ಕರ್ನಾಟಕ

karnataka

ETV Bharat / state

ಮತ ಎಣಿಕೆಗೆ ಕ್ಷಣಗಣನೆ: ಗರಿಗೆದರಿದ ನಿರೀಕ್ಷೆ, ಒಳಗೊಳಗೆ ಆತಂಕ - Lok sabha

ಅದೃಷ್ಟ ಪರೀಕ್ಷೆಯಲ್ಲಿರುವ ಅಭ್ಯರ್ಥಿಗಳು- ಕರ್ನಾಟಕವನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿದ ರಾಷ್ಟ್ರೀಯ ನಾಯಕರು- ಈವರೆಗೆ ಬಂದ ಚುನಾವಣಾ ಮತದಾನೋತ್ತರ ಸಮೀಕ್ಷೆಗಳು ನಾಳೆ ನಿಜವಾಗುತ್ತಾ..?

ಸಾಂದರ್ಭಿಕ ಚಿತ್ರ

By

Published : May 22, 2019, 7:04 PM IST

ಬೆಂಗಳೂರು: ಲೋಕಸಭೆ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಸೋಲು-ಗೆಲುವಿನ ಲೆಕ್ಕಾಚಾರದ ಜತೆ ಕೆಲ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಯಾರು ಗೆಲ್ಲಲಿದ್ದಾರೆ ಎನ್ನುವ ಕುತೂಹಲ ಮೂಡಿದ್ದು ಕಡೆಯ ಕ್ಷಣದ ಕೌತುಕ ಎಲ್ಲರಲ್ಲೂ ಮನೆಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಒಂದಾಗಿ ಬಿಜೆಪಿ ವಿರುದ್ಧ ಸೆಣೆಸಿದ್ದು, ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆ ಹೊಂದಿದೆ. ಆದರೆ, ಚುನಾವಣಾ ಮತದಾನೋತ್ತರ ಸಮೀಕ್ಷೆಗಳು ಬಿಜೆಪಿ ಮೇಲುಗೈ ಸಾಧಿಸಲಿವೆ ಎಂದು ಬಿಂಬಿಸಿದ್ದು, ಸದ್ಯ ರಾಜ್ಯದಲ್ಲಿ ಯಾರ ಕೈ ಮೇಲಾಗಲಿದೆ ಎನ್ನುವ ಕುತೂಹಲ ಮೂಡಿದೆ.

28 ಕ್ಷೇತ್ರ ದರ್ಶನ:

ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನೊಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಬೆಂಬಲಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಪಕ್ಷಗಳಲ್ಲಿ ಕಾಂಗ್ರೆಸ್ 21 ಕ್ಷೇತ್ರ ಹಾಗೂ ಜೆಡಿಎಸ್ 7 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಒಟ್ಟಾರೆ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳೂ ಸೇರಿದಂತೆ ಪಕ್ಷೇತರರನ್ನೂ ಒಳಗೊಂಡು ಒಟ್ಟು 478 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ರಾಷ್ಟ್ರೀಯ ನಾಯಕರು ಕೂಡ ಕರ್ನಾಟಕವನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಸಾಕಷ್ಟು ಸಾರಿ ಆಗಮಿಸಿ ರಾಜ್ಯದ ಕೆಲ ಪ್ರತಿಷ್ಠಿತ ಕ್ಷೇತ್ರದಲ್ಲಿ ಪ್ರಚಾರ ಮಾಡಿ ತೆರಳಿದ್ದಾರೆ.

ಅಖಾಡದಲ್ಲಿರುವ ಪ್ರಮುಖರು:

