ಬೆಂಗಳೂರು:ಲೋಕಸಭಾ ಕ್ಷೇತ್ರವಾರು 15 ಕ್ಷೇತ್ರಗಳ ಕುರಿತು ರಾಜ್ಯ ಬಿಜೆಪಿ ನಾಯಕರು ನಡೆಸಿದ ಸಭೆಯಲ್ಲಿ ಕೆಲ ಹಾಲಿ ಸಂಸದರ ಬದಲು ಬೇರೆಯವರಿಗೆ ಟಿಕೆಟ್ ನೀಡುವಂತೆ ಸ್ಥಳೀಯ ನಾಯಕರು ಆಗ್ರಹಿಸಿದ್ದಾರೆ. ಹಾಲಿ ಸಂಸದರು, ಕೇಂದ್ರ ಸಚಿವರಿಗೆ ಟಿಕೆಟ್ ನೀಡದಂತೆ ಇಂದಿನ ಸಭೆಯಲ್ಲಿಯೂ ಆಗ್ರಹ ವ್ಯಕ್ತವಾಗಿದೆ.
ನಗರದ ಹೊರವಲಯದಲ್ಲಿರುವ ರಮಾಡ ರೆಸಾರ್ಟ್ನಲ್ಲಿ ಲೋಕಸಭಾ ಚುನಾವಣಾ ಸಿದ್ಧತೆ ಕುರಿತು ಬಿಜೆಪಿಯ ಎರಡನೇ ದಿನದ ಸಭೆ ನಡೆಯಿತು. ಬಿಜೆಪಿಯಿಂದ ಲೋಕಸಭಾ ಕ್ಷೇತ್ರವಾರು ನಡೆದ ಸಭೆಯಲ್ಲಿ ಸ್ಥಳೀಯ ನಾಯಕರು ಅಭ್ಯರ್ಥಿಗಳ ವಿಚಾರದಲ್ಲಿ ಹೆಚ್ಚಿನ ಉತ್ಸುಕತೆ ತೋರಿ ಮಾತನಾಡಿದರು. ದಾವಣಗೆರೆ ಸಂಸದ ಜಿ ಎಂ ಸಿದ್ದೇಶ್ವರ್ ತಮ್ಮ ಬದಲು ಬೇರೆಯವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ರಾಜ್ಯ ನಾಯಕರು ಕ್ಷೇತ್ರದಲ್ಲಿ ಸರ್ವೆ ಮಾಡಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಆಯ್ಕೆ ಮಾಡಿ, ವೀಕ್ಷಕರು ಕ್ಷೇತ್ರಕ್ಕೆ ಬಂದಾಗ ಅಲ್ಲಿಯೇ ನಿಮ್ಮ ಅಭಿಪ್ರಾಯ ತಿಳಿಸಿ ಎಂದು ಸೂಚಿಸಿದರು. ಸದ್ಯ ದಾವಣಗೆರೆ ಲೋಕಸಭಾ ಕ್ಷೇತ್ರದದಿಂದ ತಮ್ಮ ಬದಲಾಗಿ ತಮ್ಮ ಕುಟುಂಬಸ್ಥರ ಕಣಕ್ಕಿಳಿಸಲು ಮುಂದಾಗಿರುವ ಸಂಸದರು ಟಿಕೆಟ್ಗಾಗಿ ಲಾಬಿ ಮಾಡುತ್ತಿದ್ದು, ಇದರ ನಡುವೆ ಸ್ಥಳೀಯರ ವಿರೋಧ ಅವರಿಗೆ ಹಿನ್ನಡೆ ತರುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಿತ್ರದುರ್ಗ ಸಂಸದರ ಬದಲಾವಣೆ ಮಾಡಿ, ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಆಗ್ರಹ ಮಾಡಲಾಗಿದೆ. ಈ ಕುರಿತು ವರಿಷ್ಠರು ನಿರ್ಧರಿಸುತ್ತಾರೆ, ನಿಮ್ಮ ಅಭಿಪ್ರಾಯವನ್ನು ವೀಕ್ಷರಿಗೆ ತಿಳಿಸಿ, ಸದ್ಯ ಕ್ಷೇತ್ರದಲ್ಲಿ ಪಕ್ಷ ಬಲವರ್ಧನೆಗೆ ಹೆಚ್ಚಿನ ಗಮನ ನೀಡಿ ಎಂದು ರಾಜ್ಯದ ನಾಯಕರು ಸೂಚಿಸಿದ್ದಾರೆ. ಜೊತೆಗೆ ಹಾವೇರಿ ಲೋಕಸಭಾ ಕ್ಷೇತ್ರದಿಂದಲೂ ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಆಗ್ರಹ ಕೇಳಿಬಂದಿದೆ. ಸದ್ಯ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಹೊಸ ಅಭ್ಯರ್ಥಿ ಹುಡುಕಾಟ ನಡೆಯುತ್ತಿದೆ. ಆದರೆ, ಹಾವೇರಿ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಮಾಜಿ ಸಚಿವರು, ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರೆ. ಇದರ ನಡುವೆ ಸ್ಥಳೀಯರಿಗೆ ಮಣೆ ಹಾಕಿ ಎನ್ನುವ ಒತ್ತಾಯವೂ ಕೇಳಿಬಂದಿದೆ. ಮಾಜಿ ಸಿಎಂ ಬೊಮ್ಮಾಯಿ ಸ್ಪರ್ಧೆ ಚರ್ಚೆಯೂ ಇರುವ ಹಿನ್ನೆಲೆಯಲ್ಲಿ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದರ ನಡುವೆ ಬಾಗಲಕೋಟೆ ಸಂಸದ ಪಿ.ಸಿ ಗದ್ದಿಗೌಡರ್ ಮರು ಸ್ಪರ್ಧೆಗೆ ಬಹುತೇಕರಿಂದ ಒಲವು ವ್ಯಕ್ತವಾಯಿತು. ಸಭೆಯಲ್ಲಿ ಮತ್ತೆ ಗದ್ದಿಗೌಡರ್ ಗೆಲ್ಲಿಸುವ ವಿಶ್ವಾಸ ವ್ಯಕ್ತಪಡಿಸಿದ ಸ್ಥಳೀಯ ನಾಯಕರು ಅವರಿಗೇ ಮತ್ತೆ ಟಿಕೆಟ್ ನೀಡುವಂತೆ ಮನವಿ ಮಾಡಿದರು. ಉಡುಪಿ - ಚಿಕ್ಕಮಗಳೂರು, ಮಂಗಳೂರು, ಉತ್ತರ ಕನ್ನಡ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಬದಲಾವಣೆ ವದಂತಿಗಳ ಬಗ್ಗೆ, ಬೆಂಗಳೂರು ಉತ್ತರದಲ್ಲಿ ಸದಾನಂದಗೌಡರ ಮರು ಸ್ಪರ್ಧೆ ವಿಚಾರದ ಕುರಿತು ಹೆಚ್ಚಿನ ಚರ್ಚೆಯಾಯಿತು ಎಂದು ಹೇಳಲಾಗಿದೆ.