ಬೆಂಗಳೂರು :ರಾಜ್ಯ ರಾಜಕಾರಣದ ಪರ್ಯಾಯವಾಗಿದ್ದ ಲೋಕ್ ಶಕ್ತಿ ಪಕ್ಷಕ್ಕೆ ಮತ್ತೆ ಚಾಲನೆ ನೀಡಲಾಗುತ್ತಿದೆ. ಕಾಂಗ್ರೆಸ್-ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ಪಕ್ಷ ಸಂಘಟಿಸಲು ತೀರ್ಮಾನಿಸಲಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರ ಸಮ್ಮುಖದಲ್ಲಿ ರಾಜ್ಯದಲ್ಲಿ ಮತ್ತೆ ಲೋಕ್ ಶಕ್ತಿ ಪಕ್ಷವನ್ನು ಸಂಘಟನೆ ಮಾಡಲು, ಭವಿಷ್ಯದ ಎಲ್ಲಾ ಚುನಾವಣೆಗಳಲ್ಲೂ ಸಕ್ರಿಯವಾಗಿ ಸ್ಪರ್ಧಿಸಲು ನಿರ್ಧರಿಸಿದೆ.
ರಾಜ್ಯದಲ್ಲಿನ ಇಂದಿನ ರಾಜಕೀಯ ದುಸ್ಥಿತಿಯನ್ನು ಕಂಡು ಕರ್ನಾಟಕ ಮಣ್ಣಿನ ಹಾಗೂ ಕನ್ನಡದ ಅಸ್ಮಿತೆಯನ್ನು ಹೊಂದಿರುವ ಪರ್ಯಾಯ ರಾಜಕೀಯ “ಶಕ್ತಿ”ಯನ್ನು ಹುಟ್ಟು ಹಾಕಬೇಕೆಂಬುದೆ ನಮ್ಮ ಉದ್ದೇಶ. ಆದ ಕಾರಣ ಮೌಲ್ಯಾಧಾರಿತ ರಾಜಕಾರಣದ ರೂವಾರಿಯಾದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಂದ ಸ್ಥಾಪಿತವಾದ “ಲೋಕ್ ಶಕ್ತಿ ” ಕನ್ನಡ ನೆಲದ ಹಾಗೂ ಕನ್ನಡಿಗರ ಪಕ್ಷ. ಆದ್ದರಿಂದ ನಾವು “ಲೋಕ್ ಶಕ್ತಿ ” ಪಕ್ಷವನ್ನು ರಾಜ್ಯದಲ್ಲಿ ಕರ್ನಾಟಕಕ್ಕಾಗಿ, ಕನ್ನಡಗರಿಗಾಗಿ ಲೋಕಾರ್ಪಣೆ ಮಾಡಲಾಗಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ರಾಕೇಶ್ ಲಿಮಾಯ ಹೇಳಿದರು.
ಜಾತಿ ಆಧಾರಿತ ರಾಜಕಾರಣ ಹೊರತುಪಡಿಸಿ ಜಾತ್ಯಾತೀತ ತತ್ವ ಸಿದ್ಧಾಂತ, ಸಹಬಾಳ್ವೆಯ ಮೂಲ ತತ್ವಗಳ ಆಧಾರದ ಮೇಲೆ ಪಕ್ಷವನ್ನು ಮುನ್ನಡೆಸಲು ತೀರ್ಮಾನಿಸಲಾಗಿದೆ. ಬೇರೆ ರಾಜ್ಯಗಳಲ್ಲಿ ಲೋಕ್ ಜನಶಕ್ತಿ ಪಕ್ಷ ಅಸ್ಥಿತ್ವದಲ್ಲಿದೆ. ರಾಜ್ಯದಲ್ಲಿ ಪಕ್ಷದ ಸಂಸ್ಥಾಪಕ, ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರ ಪರಂಪರೆಯನ್ನು ಮುನ್ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.