ಬಿಜೆಪಿ ಕಡೆಯಿಂದ ನೋಡುವುದಾದರೆ ಹಾಲಿ ಸಂಸದರಾದ ಡಿ.ವಿ. ಸದಾನಂದಗೌಡ, ಸುರೇಶ್ ಅಂಗಡಿ, ಪಿ.ಸಿ. ಗದ್ದಿಗೌಡರ, ಪ್ರಹ್ಲಾದ್ ಜೋಶಿ, ರಮೇಶ್ ಜಿಗಜಿಣಗಿ, ಭಗವಂತ್​ ಖೂಬಾ, ಕರಡಿ ಸಂಗಣ್ಣ, ಶಿವಕುಮಾರ್ ಉದಾಸಿ, ಅನಂತ್ ಕುಮಾರ್ ಹೆಗಡೆ, ಜಿ.ಎಂ. ಸಿದ್ದೇಶ್ವರ, ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಕಟೀಲು, ಪ್ರತಾಪ್ ಸಿಂಹ, ಪಿ.ಸಿ. ಮೋಹನ್ ತಮ್ಮ ಪ್ರತಿಷ್ಠೆ ಕಣಕ್ಕಿಟ್ಟಿದ್ದಾರೆ. ಇದರ ಹೊರತಾಗಿ ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ, ಕೋಲಾರದಿಂದ ಎಸ್. ಮುನಿಸ್ವಾಮಿ (ಬಿಬಿಎಂಪಿ ಸದಸ್ಯರು), ಬಿ.ಎನ್. ಬಚ್ಚೇಗೌಡ, ಮಾಜಿ ಎಂ​ಎಲ್​ಸಿ ಅಶ್ವತ್ಥನಾರಾಯಣ, ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ಮಾಜಿ ಸಂಸದ ಜಿ.ಎಸ್. ಬಸವರಾಜು, ಎ ನಾರಾಯಣಸ್ವಾಮಿ, ಮಾಜಿ ಸಚಿವ ಎ. ಮಂಜು, ಅಣ್ಣಾ ಸಾಹೇಬ್ ಜೊಲ್ಲೆ, ದೇವೇಂದ್ರಪ್ಪ, ರಾಜಾ ಅಮರೇಶ್ ನಾಯಕ್ ತಮ್ಮ ಭವಿಷ್ಯ ಪಣಕ್ಕಿಟ್ಟಿದ್ದಾರೆ.

ಇನ್ನೊಂದೆಡೆ ಮೈತ್ರಿ ಪಕ್ಷದಿಂದ ಕಾಂಗ್ರೆಸ್​ ಸಂಸದರಾದ ಪ್ರಕಾಶ್ ಹುಕ್ಕೇರಿ, ಮಲ್ಲಿಕಾರ್ಜುನ ಖರ್ಗೆ, ಬಿ.ವಿ. ನಾಯಕ್, ವಿ.ಎಸ್. ಉಗ್ರಪ್ಪ, ಬಿ.ಎನ್. ಚಂದ್ರಪ್ಪ, ಆರ್. ದ್ರುವನಾರಾಯಣ, ಡಿ.ಕೆ. ಸುರೇಶ್, ವೀರಪ್ಪ ಮೊಯ್ಲಿ, ಕೆ.ಹೆಚ್​. ಮುನಿಯಪ್ಪ ಅದೃಷ್ಟ ಪರೀಕ್ಷೆಗೆ ಇಳಿದರೆ, ಜೆಡಿಎಸ್​ನಿಂದ ಹಾಲಿ ಸಂಸದ ಹಾಗೂ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡ ತಮ್ಮ ಹಾಸನ ಕ್ಷೇತ್ರ ಬಿಟ್ಟು ತುಮಕೂರಿನಿಂದ ಕಣಕ್ಕಿಳಿದಿದ್ದಾರೆ. ಉಳಿದಂತೆ ಕಾಂಗ್ರೆಸ್​ನಿಂದ ವೀಣಾ ಕಾಶಪ್ಪನವರ್, ಈಶ್ವರ್ ಖಂಡ್ರೆ, ರಾಜಶೇಖರ್ ಹಿಟ್ನಾಳ್, ಕೃಷ್ಣ ಬೈರೇಗೌಡ, ರಿಜ್ವಾನ್ ಅರ್ಷದ್, ಬಿ.ಕೆ. ಹರಿಪ್ರಸಾದ್ ಅದೃಷ್ಟ ಪರೀಕ್ಷೆಗೆ ಇಳಿಸಿದ್ದರೆ, ಜೆಡಿಎಎಸ್​ನಿಂದ ದೇವೇಗೌಡರ ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಕಣದಲ್ಲಿದ್ದಾರೆ. ಉಳಿದಂತೆ ಮಧು ಬಂಗಾರಪ್ಪ, ಆನಂದ್ ಆಸ್ನೋಟಿಕರ್, ಪ್ರಮೋದ್ ಮಧ್ವರಾಜ್ ಕೂಡ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಪ್ರಬಲ ಸ್ಪರ್ಧೆ:

