ಬೆಂಗಳೂರು:ಲಾಕ್ಡೌನ್ ಕಾರಣಕ್ಕೆ ವಲಸಿಗ ಕಾರ್ಮಿಕರು ಬಹಳ ಸಂಖ್ಯೆಯಲ್ಲಿ ತಮ್ಮ ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಅವರಿಗೆ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೂಚಿಸಿದ್ದಾರೆ.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. 2020-21ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ 13 ಕೋಟಿ ರೂ. ಮಾನವ ದಿನಗಳ ಸೃಜನೆಯ ಗುರಿ ಹಾಗೂ 6315.79 ಕೋಟಿ ರೂ. ಅನುದಾನ ನಿಗದಿ ಪಡಿಸಲಾಗಿದೆ. ಇದಲ್ಲದೆ ಕೇಂದ್ರ ಸರ್ಕಾರವೂ ಉದ್ಯೋಗ ಖಾತರಿ ಯೋಜನೆಗೆ 40 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ ನಿಗದಿ ಪಡಿಸಿರುವ ಹಿನ್ನೆಲೆಯಲ್ಲಿ, ವಲಸಿಗ ಕಾರ್ಮಿಕರಿಗೆ ಉದ್ಯೋಗ ದೊರೆಯುವಂತೆ ಹಾಗೂ ನಿಗದಿತ ಅವಧಿಯಲ್ಲಿ ವೇತನ ಪಾವತಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್- 19 ನಿರ್ವಹಣೆಗೆ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಟಾಸ್ಕ್ ಫೋರ್ಸ್ ರಚಿಸಿ, ಜನ ಜಾಗೃತಿ ಮೂಡಿಸುವುದು ಲಾಕ್ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳ ಮನೆ ಬಾಗಿಲಿಗೆ ವಿತರಣೆ, ಸೌಲಭ್ಯಗಳ ವಿತರಣೆ, ಮನೆ ಮನೆ ಭೇಟಿ ನೀಡಿ ಹೋಮ್ ಕ್ವಾರಂಟೈನ್ ಪರಿಶೀಲನೆ, ದೈನಂದಿನ ಮಾಹಿತಿ ಸಂಗ್ರಹ, ಸಾಂಸ್ಥಿಕ ಕ್ವಾರಂಟೈನ್ ನಿರ್ವಹಣೆ ಮೇಲ್ವಿಚಾರಣೆ ವಹಿಸುತ್ತಿದೆ. ಇದಲ್ಲದೆ, ಸ್ವಸಹಾಯ ಸಂಘಗಳು 8 ಲಕ್ಷ ಮಾಸ್ಕ್ ತಯಾರಿಸಿ ವಿತರಿಸುತ್ತಿವೆ. ಇದರಿಂದ ಗ್ರಾಮೀಣ ಪ್ರದೇಶದ ಜನರಲ್ಲಿ ಆತ್ಮವಿಶ್ವಾಸ ಮೂಡಿಸಲು ಸಾಧ್ಯವಾಗಿರುವ ಕುರಿತು ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು.