ಬೆಂಗಳೂರು :ನಗರದಲ್ಲಿ ಸ್ಪಾ ಹಾಗೂ ಬಾಡಿ ಮಸಾಜ್ ಸೆಂಟರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಲೋಕಾಯುಕ್ತರು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದ್ದಾರೆ.
ಈ ಕುರಿತು ಲೋಕಾಯುಕ್ತ ಕಚೇರಿಯಿಂದ ನಗರ ಪೊಲೀಸ್ ಆಯುಕ್ತರಿಗೆ ಲಿಖಿತ ನಿರ್ದೇಶನ ನೀಡಿದ್ದು, ಖುದ್ದು ನಗರ ಪೊಲೀಸ್ ಆಯುಕ್ತರು ಅಥವಾ ಡಿಸಿಪಿ ಹಂತದ ಅಧಿಕಾರಿಯೊಬ್ಬರು ತನಿಖೆ ನಡೆಸಬೇಕು. ತನಿಖಾ ವರದಿಯನ್ನು 2021ರ ಫೆಬ್ರವರಿ 25ರೊಳಗೆ ಸಲ್ಲಿಸಬೇಕು ಎಂದು ನಿರ್ದೇಶಿಸಲಾಗಿದೆ.
ಆರ್ಟಿಐ ಕಾರ್ಯಕರ್ತ ಜಯಕುಮಾರ್ ಹಿರೇಮಠ ಎಂಬುವರು, ನಗರದಲ್ಲಿ 1,250ಕ್ಕೂ ಹೆಚ್ಚು ಸ್ಪಾ, ಬಾಡಿ ಮಸಾಜ್ ಸೆಂಟರ್ಗಳಿದ್ದು, ಮಸಾಜ್ ಕೆಲಸಕ್ಕೆ ಅಮಾಯಕ ಯುವತಿಯರನ್ನು ಬಳಸಿಕೊಳ್ಳಲಾಗುತ್ತಿದೆ. ಹೆಚ್ಚು ಟಿಪ್ಸ್ ಸಿಗುತ್ತದೆಂಬ ಆಮಿಷ ಒಡ್ಡಿ ಪುರುಷರಿಗೆ ಪೂರ್ತಿ ಬಾಡಿ ಮಸಾಜ್ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ. ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿ ನಗರ ಪೊಲೀಸ್ ಆಯುಕ್ತರಿಗೆ 2020ರ ಡಿಸೆಂಬರ್ 18ರಂದು ದೂರು ನೀಡಿದ್ದರು.
ಆ ಬಳಿಕ ಪೊಲೀಸ್ ಆಯುಕ್ತರು ಕ್ರಮ ಜರುಗಿಸಿಲ್ಲವೆಂದು 2021ರ ಜನವರಿ 6ರಂದು ಲೋಕಾಯುಕ್ತಕ್ಕೂ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ಲೋಕಾಯುಕ್ತರು ಇದೀಗ ಹಿರೇಮಠ ಅವರ ದೂರಿನ ಮೇರೆಗೆ ತನಿಖೆ ನಡೆಸಿ ವರದಿ ನೀಡುವಂತೆ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದ್ದಾರೆ.