ರಾಜ್ಯದಲ್ಲಿ ಅತ್ಯಂತ ಪ್ರತಿಷ್ಠೆಯ ಹಾಗೂ ಭಾರೀ ಕುತೂಹಲ ಕೆರಳಿಸಿರುವ ಕ್ಷೇತ್ರ ಮಂಡ್ಯ. ಇಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಮೈತ್ರಿ ಅಭ್ಯರ್ಥಿ ಹಾಗೂ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಮುಖಾಮುಖಿಯಾಗಿದ್ದಾರೆ. ಉಳಿದಂತೆ ಹಾಸನದಲ್ಲಿ ಸಚಿವ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಎದುರು ಮಾಜಿ ಸಚಿವ ಹಾಗೂ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿರುವ ಎ. ಮಂಜು, ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರ ವಿರುದ್ಧ ಬಿಜೆಪಿಯ ಮಾಜಿ ಸಂಸದ ಜಿ.ಎಸ್. ಬಸವರಾಜ್, ಕಲಬುರುಗಿಯಲ್ಲಿ ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಾಂಗ್ರೆಸ್ ತ್ಯಜಿಸಿರುವ ಡಾ. ಉಮೇಶ್ ಜಿ. ಜಾದವ್ ಬಿಜೆಪಿಯಿಂದ, ಬೀದರ್​ನಲ್ಲಿ ಸಂಸದ ಭಗವಂತ್​ ಖೂಬಾ ವಿರುದ್ಧ ಕಾಂಗ್ರೆಸ್ ನಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಶಿವಮೊಗ್ಗದಲ್ಲಿ ಮಾಜಿ ಸಂಸದ ಬಿ.ವೈ. ರಾಘವೇಂದ್ರ ವಿರುದ್ಧ ಮಾಜಿ ಶಾಸಕ ಮಧು ಬಂಗಾರಪ್ಪ, ಬೆಂಗಳೂರು ಉತ್ತರದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ವಿರುದ್ಧ ಸಚಿವ ಕೃಷ್ಣ ಭೈರೇಗೌಡ, ಕೋಲಾರದಲ್ಲಿ ಸಂಸದ ಕೆ.ಹೆಚ್​. ಮುನಿಯಪ್ಪ ವಿರುದ್ಧ ಕಾರ್ಪೊರೇಟರ್ ಆಗಿರುವ ಎಸ್. ಮುನಿಸ್ವಾಮಿ, ಧಾರವಾಡದಿಂದ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಕಾಂಗ್ರೆಸ್​ನ ಮಾಜಿ ಸಚಿವ ವಿನಯ್ ಕುಲಕರ್ಣಿ, ಬಳ್ಳಾರಿಯಲ್ಲಿ ಸಂಸದ ವಿ.ಎಸ್. ಉಗ್ರಪ್ಪ ವಿರುದ್ಧ ದೇವೇಂದ್ರಪ್ಪ ಸೆಣಸಿದ್ದಾರೆ. ಇವೆಲ್ಲಾ ಕ್ಷೇತ್ರಗಳ ಫಲಿತಾಂಶ ಸಾಕಷ್ಟು ಕುತೂಹಲ ಕೆರಳಿಸಿದೆ.

ಒಟ್ಟು ಮತದಾರರ, ಮತದಾನದ ವಿವರ:

ರಾಜ್ಯದ 28 ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 5,1055,172 ಮಂದಿ ಮತದಾರರಿದ್ದು, 3,50,31,495 ಮಂದಿ ಮತದಾನ ಮಾಡಿದ್ದು, ಒಟ್ಟಾರೆ ಶೇ.68.61ರಷ್ಟು ಮತದಾನವಾಗಿದೆ. ಬೆಂಗಳೂರು ಉತ್ತರ ಅತಿ ಹೆಚ್ಚು ಮತದಾರರನ್ನು ಹೊಂದಿದೆ. 28 ಲಕ್ಷ ಮತದಾರರಿದ್ದಾರೆ. ಇನ್ನು ಉಡುಪಿ ಚಿಕ್ಕಮಗಳೂರು ಅತ್ಯಂತ ಕಡಿಮೆ ಮತದಾರರನ್ನು ಹೊಂದಿರುವ ಕ್ಷೇತ್ರವಾಗಿದ್ದು 16 ಲಕ್ಷ ಮತದಾರರನ್ನು ಹೊಂದಿದೆ. ಮಂಡ್ಯದಲ್ಲಿ ಅತಿ ಹೆಚ್ಚು ಅಂದರೆ ಶೇ.80ರಷ್ಟು ಮತದಾನವಾಗಿದೆ. ಅತಿ ಕಡಿಮೆ ಮತದಾನ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಅಂದರೆ ಶೇ.53ರಷ್ಟು ಮತದಾನವಾಗಿದೆ.

ABOUT THE AUTHOR

...view details