ಬೆಂಗಳೂರು: ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಸೈ ಎನಿಸಿಕೊಳ್ಳುವಂತೆ ಚುನಾವಣೆಯ ಒಟ್ಟು ಫಲಿತಾಂಶದಲ್ಲೂ ಮಹಿಳೆಯರ ಅಭಿಪ್ರಾಯ ಮುಖ್ಯವಾಗುತ್ತದೆ. ಕೇವಲ ಸೀರೆ, ಕುಕ್ಕರ್ ಆಮಿಷಗಳಿಗೆ ಮಣಿಯದೆ ಸ್ವತಂತ್ರವಾಗಿ ಯೋಚಿಸಿ ಮತದಾನದ ಹಕ್ಕು ಚಲಾಯಿಸುವಲ್ಲಿ ಪುರುಷರಷ್ಟೇ ಮಹಿಳೆಯರೂ ಸಬಲರಾಗುತ್ತಿದ್ದಾರೆ.
ಹೌದು, ವಿವಿಧ ಕ್ಷೇತ್ರಗಳಲ್ಲಿ ಕೆಲಸದಲ್ಲಿರುವ ಮಹಿಳೆಯರು, ಆಡಳಿತ, ತಮ್ಮನ್ನು ಆಳುವ ಸರ್ಕಾರ ಹಾಗೂ ಜನಪ್ರತಿನಿಧಿಗಳು ಹೇಗಿರಬೇಕೆಂದು ಈಟಿವಿ ಭಾರತ್ ಜೊತೆ ಹೇಳಿಕೊಂಡಿದ್ದಾರೆ. ಅಲ್ಲದೆ ತಮ್ಮ ಬೇಡಿಕೆಗಳೇನು ಎಂಬುದನ್ನೂ ವಿವರಿಸಿದ್ದಾರೆ.
ವಿವಿಧ ಕ್ಷೇತ್ರಗಳ ಮಹಿಳೆಯರ ಚುನಾವಣಾ ಅಭಿಪ್ರಾಯ ವಕೀಲರಾಗಿರುವ ಅನಿತಾ ಅವರು, ಮಹಿಳಾ ಅಭ್ಯರ್ಥಿಯನ್ನು ಗೆಲ್ಲಿಸಿದ್ರೆ ಅವರು ಮಹಿಳೆಯರ ಪರವಾಗಿ, ಮಹಿಳೆಯರ ಹಕ್ಕುಗಳಿಗಾಗಿ, ಮಹಿಳೆಯರ ರಕ್ಷಣೆಗಾಗಿ ಕೆಲಸ ಮಾಡಬಲ್ಲರು. ಅಲ್ಲದೆ ಅವರು ಶಿಕ್ಷಿತರಾಗಿದ್ದರೆ ಕಾನೂನು ಪಾಲನೆ ಮಾಡುತ್ತಾರೆ ಅಂತಾ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.
ನಾವು ಬಡವರ ಪರ ಕೆಲಸ ಮಾಡುವವರಿಗೆ ವೋಟು ಹಾಕ್ತೇವೆ. ತರಕಾರಿ, ಗ್ಯಾಸ್ ಬೆಲೆ ಕಡಿಮೆ ಮಾಡಬೇಕು. ಬಡವರಿಗೆ ಮನೆ ಕಟ್ಟಿಸಿಕೊಡುವವರಿಗೆ, ನಮ್ಮ ಬಳಿ ಬಂದು ಸಹಾಯ ಮಾಡುವವರಿಗೆ ವೋಟು ಹಾಕ್ತೇವೆ ಎಂದು ಮುಗ್ಧವಾಗಿ ಹೇಳುತ್ತಾರೆ ಪೌರಕಾರ್ಮಿಕರಾಗಿ ದುಡಿಯುವ ಪೂಂಗಾವನ.
ಇನ್ನು ಗೃಹಿಣಿ ಗಾಯತ್ರಿ ಎಂಬುವರು ಮಾತನಾಡಿ, ದೇಶದ ಹಿತಕ್ಕಾಗಿ, ಜನರ ಹಿತಕ್ಕಾಗಿ ಕೆಲಸ ಮಾಡುವ ಪಕ್ಷಕ್ಕೆ ವೋಟ್ ಹಾಕ್ತೀವಿ ಎಂದಿದ್ದಾರೆ.
ಇನ್ನು ಅಲ್ಪಸಂಖ್ಯಾತ ಸಮುದಾಯದ ಮಹಿಳೆ ರಝೀಯಾ ಸುಲ್ತಾನಾ ಮಾತನಾಡಿ, ಈಗ ಎಲ್ಲಾ ವಸ್ತುಗಳ ಬೆಲೆ ಹೆಚ್ಚಾಗುತ್ತಾ ಇದೆ. ಬಡವರಿಗೆ ಅನುಕೂಲ ಆಗುವ ಹಾಗೆ ಸರ್ಕಾರ ನಡೆಯಬೇಕು, ಅಂತಹ ಪಕ್ಷಕ್ಕೆ ನಮ್ಮ ವೋಟು ಎಂದಿದ್ದಾರೆ.
