ಬೆಂಗಳೂರು:ಲಂಚ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇರೆಗೆ ಹೊರಗಿರುವ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಗಮ ನಿಯಮಿತ (ಕೆಎಸ್ಡಿಎಲ್) ಮಾಜಿ ಅಧ್ಯಕ್ಷ ಮಾಡಾಳ್ ವಿರುಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮಾಡಾಳ್ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಗೋಚರಿಸಿದೆ.
ಸಂಪೂರ್ಣ ವಿವರ:ಈ ಹಿಂದೆ ವಿರುಪಾಕ್ಷಪ್ಪ ಮನೆಯಲ್ಲಿ 6 ಕೋಟಿ ರೂ ನಗದು ಪತ್ತೆಯಾಗಿತ್ತು. ಇದಕ್ಕೂ ಮುನ್ನ ಲಂಚಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಹಣದ ಮೂಲ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಲೋಕಾಯುಕ್ತ ಪೊಲೀಸರು ಪತ್ರ ಬರೆದಿದ್ದರು. ಪ್ರತ್ಯೇಕವಾಗಿ ಐಟಿ ತನಿಖೆಯೂ ನಡೆಯುತ್ತಿದೆ. ಈ ಮಧ್ಯೆ ಮನೆಯಲ್ಲಿ ದೊರೆತಿದ್ದ ಆರು ಕೋಟಿ ರೂ. ಮೂಲದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪದಡಿ ಪ್ರತ್ಯೇಕ ಪ್ರಕರಣ ದಾಖಲಿಸಲು ಚಿಂತನೆ ನಡೆಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮಾಡಾಳ್ ಅವರ ಕಂಪನಿಗಳ ಮಾಹಿತಿ ಕೋರಿ ರಿಜಿಸ್ಟರ್ ಆಫ್ ಕಂಪನಿಗೆ ಲೋಕಾಯುಕ್ತ ಪೊಲೀಸರು ಪತ್ರ ಬರೆದಿದ್ದಾರೆ.
ಮನೆಯಲ್ಲಿ ಅಪಾರ ಹಣ ಸಿಕ್ಕಿರುವ ಬಗ್ಗೆ ವಿಚಾರಣೆಯಲ್ಲಿ ಆರೋಪಿ ವಿರುಪಾಕ್ಷಪ್ಪ ನೀಡಿದ ಹೇಳಿಕೆಗೂ ವಶಕ್ಕೆ ಪಡೆದುಕೊಂಡಿದ್ದ ಹಣಕ್ಕೂ ವ್ಯತ್ಯಾಸ ಕಂಡು ಬಂದಿದ್ದು ಮಾಡಾಳ್ ಒಡೆತನವಿರುವ ಕಂಪನಿಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ದಾವಣಗೆರೆಯಲ್ಲಿ ಕ್ರಷರ್ಗಳು, ಅಡಿಕೆ ಕಂಪನಿಗಳು ಹಾಗೂ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಕಂಪನಿ ಸೇರಿದಂತೆ ಇನ್ನಿತರ ಕಂಪನಿಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಮುಂದಾಗಿದ್ದಾರೆ. ಕಂಪನಿ ಸ್ಥಾಪನೆ ಮಾಡಿದಾಗಿನಿಂದ ಈವರೆಗಿನ ಹಣ ವ್ಯವಹಾರ ನಡೆಸಿರುವ ಬಗ್ಗೆಯೂ ಮಾಹಿತಿ ನೀಡುವಂತೆ ಕೋರಲಾಗಿದೆ. ಮಾಹಿತಿ ಬಂದ ಬಳಿಕ ಎಲ್ಲಾ ರೀತಿಯ ಪರಿಶೀಲನೆ ನಡೆಸಿ ಆದಾಯಕ್ಕೂ ಮೀರಿ ಆಸ್ತಿ ಗಳಿಸಿರುವುದು ಕಂಡುಬಂದರೆ ವಿರುಪಾಕ್ಷಪ್ಪ ವಿರುದ್ಧ ಅಸಮತೋಲನ ಆಸ್ತಿಯಡಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿರುವುದಾಗಿ ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.