ಬೆಂಗಳೂರು:ಭ್ರಷ್ಟರ ವಿರುದ್ಧ ಲೋಕಾಯುಕ್ತವು ಸಮರ ಶುರುಮಾಡಿದೆ. ಎಸಿಬಿ ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರು ಸೇರಿ ರಾಜ್ಯ ವಿಭಾಗವಾರು ಕಚೇರಿಗಳು ಹಾಗೂ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಯಥಾವತ್ ವರ್ಗಾಯಿಸುವಂತೆ ರಾಜ್ಯ ಸರ್ಕಾರಕ್ಕೆ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಪತ್ರ ಬರೆದಿದ್ದಾರೆ.
ಕಳೆದ ಆರು ವರ್ಷಗಳ ಬಳಿಕ ಪೊಲೀಸ್ ಬಲ ಪಡೆದುಕೊಂಡಿರುವ ಲೋಕಾಯುಕ್ತ ಈಗಾಗಲೇ ಭ್ರಷ್ಟರಿಗೆ ಸಿಂಹಸ್ವಪ್ನವಾಗುವ ಸೂಚನೆ ನೀಡಿದೆ. ಇದಕ್ಕೆ ಪೂರಕವೆಂಬಂತೆ ಲಂಚ ಪ್ರಕರಣದಲ್ಲಿ ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶ್ರೀನಿವಾಸ್ ಹಾಗೂ ಆಪ್ತ ಸಹಾಯಕ ಉಮೇಶ್ ತಮ್ಮ ಖೆಡ್ಡಾಕ್ಕೆ ಬೀಳಿಸಿ ಜೈಲಿಗಟ್ಟಿದೆ. ಹೈಕೋರ್ಟ್ ಆದೇಶದಂತೆ ಎಸಿಬಿಯು ಪ್ರಕರಣ ಹಸ್ತಾಂತರ ಪ್ರಕ್ರಿಯೆ ನಡೆಸುತ್ತಿದೆ. ಇದರ ಬೆನ್ನಲೇ ಲೋಕಾಯುಕ್ತರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನಂದಿತಾ ಶರ್ಮಾಗೆ ಪತ್ರ ಬರೆದಿದ್ದಾರೆ.
ಎಸಿಬಿಯಲ್ಲಿ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು, ಅಧಿಕಾರಿಗಳು ಹಾಗೂ ಇತರ ವೃಂದದ ಸಿಬ್ಬಂದಿಯನ್ನ ತಮ್ಮ ತೆಕ್ಕೆಗೆ ನೀಡಬೇಕು. ಎಸಿಬಿ ಪ್ರಧಾನ ಕಚೇರಿ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿರುವ ವಿಭಾಗವಾರು ಎಸಿಬಿ ಕಚೇರಿಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸಬೇಕು. ಪ್ರಕರಣಗಳ ವರ್ಗಾಯಿಸುವುದರ ಜೊತೆಗೆ ಎಸಿಬಿಯಲ್ಲಿ ಬಳಸುತ್ತಿದ್ದ ವಾಹನಗಳು, ಉಪಕರಣಗಳು, ಡಿಜಿಟಲ್ ಸಾಕ್ಷ್ಯಾಧಾರಗಳು, ಎಲೆಕ್ಟ್ರಾನಿಕ್ ಡಿವೈಸ್ಗಳು ಸೇರಿ ಇನ್ನಿತರ ಸೌಲಭ್ಯಗಳನ್ನು ಹಸ್ತಾಂತರಿಸುವಂತೆ ಪತ್ರದಲ್ಲಿ ಲೋಕಾಯುಕ್ತರು ಉಲ್ಲೇಖಿಸಿದ್ದಾರೆ.
2016ರಲ್ಲಿ ಸ್ಥಾಪನೆಯಾದಾಗ ಎಸಿಬಿಗೆ ನೀಡಲಾಗಿದ್ದ ಪೊಲೀಸ್ ಠಾಣೆ ಅಧಿಕಾರಿಗಳನ್ನ ಮೊಟಕುಗೊಳಿಸಿ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಪ್ರಕರಣಗಳನ್ನ ಲೋಕಾಯುಕ್ತಕ್ಕೆ ವರ್ಗಾಯಿಸುವಂತೆ ರಾಜ್ಯ ಸರ್ಕಾರವು ಎಸಿಬಿ ಮುಖ್ಯಸ್ಥರಿಗೆ ಆದೇಶಿಸಿತ್ತು. ಇದರಂತೆ ಪ್ರಕರಣಗಳ ವರ್ಗಾವಣೆ ಪ್ರಕ್ರಿಯೆ ಎಸಿಬಿ ನಡೆಸುತ್ತಿದೆ.