ಬೆಂಗಳೂರು:ಸರ್ಕಾರದ ಆದೇಶದಂತೆ ನಗರದಲ್ಲಿ ಇಂದು ರಾತ್ರಿ 8ರಿಂದ ಜು. 22ರ ಬೆಳಗ್ಗೆ 5 ಗಂಟೆಯವರೆಗೆ ಲಾಕ್ಡೌನ್ ಜಾರಿಯಾಗಿದೆ. ಈ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾರಿಗೆಗಳ ಸಂಚಾರ ಇರುವುದಿಲ್ಲ. ಹಾಗೆ ಬೆಂಗಳೂರಿನಿಂದ ಅಂತಾರಾಜ್ಯ ಸಾರಿಗೆ ಕಾರ್ಯಾಚರಣೆಯೂ ಸಹ ಇರುವುದಿಲ್ಲ ಎಂದು ಕೆಎಸ್ಆರ್ಟಿಸಿ ಸ್ಪಷ್ಟಪಡಿಸಿದೆ.
ಬೆಂಗಳೂರು ಲಾಕ್ಡೌನ್ ಹಿನ್ನೆಲೆ ಮುಂಗಡ ಟಿಕೆಟ್ ಬುಕ್ಕಿಂಗ್ ರದ್ದು - Advance Ticket Booking Cancel
ಸಿಲಿಕಾನ್ ಸಿಟಿಯಲ್ಲಿ ಇಂದು ರಾತ್ರಿ 8 ಗಂಟೆಯಿಂದಲೇ ಲಾಕ್ಡೌನ್ ಆರಂಭವಾಗಿದ್ದು, ಇದು ಜು.22ರ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಾರಿಗೆಗಳ ಸಂಚಾರ ಇರುವುದಿಲ್ಲ ಎಂದು ಕೆಎಸ್ಆರ್ಟಿಸಿ ಸ್ಪಷ್ಟನೆ ನೀಡಿದೆ.
ಸದ್ಯದ ಅವಧಿಯಲ್ಲಿ ಬೆಂಗಳೂರಿನಿಂದ ವಿವಿಧ ಸ್ಥಳಗಳಿಗೆ ಮತ್ತು ಇತರೆ ಸ್ಥಳಗಳಿಂದ ಬೆಂಗಳೂರಿಗೆ ಕಾರ್ಯಾಚರಣೆಯಾಗುವ ಬಸ್ಗಳ ಮುಂಗಡ ಟಿಕೆಟ್ ಬುಕ್ಕಿಂಗ್ ರದ್ದುಪಡಿಸಲಾಗಿದೆ. ಮುಂಗಡ ಕಾಯ್ದಿರಿಸಿದ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡಲಾಗುತ್ತಿದೆ. ಇನ್ನು ಮೇಲ್ಕಂಡ ಎರಡು ಜಿಲ್ಲೆಗಳು ಹೊರತುಪಡಿಸಿ, ಉಳಿದ ಜಿಲ್ಲೆಗಳ ಜಿಲ್ಲಾಡಳಿತದ ಆದೇಶದನ್ವಯ ಬಸ್ಗಳ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ.
ಇನ್ನು ಇಂದು ರಾತ್ರಿ 8 ಗಂಟೆಯವರೆಗೆ ಒಟ್ಟು 1,300 ಬಸ್ಗಳನ್ನು ಬೆಂಗಳೂರಿನಿಂದ ಕಾರ್ಯಚರಣೆಗೊಳಿಸಿದ್ದು, 26,000 ಪ್ರಯಾಣಿಕರು ಈಗಾಗಲೇ ಪ್ರಯಾಣಿಸಿದ್ದಾರೆ. ಪ್ರಮುಖ ಸ್ಥಳಗಳಾದ ಹೊಸದುರ್ಗ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು, ಬಳ್ಳಾರಿ, ಯಾದಗಿರಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್ಗಳು ಹೋಗಿವೆ. ಇನ್ನು ಇಂದು 160 ಬಸ್ಗಳ ಮುಂಗಡ ಟಿಕೆಟ್ ಬುಕ್ಕಿಂಗ್ ಆಗಿವೆ.