ಬೆಂಗಳೂರು :ಲಾಕಪ್ ಡೆತ್ ಪ್ರಕರಣ ಸಂಬಂಧ ಬಂಧನ ಭೀತಿ ಎದುರಿಸುತ್ತಿರುವ ಪೊಲೀಸ್ ಪೇದೆಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕು ತಿರುಮಲಶೆಟ್ಟಿಹಳ್ಳಿ ಪೋಲಿಸ್ ಠಾಣೆ ಪೋಲಿಸ್ ಪೇದೆ ಸಂತೋಷ್ ನಿಂಗಪ್ಪ ವಡ್ಡರ್ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಜಾನ್ ಮೈಕೆಲ್ ಕುನ್ಹಾ ಅವರಿದ್ದ ಪೀಠ ವಜಾಗೊಳಿಸಿ ಆದೇಶಿಸಿದೆ.
ಅರ್ಜಿ ವಿಚಾರಣೆ ನಡೆಸಿದ ಪೀಠ, ಮೃತ ವ್ಯಕ್ತಿ ಮುನಿಕಲ್ಲಪ್ಪ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದಾರೆ. ಅರ್ಜಿದಾರ ಪೇದೆ ಸೇರಿ ಇತರ ಪೊಲೀಸ್ ಸಿಬ್ಬಂದಿ ಸೇರಿ ಆತನನ್ನು ಥಳಿಸಿದ್ದರಿಂದಲೇ ಸಾವು ಸಂಭವಿಸಿದೆ ಎಂಬ ಗಂಭೀರ ಆರೋಪವಿದೆ. ಈ ಹಂತದಲ್ಲಿ ನಿರೀಕ್ಷಣಾ ಜಾಮೀನು ನೀಡಿದರೆ ಪ್ರಕರಣದ ತನಿಖೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟು ಅರ್ಜಿ ತಿರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ:
ಪತಿ ಮುನಿಕಲ್ಲಪ್ಪನನ್ನು ಪ್ರಕರಣವೊಂದರ ವಿಚಾರಣೆಗೆಂದು ತಿರುಮಶೆಟ್ಟಿಹಳ್ಳಿ ಠಾಣೆ ಪೊಲೀಸರು 2020 ಏ.8ರಂದು ಕರೆದೊಯ್ದಿದ್ದರು. ಆದರೆ, ಗಂಡನನ್ನು ಬಿಟ್ಟುಕಳಿಸದೆ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದರು. ಈ ಬಗ್ಗೆ ವಿಚಾರಿಸಲು ಠಾಣೆಗೆ ಹೋದಾಗ ವಾಚ್ಯ ಶಬ್ದಗಳಿಂದ ನಿಂದಿಸಿ, ನನ್ನ ಮುಂದೆಯೇ ಗಂಡನನ್ನ ಹಿಗ್ಗಾಮುಗ್ಗ ಥಳಿಸಿದ್ದರು. ಇದರಿಂದಲೇ ನನ್ನ ಗಂಡನ ಪ್ರಾಣ ಹೋಯಿತು ಎಂದು ಮುನಿಕಲ್ಲಪ್ಪ ಎಂಬುವರ ಪತ್ನಿ ಧನಲಕ್ಷ್ಮಿ ದೂರು ನೀಡಿದ್ದರು. ಅದರಂತೆ ಏ.10ರಂದು ಸಂತೋಷ್ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು. ಸದ್ಯ ಬಂಧನ ಭೀತಿ ಎದುರಿಸುತ್ತಿರುವ ಪೇದೆ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.