ಬೆಂಗಳೂರು: ಲಾಕ್ ಡೌನ್ ತೀರ್ಮಾನ ಸರ್ಕಾರ ಮಾಡುವುದಿಲ್ಲ. ತಜ್ಞರು ಕೊಡುವ ವರದಿಯ ಮೇಲೆ ತೀರ್ಮಾನ ಮಾಡಬೇಕಾಗುತ್ತದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಂಜೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊರೊನಾ ಕೇಸ್ಗಳು ದಿನೆ ದಿನೇ ಹೆಚ್ಚುತ್ತಿರುವುದರಿಂದ ಏನಾಗುತ್ತದೋ ಎಂಬ ಭಯ ಕಾಡುತ್ತಿದೆ. ತಜ್ಞರು ಕೊಡುವ ವರದಿ ಆಧಾರದ ಮೇಲೆ ಲಾಕ್ ಡೌನ್ ಮಾಡಬೇಕಾ, ಬೇಡವಾ ಎಂದು ಯೋಚನೆ ಮಾಡುತ್ತೇವೆ. ಇದು ರಾಜಕೀಯ ನಿರ್ಧಾರವಲ್ಲ ಎಂದರು.
ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೆ ಯಾರೊಬ್ಬರೂ ಕೂಡ ಮೈ ಮರೆಯಬಾರದು. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಸಮುದಾಯಕ್ಕೆ ಹರಡದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರಿಗೆ ಸ್ಥಳೀಯರು ಅಡ್ಡಿಪಡಿಸಿ ಬೈದು ಕಳುಹಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜನರಿಗೆ ಕೊರೊನಾ ಭಯ ಕಾಡುತ್ತಿದೆ. ಬೆಂಗಳೂರಿನಲ್ಲಿ ಹೆಚ್ಚು ಕೇಸ್ಗಳು ಬರುತ್ತಿರುವುದರಿಂದ ಸ್ವಾಭಾವಿಕವಾಗಿ ಭಯಪಡುವುದು ಸಾಮಾನ್ಯ. ಅದಕ್ಕಾಗಿ ಪ್ರವಾಸಿಗರಿಗೆ ವಿನಂತಿ ಮಾಡಿಕೊಳ್ಳುತ್ತೇನೆ. ಇನ್ನು 15 ದಿನಗಳ ಕಾಲ ಪ್ರವಾಸವನ್ನು ಮುಂದೂಡಿದರೆ ಒಳ್ಳೆಯದು. ಆತಂಕ ಕಡಿಮೆಯಾಗುವವರೆಗೆ ಪ್ರವಾಸ ಮಾಡುವುದು ಬೇಡ. ಕಳೆದ ಶನಿವಾರ ಮತ್ತು ಭಾನುವಾರ ಸುಮಾರು 7 ಸಾವಿರ ಆನೆಗಳು ಬಂದಿವೆ. ಅಲ್ಲಿ ಪ್ರವಾಸಿಗರು ಬಂದಾಗ ಯಾವುದೇ ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವನ್ನ ಕಾಯ್ದುಕೊಂಡಿಲ್ಲ ಎಂಬುದು ನನ್ನ ಗಮನಕ್ಕೆ ಬಂದಿದೆ ಎಂದು ಹೇಳಿದರು.
ಇವತ್ತು ನೀತಿ ಆಯೋಗದ ಅಧ್ಯಕ್ಷ ಅಮಿತಾಬ್ ಖಾನ್ ಅವರ ಜೊತೆಗೆ ವರ್ಚುವಲ್ ಮೀಟಿಂಗ್ ಇತ್ತು. ಪ್ರಧಾನಿ ಭಾಷಣದ ಮಧ್ಯೆ ರದ್ದಾಗಿದೆ ಎಂದರು.
ಕಾಂಗ್ರೆಸ್ ನಾಯಕರಿಗೆ ಭಯ : ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತನಾಡಲ್ಲ ಅನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷ ಮತ್ತು ಪಕ್ಷದ ಕಾರ್ಯಕರ್ತರ ಜೊತೆ ನಮ್ಮ ಸಂಬಂಧ ಇದೆಯೇ ಹೊರತು ಬೇರೆಯವರ ಜೊತೆಯಲ್ಲ. ನಮಗೆ ಅವರ ಜೊತೆ ಯಾವುದೇ ಸೋದರ ಮಾವನ ಸಂಬಂಧ ಇಲ್ಲ. ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಅನೇಕ ಹಿರಿಯ ಕಾಂಗ್ರೆಸ್ ನಾಯಕರಿಗೆ ಭಯ ಹುಟ್ಟಿಸುವಂತಿದೆ ಎಂದು ಲೇವಡಿ ಮಾಡಿದರು.