ಬ್ಯಾಂಕ್ ಉದ್ಯೋಗಿ ವೀಣಾ ಮಾತನಾಡಿ, ಮಹಿಳೆಯರ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡ್ಬೇಕು. ದೇಶದಾದ್ಯಂತ ಏಕರೂಪದ ಬೇಸಿಕ್ ಶಿಕ್ಷಣ ಸಿಗಬೇಕು. ಅಂತಹವರಾದರೆ ಓಕೆ ಎನ್ನುತ್ತಿದ್ದಾರೆ. ಇನ್ನು ಅಂಗಡಿ ಮಾಲೀಕರಾಗಿರುವ ಸವಿತಾ, ಖರೀದಿಸುವ ವಸ್ತುಗಳ ಬೆಲೆ ಕಡಿಮೆಯಾಗ್ಬೇಕು. ಶಿಕ್ಷಣ ಕಡಿಮೆ ಶುಲ್ಕದಲ್ಲಿ ಸಿಗಬೇಕು ಎಂದಿದ್ದಾರೆ.
ಯಾವುದೇ ಪಕ್ಷ ಅಧಿಕಾರಕ್ಕೆ ಬರಲಿ, ಜನರಿಗೆ ಉತ್ತಮ ಸೇವೆ ಮಾಡ್ಬೇಕು ಅಂತಾರೆ ಕೋ ಆಪರೇಟಿವ್ ಬ್ಯಾಂಕ್ ಉದ್ಯೋಗಿ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಪ್ರಾಧಾನ್ಯತೆ ಕೊಡುವ ಜೊತೆಗೆ ವೇತನದಲ್ಲೂ ಸಮಾನ ವೇತನ ನೀಡ್ಬೇಕು. ಮಂಗಳಮುಖಿಯರು ಸೇರಿದಂತೆ ಮಹಿಳೆಯರಿಗೆ ರಕ್ಷಣೆ ಸಿಗಬೇಕು. ಶೋಷಣೆಗಳು ಕಡಿಮೆಯಾಗ್ಬೇಕು ಅಂತಾರೆ ಶಾಲಾ ಪ್ರಾಂಶುಪಾಲರಾದ ಮಾಲಾ ಪ್ರಭಾಕರ್.
ಬಡವರು ಜನಪ್ರತಿನಿಧಿ ಬಳಿ ಹೋದಾಗ ಆಸ್ಪತ್ರೆ ಖರ್ಚು ನೋಡಿಕೊಳ್ಳಬೇಕು. ನೀರು, ಮನೆ ವ್ಯವಸ್ಥೆಯ ಭರವಸೆ ಕೊಡುವವರಿಗೆ ವೋಟ್ ಹಾಕ್ತೀವಿ ಅಂತಾರೆ ವೃದ್ಧೆಯಾದ ಶಶಿಕಲಾ. ಸರ್ಕಾರಿ ಆಸ್ಪತ್ರೆಗಳ ಅನೇಕ ಅಗತ್ಯಗಳನ್ನು ಸರ್ಕಾರ ನಿರ್ಲಕ್ಷಿಸದೇ ಪೂರೈಸಬೇಕು ಎನ್ನುತ್ತಾರೆ ವೈದ್ಯೆ ನಿರ್ಮಲಾ ಬುಗ್ಗಿ.
ಇನ್ನು ದೇಶದ ಪ್ರಮುಖ ಮತದಾರರ ವರ್ಗವಾಗಿರುವ ಯುವ ಮತದಾರರಾಗಿರುವ ಕಾಲೇಜು ವಿದ್ಯಾರ್ಥಿನಿಯರು ಮಾತನಾಡಿ, ಶಿಕ್ಷಣದ ಬಳಿಕ ಉತ್ತಮ ಕೆಲಸ ಸಿಗಲು ಎಲ್ಲಾ ವರ್ಗದವರಿಗೂ ಮೀಸಲಾತಿ ಬೇಕು. ಜನರಲ್ ಮೆರಿಟ್ನವರಿಗೂ ಉದ್ಯೋಗ ಅವಕಾಶ ಬೇಕು ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ಮಹಿಳೆಯರೂ ಪಕ್ಷ, ಅಭ್ಯರ್ಥಿಗಳ ಆಮಿಷಕ್ಕೆ ಅಥವಾ ಮನೆಯವರ ಒತ್ತಡಕ್ಕೆ ವೋಟ್ ಹಾಕುವ ಜಾಯಮಾನದಿಂದ ನಿಧಾನಕ್ಕೆ ಹೊರಬರುತ್ತಿದ್ದು, ಸ್ವತಂತ್ರವಾಗಿ ಯೋಚಿಸಿ, ತಮಗೆ ಒಳಿತಾಗುವ ಉತ್ತಮ ಆಡಳಿತ ನೀಡುವ ಅಭ್ಯರ್ಥಿ ಅಥವಾ ಪಕ್ಷವನ್ನು ಗೆಲ್ಲಿಸಲು ಮತ ಚಲಾಯಿಸಲು ಉತ್ಸುಕರಾಗಿದ್ದಾರೆ.