ಬೆಂಗಳೂರು:ಇಂದು ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆದಿದ್ದು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರು, ತುಮಕೂರು, ಶಿವಮೊಗ್ಗ ಹಾಗೂ ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ.
ಆದಾಯ ಮೀರಿ ಅಧಿಕ ಆಸ್ತಿ ಗಳಿಸಿದ ಆರೋಪದ ಮೇಲೆ ದಾಳಿ ನಡೆದಿದ್ದು, ಆದಾಯದ ಮೂಲ, ಆಸ್ತಿ ಪತ್ರಗಳು, ಬ್ಯಾಂಕ್ ವಿವರಗಳ ಬಗ್ಗೆ ಲೋಕಾಯುಕ್ತರ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ವರ್ಗಾವಣೆ ಪತ್ರ ನೀಡಲು 9 ನೇ ತರಗತಿಯ ವಿದ್ಯಾರ್ಥಿಯೊಬ್ಬನ ಪೋಷಕರಿಗೆ 75 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಬೆಂಗಳೂರಿನ ರಾಜಾಜಿನಗರದ ಬಸವೇಶ್ವರ ಪ್ರೌಢಶಾಲೆಯ ಪ್ರಿನ್ಸಿಪಾಲ್ ವಿ. ನಾರಾಯಣ ರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಪ್ರಿನ್ಸಿಪಾಲ್ ಬಲೆಗೆ ಬಿದ್ದಿದ್ದಾರೆ. ರಾಜಾಜಿನಗರದ ಬಸವೇಶ್ವರ ಪ್ರೌಢಶಾಲೆ ಅನುದಾನಿತ ಪ್ರೌಢಶಾಲೆಯಾಗಿದ್ದು, ವಿದ್ಯಾರ್ಥಿಯೊಬ್ಬರ ತಾಯಿ ದಿವ್ಯಾ ಅವರು ಪ್ರಿನ್ಸಿಪಲ್ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಡಿಎಸ್‌ಪಿ ಬಸವರಾಜ ಮಗದುಮ್ ನೇತೃತ್ವದಲ್ಲಿ ಬುಧವಾರ ದಾಳಿ ನಡೆದಿದ್ದು, ಪ್ರಿನ್ಸಿಪಾಲ್ ನಾರಾಯಣ ಅವರನ್ನು ಬಂಧಿಸಲಾಗಿದೆ ಎಂದು ಲೋಕಾಯುಕ್ತ ಕಚೇರಿ ಮಾಹಿತಿ ನೀಡಿದೆ.
ಬೆಂಗಳೂರಿನ ಕೆ.ಆರ್ ವೃತ್ತದಲ್ಲಿರುವ ಬೆಸ್ಕಾಂ ಅಧಿಕಾರಿ ಹೆಚ್.ಜೆ. ರಮೇಶ್ ಅವರಿಗೆ ಸೇರಿದ 10 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಇವರಿಗೆ ಸೇರಿದ ಒಟ್ಟು 5.6 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ 1 ದ್ವಿಚಕ್ರವಾಹನ, 1 ಕಾರು, ಚಿನ್ನ, ಬೆಳ್ಳಿ, ವಿಸ್ಕಿ ಬಾಟಲಿಗಳು, ಗೃಹೋಪಯೋಗಿ ಉಪಕರಣಗಳು, ವಿವಿಧ ಶೇರುಗಳು 1.4 ಕೊಟಿ ರೂ. ಮೌಲ್ಯ ಹೊಂದಿದೆ. ದೇವನಹಳ್ಳಿಯ ಹೈಟೆಕ್ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಪಾರ್ಕ್ ಇಂಡಸ್ಟ್ರಿಯಲ್ ಏರಿಯಾದಲ್ಲಿ 1 ನಿವೇಶನ, ದಾಬಸ್ಪೇಟೆಯ ಸೋಮಪುರದ 2ನೇ ಹಂತದಲ್ಲಿರುವ 0.75 ಎಕರೆ ಭೂಮಿ, ಬಸವೇಶ್ವರ ನಗರದ ಬಿಇಎಂಎಲ್ ಲೇಔಟ್‌ನಲ್ಲಿ ನಿರ್ಮಾಣ ಹಂತದ ಮನೆಯ ಮೌಲ್ಯಗಳು ಸೇರಿದಂತೆ 4.20 ಕೋಟಿ ರೂ. ಎಂದು ಅಂದಾಜಿಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಕಾರ್ಮಿಕ ಭವನದಲ್ಲಿ ಕಾರ್ಖಾನೆಗಳ ಉಪ ನಿರ್ದೇಶಕ ಟಿ.ವಿ. ನಾರಾಯಣಪ್ಪಗೆ ಸೇರಿದ 4 ಕಡೆಗಳಿಗೆ ದಾಳಿ ನಡೆದಿದೆ. 2 ದ್ವಿಚಕ್ರವಾಹನ, ಚಿನ್ನಾಭರಣ, ಬೆಳ್ಳಿ, ಪೀಠೋಪಕರಣ, 17 ಸಾವಿರ ರೂ. ನಗದು ಜಪ್ತಿ ಮಾಡಲಾಗಿದ್ದು, ಇದರ ಬೆಲೆ 22.50 ಲಕ್ಷ ರೂ ಎಂದು ಅಂದಾಜಿಸಲಾಗಿದೆ. 1 ನಿವೇಶನ, 3 ಮನೆ, 10 ಎಕರೆ ಕೃಷಿ ಭೂಮಿಯ ಮೊತ್ತ 2.58 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಇದರ ಜೊತೆಗೆ ಹೆಜ್ಜಾಲ ಜ್ಯುಡಿಶಿಯಲ್ ಲೇಔಟ್‌ನಲ್ಲಿ 1 ನಿವೇಶನ, ವಿಜಯನಗರದಲ್ಲಿ 1 ಮನೆ, ಕೆಆರ್‌ಪುರದಲ್ಲಿ 2 ಮನೆ, ಕೋಲಾರದ ಮುಳಬಾಗಿಲಿನಲ್ಲಿ 10 ಎಕರೆ ಜಾಗ ಹೊಂದಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜೊತೆಗೆ ಬೆಂಗಳೂರು ಉತ್ತರ ತಾಲೂಕಿನ ಕಿಟ್ಟನಹಳ್ಳಿ ಗ್ರಾಾಮ ಪಂಚಾಯತ್‌ನ ಕಾರ್ಯದರ್ಶಿ ಎಸ್.ಡಿ. ರಾಮಸ್ವಾಮಿಗೆ ಸೇರಿದ ನಿವಾಸ ಸೇರಿದಂತೆ 3 ಕಡೆಗಳಲ್ಲಿ ದಾಳಿ ನಡೆದಿದೆ. ಚಿನ್ನ, ಬೆಳ್ಳಿ, ನಿವೇಶನ ಸೇರಿದಂತೆ ಬೆಲೆ ಬಾಳುವ ವಸ್ತು ಹೊಂದಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.