ಬೆಂಗಳೂರು:ಲಾಕ್‌ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಒಳಗಾಗಿರುವ ಮತ್ತಷ್ಟು ಸಮುದಾಯಗಳಿಗೆ ನೆರವಿನ ಹಸ್ತ ಚಾಚಿರುವ ಸರ್ಕಾರ 500 ಕೋಟಿ ರೂ. ಮೊತ್ತದ ಎರಡನೇ ವಿಶೇಷ ಪ್ಯಾಕೇಜ್ ಘೋಷಿಸಿದೆ.
Lockdown: ಸರ್ಕಾರ ಘೋಷಿಸಿದ ಎರಡನೇ ಪ್ಯಾಕೇಜ್ನಲ್ಲಿ ಯಾರಿಗೆ, ಎಷ್ಟು ಪರಿಹಾರ?
ಕೋವಿಡ್ ಲಾಕ್ಡೌನ್ನಿಂದಾಗಿ ಸಮಾಜದ ಎಲ್ಲ ವರ್ಗದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆ ರಾಜ್ಯ ಸರ್ಕಾರ 500 ಕೋಟಿ ರೂಪಾಯಿ ಮೊತ್ತದ ಎರಡನೇ ಹಂತದ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಯಾವ ವಲಯಕ್ಕೆ ಎಷ್ಟು ಪರಿಹಾರ ಎಂಬುದರ ಕುರಿತ ಮಾಹಿತಿ ಇಲ್ಲಿದೆ..
ರಾಜ್ಯ ಸರ್ಕಾರ
ಯಾರಿಗೆಲ್ಲಾ ಪರಿಹಾರ?
ಈ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ ಈ ಕೆಳಗಿನ ಘೋಷಣೆಗಳನ್ನು ಮಾಡಿದರು..
- ಪವರ್ ಲೂಂಗಳಲ್ಲಿ ಇಬ್ಬರು ಕೆಲಸಗಾರರು ಮೀರದಂತೆ ಇದ್ದರೆ, ಅಂತಹ ನೇಕಾರರಿಗೆ ತಲಾ 3 ಸಾವಿರ ರೂ., 59 ಸಾವಿರ ಪವರ್ ಲೂಂಗಳಿಗೆ 35 ಕೋಟಿ ರೂ ವೆಚ್ಚವಾಗಲಿದೆ. ಚಲನಚಿತ್ರ ಮತ್ತು ದೂರದರ್ಶನ ಮಾಧ್ಯಮಗಳ ನೊಂದಾಯಿತ ಕಲಾವಿದರು, ಕಾರ್ಮಿಕರು, ತಂತ್ರಜ್ಞರಿಗೆ ತಲಾ 3 ಸಾವಿರ ರೂ. ಪರಿಹಾರವಾಗಿ ಘೋಷಿಸಲಾಗಿದೆ. 22 ಸಾವಿರ ಫಲಾನುಭವಿಗಳಿದ್ದಾರೆ.
- ರಾಜ್ಯದ 18,746 ಮೀನುಗಾರರಿಗೆ ತಲಾ 3 ಸಾವಿರ ರೂ. ಪರಿಹಾರ ಘೋಷಿಸಿದ್ದು, ಒಟ್ಟು 5.6 ಕೋಟಿ ರೂ. ವೆಚ್ಚವಾಗಲಿದೆ. ಒಟ್ಟು 7,668 ಇನ್ ಲ್ಯಾಂಡ್ ದೋಣಿ ಮಾಲೀಕರಿಗೆ ತಲಾ 3 ಸಾವಿರ ರೂ. ಪರಿಹಾರ ನೀಡಲಾಗುತ್ತದೆ. ಇದಕ್ಕೆ 2.3 ಕೋಟಿ ರೂ ವೆಚ್ಚವಾಗಲಿದೆ. ಒಳನಾಡು ಮೀನುಗಾರಿಕೆಗೆ ಸರ್ಕಾರಕ್ಕೆ ನೀಡಬೇಕಾದ ಕಾಂಟ್ರ್ಯಾಕ್ಟ್ ಪೀಸ್ ನಲ್ಲಿ ಶೇ.25 ರಷ್ಟು ರಿಯಾಯಿತಿ ನೀಡಲಾಗುತ್ತದೆ ಎಂದರು.
- ಮುಜರಾಯಿ ಇಲಾಖೆಯ “ಸಿ” ವರ್ಗದ ದೇವಸ್ಥಾನಗಳಲ್ಲಿ ಕೆಲಸ ಮಾಡುವ ಅರ್ಚಕರು, ಅಡುಗೆ ಕೆಲಸಗಾರರು ಮತ್ತು ಸಿಬ್ಬಂದಿಗೆ ತಲಾ 3,000 ರೂ.ಗಳನ್ನು ನೀಡಲು ನಿರ್ಧರಿಸಲಾಗಿದೆ. ಈ ವರ್ಗದಲ್ಲಿ ಸುಮಾರು 36,047 ಜನರಿದ್ದು, 10.8 ಕೋಟಿ ರೂ. ವೆಚ್ಚವಾಗಲಿದೆ.
