ಬೆಂಗಳೂರು:ವಿದ್ಯುತ್ ಸಂಪರ್ಕ ನವೀಕರಣಗೊಳಿಸಲು 25 ಸಾವಿರ ರೂ ಲಂಚಕ್ಕೆ ಬೇಡಿಕೆಯಿಟ್ಟು 20 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಬೆಸ್ಕಾಂನ ಇಬ್ಬರು ಅಧಿಕಾರಿಗಳನ್ನ ಲೋಕಾಯುಕ್ತ ತಂಡ ಬಂಧಿಸಿದೆ. ಬೆಸ್ಕಾಂ ಸುಮನಹಳ್ಳಿ ಉಪ ವಲಯದ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಭಾರತಿ ಹಾಗೂ ಕಾಮಾಕ್ಷಿಪಾಳ್ಯದ ವಿದ್ಯುತ್ ಕಾರ್ಯಾಚರಣೆ ಮತ್ತು ನಿರ್ವಹಣೆ ಘಟಕದ ಅಸಿಸ್ಟೆಂಟ್ ಎಂಜಿನಿಯರ್ ಕನಲ್ ಕುಮಾರ್ ಎಂಬುವವರನ್ನ ರೆಡ್ ಹ್ಯಾಂಡಾಗಿ ಲೋಕಾಯುಕ್ತ ತಂಡ ಬಂಧಿಸಿದೆ.
ವಿದ್ಯುತ್ ಸಂಪರ್ಕವನ್ನ 30hp ಯಿಂದ 60hpಗೆ ನವೀಕರಣಗೊಳಿಸಲು ಅನಂತರಾಜು ಕೆ.ಎಂ ಎಂಬುವವರು ಬೆಸ್ಕಾಂಗೆ ಮನವಿ ಸಲ್ಲಿಸಿದ್ದರು. ನವೀಕರಣಗೊಳಿಸಲು 25 ಸಾವಿರ ರೂ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ಅನಂತರಾಜು ದೂರು ನೀಡಿದ್ದರು. ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಡಿವೈಎಸ್ಪಿ ಪ್ರಕಾಶ್ ರೆಡ್ಡಿ ನೇತೃತ್ವದ ತಂಡ ದೂರುದಾರರಿಂದ 20 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದ ಆರೋಪಿತ ಅಧಿಕಾರಿಗಳನ್ನ ಬಂಧಿಸಿದೆ.
ಲೋಕಾಯುಕ್ತ ಬಲೆಗೆ ಬಿದ್ದ ಕಲಬುರಗಿ ಅಧಿಕಾರಿ: ಗೌರವಧನ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ವೇಳೆ ಕಲಬುರಗಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾಧಿಕಾರಿ ವೆಂಕಟೇಶ ದೇಶಪಾಂಡೆ ಸೇರಿ ಮೂವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶುಕ್ರವಾರ ಸಂಜೆ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣ ಬಳಿ ಇರುವ ಕಚೇರಿಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳು ಖೆಡ್ಡಾಗೆ ಕೆಡವಿದ್ದಾರೆ. ಅಧಿಕಾರಿ ವೆಂಕಟೇಶ ದೇಶಪಾಂಡೆ, ಜೇವರ್ಗಿ ತಾಲೂಕಿನ ವಿವಿಧೋದ್ದೇಶ ಪುನರ್ವಸತಿ ಅಧಿಕಾರಿ ನಾನಾಗೌಡ ಹೊನ್ನಳ್ಳಿ, ಕಚೇರಿಯ ಎಫ್‌ಡಿಸಿ ಅಂಬರೇಶ ನಾಯಕ್ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾರೆಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.