ಬೆಂಗಳೂರು: ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಬಗೆಹರಿಸಲು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ರಾಜ್ಯಾದ್ಯಂತ ನಡೆಸಲಾದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ದಾಖಲೆಯ 34.76 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಿ ಆದೇಶಿಸಲಾಗಿದೆ. ಈ ಸಂಬಂಧ ನಡೆದ ಮಾಧ್ಯಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹೈಕೋರ್ಟ್ ನ್ಯಾಯಮೂರ್ತಿ ಜಿ.ನರೇಂದರ್ ಮಾಹಿತಿ ನೀಡಿದರು.
ಹೈಕೋರ್ಟ್‌ನ ಬೆಂಗಳೂರು ಪ್ರಧಾನಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳು, ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳು ಸೇರಿ ಒಟ್ಟು 1,020 ಲೋಕ ಅದಾಲತ್ ಪೀಠಗಳನ್ನು ಸ್ಥಾಪಿಸಲಾಗಿತ್ತು. ಇದರಲ್ಲಿ ನ್ಯಾಯಾಲಯಗಳಲ್ಲಿ ಬಾಕಿ ಇರುವ 2.50 ಲಕ್ಷಕ್ಕೂ ಅಧಿಕ ವ್ಯಾಜ್ಯಪೂರ್ವ ಪ್ರಕರಣಗಳು 32.25 ಲಕ್ಷ ಸೇರಿ ಒಟ್ಟು 34.76 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಇದರಿಂದ 1,911 ಕೋಟಿ ರೂ.ಗಳನ್ನು ಪರಿಹಾರದ ರೂಪದಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದರು.
ವಿಶೇಷ ಪ್ರಕರಣಗಳು: ನ್ಯಾ.ಕೆ. ಸೋಮಶೇಖರ್ ಅವರ ಲೋಕ್ ಅದಾಲತ್ ಪೀಠದಲ್ಲಿ ಇನ್ಶೂರೆನ್ಸ್ ಪ್ರಕರಣವೊಂದರಲ್ಲಿ 1.15 ಕೋಟಿ ಪರಿಹಾರ ಕೊಡಿಸಲಾಗಿದೆ. ಬೆಂಗಳೂರು ಹೈಕೋರ್ಟ್‌ನ ಆಸ್ತಿ ಪಾಲು ಪ್ರಕರಣದಲ್ಲಿ 74 ವರ್ಷದ ಲಲಿತಮ್ಮ ಆಂಬ್ಯುಲೆನ್ಸ್‌ನಲ್ಲಿ ಬಂದು ಪರಿಹಾರ ಪಡೆದುಕೊಂಡಿದ್ದು ವಿಶೇಷವಾಗಿತ್ತು. ಹುಬ್ಬಳ್ಳಿಯಲ್ಲಿ 63 ವರ್ಷದ ಹಳೆಯ ಹಾಗೂ ಚಿತ್ರದುರ್ಗದಲ್ಲಿ 30 ವರ್ಷದ ಹಳೆಯ ಸಿವಿಲ್ ದಾವೆ, ಹೊಸದುರ್ಗದಲ್ಲಿ 13 ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಜೋಡಿಯ ಪುನರ್ ಮಿಲನ ಆಗಿರುವುದು ಈ ಬಾರಿಯ ವಿಶೇಷ ಪ್ರಕರಣಗಳಾಗಿವೆ.
ಕಾನೂನು ಸೇವೆಗಳ ಪ್ರಾಧಿಕಾರ ಹೈಕೋರ್ಟ್ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಕೆ. ಸೋಮಶೇಖರ್, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಯಶಂಕರ್ ಮತ್ತಿತರರು ಇದ್ದರು.