್ಯ ವಸ್ತುಗಳ ಬಿಸಾಡುವ ಕೇಂದ್ರವಾಗಿವೆ ಇದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ತೊಂದರೆ ಅನುಭವಿಸುವಂತಾಗಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು‌.

ಐಪಿಎಸ್ ಅಧಿಕಾರಿಗಳ ನೇತೃತ್ವದ 3 ವಿಶೇಷ ತಂಡ:ಇದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತರು ನಿವೇಶನಗಳಲ್ಲಿ ಕಸದ ರಾಶಿ ಹಾಗೂ ಭಗ್ನಾವಶೇಷ ತೆರವುಗೊಳಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ‌‌ ನಿರ್ದೇಶನ ನೀಡಿದ್ದು, ನಿವೇಶನವನ್ನು ಶುಚಿಯಾಗಿಟ್ಟುಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಲೀಕರಿಗೆ ನೋಟಿಸ್​ ನೀಡುವಂತೆ ತಿಳಿಸಲಾಗಿದೆ. ಬಿಡಿಎ ವತಿಯಿಂದ ನಿರ್ಮಿಸಲಾಗಿರುವ ಬಡಾವಣೆಗಳಲ್ಲಿನ ಖಾಲಿ ನಿವೇಶನಗಳಲ್ಲಿ‌ ಕಸದ ರಾಶಿಯಿರುವ ಬಗ್ಗೆ ಅನೇಕ ದೂರುಗಳು ಬಂದಿದ್ದು‌, ಈ ಸಂಬಂಧ ಐಪಿಎಸ್ ಅಧಿಕಾರಿಗಳಾದ ಶ್ರೀನಾಥ್ ಮಹದೇವ್ ಜೋಶಿ, ಕೋನಾ ವಂಶಿಕೃಷ್ಣ ಹಾಗೂ ಪವನ್‌ ನೆಜ್ಜೂರು ನೇತೃತ್ವದ ಮೂರು ಪ್ರತ್ಯೇಕ ತಂಡ ರಚಿಸಿ ಬಿಡಿಎ ನೀಡಿರುವ ನಗರದ ನಾನಾ ಕಡೆಗಳಲ್ಲಿ ನೀಡಿರುವ ಬಡಾವಣೆಗಳಲ್ಲಿ ಖಾಲಿ‌ ನಿವೇಶನ, ಕಸದ ರಾಶಿಯನ್ನು ಪರಿಶೀಲಿಸಿ ವರದಿ ನಿಡುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ:ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ನೂತನ ಬಸ್ ನಿಲ್ದಾಣಗಳ ಉದ್ಘಾಟನೆ

ABOUT THE AUTHOR

...view details