ಬೆಂಗಳೂರು: ನಗರದಲ್ಲಿನ ರಾಜಕಾಲುವೆ ಒತ್ತುವರಿ ತೆರವುಗೊಳಿಸುವ ವಿಷಯದಲ್ಲಿ ಮೆಸರ್ಸ್ ಬಾಗ್ಮನೆ ಡೆವಲಪಮೆಂಟ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ದೂರಿನ ಅನ್ವಯ ಲೋಕಾಯುಕ್ತ ಪ್ರಾರಂಭಿಸಿರುವ ಪ್ರಕ್ರಿಯೆಗಳ ಕಾನೂನು ಬದ್ಧತೆ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆ.28ಕ್ಕೆ(ನಾಳೆಗೆ) ಮುಂದೂಡಿದೆ.
ಸಮಾಜ ಪರಿವರ್ತನ ಸಮುದಾಯದ ಸಂಸ್ಥಾಪಕರಾದ ಎಸ್.ಆರ್.ಹಿರೇಮಠ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ವಿಭಾಗೀಯ ಪೀಠ, ಅರ್ಜಿಗೆ ಸಂಬಂಧಿಸಿದಂತೆ ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಆಗಸ್ಟ್ ಮತ್ತು ಸೆಪ್ಟಂಬರ್ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ವಸತಿ ಸಮುಚ್ಚಯಗಳು ಸೇರಿದಂತೆ ವಿವಿಧ ಕಟ್ಟಡಗಳು ರಾಜಕಾಲುವೆ ಒತ್ತುವರಿ ಮಾಡಿರುವ ಪರಿಣಾಮ ಮಳೆ ನೀರು ಸರಾಗವಾಗಿ ಹರಿಯಲಾರದೆ ಕೆಲ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗುವುದಕ್ಕೆ ಕಾರಣವಾಗಿತ್ತು. ಈ ಗೊಂದಲಗಳಿಗೆ ಪರಿಹಾರ ಕಲ್ಪಿಸುವ ಸಲುವಾಗಿ ಬಿಬಿಎಂಪಿ ತಕ್ಷಣ ಕ್ರಮಕ್ಕೆ ಮುಂದಾಗಿದ್ದು ರಾಜಕಾಲುವೆ ಒತ್ತುವರಿ ತೆರವು ಕಾರ್ಯಚರಣೆಗೆ ಮುಂದಾಗಿತ್ತು.