- ಮಸೀದಿಗಳಲ್ಲಿ ಕಾರ್ಯನಿರ್ವಹಿಸುವ ಪೇಶ್ ಇಮಾಮ್ ಮತ್ತು ಫೌಜಿಂಗಳಿಗೆ ತಲಾ 3,000 ರೂ., ಆಶಾ ಕಾರ್ಯಕರ್ತರಿಗೆ ತಲಾ 3,000 ರೂ, ಪರಿಹಾರ ನೀಡಲು ನಿರ್ಧರಿಸಿದ್ದು, ಇದರಿಂದ ಒಟ್ಟು 42,574 ಆಶಾ ಕಾರ್ಯಕರ್ತರಿಗೆ ಸಹಾಯವಾಗಲಿದೆ.
- 64,423 ಅಂಗನವಾಡಿಯ ಕಾರ್ಯಕರ್ತರು ಹಾಗೂ 59,169 ಅಂಗನವಾಡಿ ಸಹಾಯಕರಿಗೆ ತಲಾ 2,000 ರೂ. ಗಳಂತೆ ಪರಿಹಾರ ನೀಡಲು ನಿರ್ಧರಿಸಲಾಗಿದೆ. ಇದರಿಂದ ಸರ್ಕಾರಕ್ಕೆ ಅಂದಾಜು ರೂ 24.7 ಕೋಟಿ ವೆಚ್ಚವಾಗಲಿದೆ.
- ಶಾಲಾ ಮಕ್ಕಳಿಗೆ ಹಾಲಿನ ಪುಡಿಯನ್ನು ನೀಡಲು ನಿರ್ಧರಿಸಲಾಗಿದೆ. ಕೊರೊನಾದಿಂದಾಗಿ ಎಲ್ಲಾ ಶಾಲೆಗಳನ್ನು ಮುಚ್ಚಿದ್ದರೂ ಆಹಾರ ಧಾನ್ಯಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿದೆ. ಹೆಚ್ಚುವರಿಯಾಗಿ ಆಹಾರ ಧಾನ್ಯಗಳ ಜೊತೆಗೆ ಅರ್ಧ ಕೆ.ಜಿ ಹಾಲಿನ ಪುಡಿಯನ್ನು ಜೂನ್ ಮತ್ತು ಜುಲೈ ತಿಂಗಳಿನಲ್ಲಿ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಅಂದಾಜು ರೂ 100 ಕೋಟಿ ವೆಚ್ಚವಾಗಲಿದೆ.
- ಅನುದಾನ ರಹಿತ ಶಾಲೆಗಳ ಶಿಕ್ಷಕರಿಗೆ ತಲಾ 5,000 ರೂ. ಪರಿಹಾರ ನೀಡಲಾಗುವುದು. ಇದಕ್ಕಾಗಿ ಸುಮಾರು 100 ಕೋಟಿ ರೂ. ವೆಚ್ಚವಾಗಲಿದೆ.
- ನ್ಯಾಯವಾದಿಗಳ ಕಲ್ಯಾಣ ನಿಧಿಗೆ 5 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ. ಈ ನಿಧಿಯನ್ನು ಅಗತ್ಯವಿರುವ ನ್ಯಾಯವಾದಿಗಳು ಮತ್ತು ಬೆಂಚ್ ಗುಮಾಸ್ತರುಗಳಿಗೆ ಉಪಯೋಗಿಸಲಾಗುವುದು.
- MSME ಕೈಗಾರಿಕೆಗಳಿಗೆ ಮೇ ಮತ್ತು ಜೂನ್ 2021ರ ಮಾಹೆಗಳ ಮಾಸಿಕ ವಿದ್ಯುತ್ ನಿಗದಿತ ಶುಲ್ಕಗಳನ್ನು (Fixed charges) ಪಾವತಿಸುವುದರಿಂದ ವಿನಾಯಿತಿಯನ್ನು ನೀಡಲಾಗುವುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ರೂ 114.70 ಕೋಟಿ ಹೊರೆಯಾಗುತ್ತದೆಂದು ಅಂದಾಜಿಸಿದೆ.
- MSME ಕೈಗಾರಿಕೆಗಳನ್ನು ಹೊರತುಪಡಿಸಿ, ಇತರೆ ಕೈಗಾರಿಕೆಗಳ ಗ್ರಾಹಕರು ಮೇ ಮತ್ತು ಜೂನ್ 2021ರ ಮಾಹೆಗಳ ಮಾಸಿಕ ವಿದ್ಯುತ್ ನಿಗದಿತ ಶುಲ್ಕ ಪಾವತಿಸುವುದನ್ನು 2021ರ ಜುಲೈ 30 ರವರೆಗೆ ಮುಂದೂಡಲಾಗುವುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ರೂ 5.56 ಕೋಟಿ ಹೊರೆಯಾಗುತ್ತದೆಂದು ಅಂದಾಜಿಸಿದೆ.