ಹೊಸಕೋಟೆ: ದೇಶವೇ ಲಾಕ್ ಡೌನ್ ಆಗಿರುವ ಬೆನ್ನಲ್ಲೇ ಗುಲಾಬಿ ಬೆಳೆಗಾರರ ಬದುಕು ಬೀದಿಗೆ ಬಂದಿದೆ. ಬೆಂಗಳೂರು ನಗರದ ಕೂಗಳತೆ ದೂರದಲ್ಲಿರುವ ಹೊಸಕೋಟೆ ತಾಲೂಕು ಗುಲಾಬಿ ನಗರವೆಂದೇ ಪ್ರಸಿದ್ಧಿ ಪಡೆದಿದೆ. ಆದರೆ ಲಾಕ್ಡೌನ್ ಹಿನ್ನೆಲೆ ರೈತರು ಬೆಳೆದ ಗುಲಾಬಿ ಮಾರಾಟವಾಗದೆ ರಸ್ತೆಗೆ ಸುರಿಯುವ ಸನ್ನಿವೇಶ ಎದುರಾಗಿದೆ.
ಸಂಕಷ್ಟಕ್ಕೆ ಸಿಲುಕಿದ ಗುಲಾಬಿ ಹೂ ಬೆಳೆಗಾರರು ಹೊಸಕೋಟೆ ತಾಲೂಕಿನ ಸಮೇತನಹಳ್ಳಿ , ನಾಗನಾಯಕನ ಕೋಟೆ, ಕುಂಬಳಹಳ್ಳಿ , ಉಪ್ಪಾರಹಳ್ಳಿ , ಕುರುಬರಹಳ್ಳಿ , ಹಲಸಹಳ್ಳಿ , ದಾಸರಹಳ್ಳಿ , ಗೊಟ್ಟಿಪುರ , ಆಲಪ್ಪನಹಳ್ಳಿ , ಕಣ್ಣೂರ ಹಳ್ಳಿ ಸೇರಿ ಹಲವಾರು ಗ್ರಾಮಗಳಲ್ಲಿ ಸುಮಾರು 4 ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಗುಲಾಬಿ ಹೂ ಬೆಳೆದಿದ್ದಾರೆ. ಆದರೆ ಲಾಕ್ಡೌನ್ನಿಂದ ರೈತರಿಗೆ ಸಾಗಣೆ ಮಾಡಲು ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದ ಪರಿಣಾಮವಾಗಿ ಹೂ ಮಾರಾಟ ಗಣನೀಯವಾಗಿ ಇಳಿಮುಖವಾಗಿದೆ.
ಯಾವುದೇ ಶುಭ ಸಮಾರಂಭಗಳು ನಡೆಯುತ್ತಿಲ್ಲ. ದೇವಾಲಯಗಳು ತೆರೆಯುತ್ತಿಲ್ಲ. ಮದುವೆ ಮತ್ತಿತರ ಶುಭ ಸಮಾರಂಭಗಳಿಲ್ಲದೇ ನಷ್ಟವುಂಟಾಗುತ್ತಿದೆ. ಇಲ್ಲಿಯವರೆಗೆ ಗುಲಾಬಿ ಹೂವನ್ನು ರಾಜ್ಯ, ರಾಷ್ಟ್ರ ಮತ್ತು ವಿದೇಶಗಳಿಗೆ ರಫ್ತು ಮಾಡಲಾಗುತ್ತಿತ್ತು. ಆದರೆ, ಈಗ ಸಾವಿರಾರು ಟನ್ ಹೂವಿನ ಬೆಳೆ ಮಾರಾಟವಾಗದೆ ಬಾಡಿ ನೆಲಕ್ಕುದುರಿದ್ದು, ಇನ್ನೂ ಕೆಲವು ರೈತರು ಹೂವುಗಳನ್ನು ಕಿತ್ತು ಬೀದಿಗೆ ಸುರಿದಿದ್ದಾರೆ. ಇಂದರಿಂದ ರೈತರು ಸರ್ಕಾರದ ಮೊರೆ ಹೋಗಿದ್ದಾರೆ. ಆದರೆ ಸಾಲ ಮಾಡಿ ಬಂಡವಾಳ ಹಾಕಿ ಗುಲಾಬಿ ಬೆಳೆದಿರುವ ರೈತರ ಸ್ಥಿತಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅಲ್ಲದೆ ಸ್ವತಃ ಹೂ ಬೆಳೆದ ರೈತರೇ ಹೂವುಗಳನ್ನು ಕಿತ್ತು ರಸ್ತೆಗೆ ಸುರಿದು ಬೆಂಕಿ ಹಚ್ಚುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ತೋಟಗಾರಿಕೆ ಇಲಾಖೆ ಮೂಲಕ ಗುಲಾಬಿ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.