ಬೆಂಗಳೂರು:ಮೇ 24ರಿಂದ ಜೂನ್ 7ರ ವರೆಗೆ ಕಠಿಣ ನಿರ್ಬಂಧಗಳಿರುವ ಲಾಕ್‌ಡೌನ್ 3.O ರಾಜ್ಯಾದ್ಯಂತ ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಈವರೆಗಿನ ಲಾಕ್‌ಡೌನ್ ನಲ್ಲಿದ್ದ ನಿರ್ಬಂಧಗಳೇ ವಿಸ್ತರಿತ ಎರಡು ವಾರಗಳ ಲಾಕ್‌ಡೌನ್‌ನಲ್ಲಿ ಮುಂದುವರಿಯಲಿದೆ.
ಈ ಸಂಬಂಧ ಸರ್ಕಾರ ಮಾರ್ಗಸೂಚಿಸಿ ಹೊರಡಿಸಿದ್ದು, ಮೇ 24 ಬೆಳಗ್ಗೆ 6 ಗಂಟೆಯಿಂದ ಜೂನ್ 7ರ ಬೆಳಗ್ಗೆ 6 ಗಂಟೆವರೆಗೆ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಯಲ್ಲಿರಲಿದೆ. ಜನರ ಓಡಾಟಕ್ಕೆ ಕಠಿಣ ನಿರ್ಬಂಧ ಹೇರಲಾಗುತ್ತದೆ. ಲಾಕ್‌ಡೌನ್ 2.Oನಲ್ಲಿದ್ದ ಮಾರ್ಗಸೂಚಿಯೇ 3.O ಲಾಕ್‌ಡೌನ್ ನಲ್ಲಿ ಮುಂದುವರಿಯಲಿದೆ. ಈ ಹಿಂದಿನಂತೆಯೇ ವಿಸ್ತರಿತ ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅವಕಾಶ ಮಾಡಿಕೊಡಲಾಗಿದೆ. ಕಿರಾಣಿ ಅಂಗಡಿ, ಮದ್ಯದ ಅಂಗಡಿ, ಮಾಂಸ, ತರಕಾರಿ ಅಂಗಡಿ ತೆರೆಯಲಿದ್ದು, ಬಳಿಕ ವ್ಯಾಪಾರಕ್ಕೆ ಯಾವುದೇ ಅವಕಾಶ ಇಲ್ಲ. ಬೆಳಗ್ಗೆ 10 ಗಂಟೆಯ ಬಳಿಕ ಜನರ ಓಡಾಟಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗುತ್ತದೆ. ಅಂತರ್ ಜಿಲ್ಲೆ, ರಾಜ್ಯಗಳ ನಡುವೆ ಓಡಾಟಕ್ಕೆ ನಿರ್ಬಂಧ ಹೇರಿಲ್ಲ. ಅದೇ ರೀತಿ ಗೂಡ್ಸ್ ಲಾರಿಗಳ ಸಂಚಾರಕ್ಕೆ ಮುಕ್ತ ಅವಕಾಶ ಇದೆ.
ಈಗಾಗಲೇ ನಿಗದಿಯಾಗಿರುವ ವಿಮಾನ ಮತ್ತು ರೈಲುಗಳು ಯಥಾವತ್ ಆಗಿ ಸಂಚಾರ ನಡೆಸಲಿವೆ. ಟ್ಯಾಕ್ಸಿ ಮತ್ತು ಆಟೋಗಳು ತುರ್ತು ಸಂದರ್ಭಗಳಲ್ಲಿ ಹಾಗೂ ಮಾರ್ಗಸೂಚಿಯಲ್ಲಿ ಅನುಮತಿಸಿದ ರೀತಿಯಲ್ಲಿ ಸಂಚರಿಸಲು ಅವಕಾಶವಿದೆ. ಎಲ್ಲ ಸರಕು ಸಾಗಣೆ ವಾಹನಗಳ ಮುಕ್ತ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ವಿಮಾನ, ರೈಲು ನಿಲ್ದಾಣಗಳಿಂದ ಪ್ರಯಾಣಿಕರನ್ನು ಕರೆತರಲು ಆಟೋ, ಟ್ಯಾಕ್ಸಿ, ಒಲಾ, ಉಬರ್ ಬಳಸಬಹುದು. ಆದರೆ, ಪ್ರಯಾಣ ಟಿಕೆಟ್ ತೋರಿಸಬೇಕು. ಇಲ್ಲವಾದರೆ ವಾಹನ ಜಪ್ತಿ ಮಾಡಲಾಗುತ್ತದೆ.
ಅಗತ್ಯ ವಸ್ತುಗಳ ಅಂಗಡಿಗಳಿಗೆ ನಿರ್ಬಂಧಿತ ಅವಕಾಶ ನೀಡಲಾಗಿದೆ. ಹೋಟೆಲ್ಗಳು, ರೆಸ್ಟೋರೆಂಟ್ ಗಳು ಮತ್ತು ಆಹಾರ ಮಳಿಗೆಗಳು ಪಾರ್ಸೆಲ್ ಹಾಗೂ ಹೋಂ ಡೆಲಿವರಿ ಸೇವೆಗಳನ್ನು ಮಾತ್ರ ಒದಗಿಸಲು ಅನುಮತಿಸಲಾಗುತ್ತದೆ. ಆಹಾರ ಸಾಮಗ್ರಿ, ದಿನಸಿ ವಸ್ತುಗಳು, ಹಣ್ಣು ಮತ್ತು ತರಕಾರಿ, ಮಾಂಸ ಮತ್ತು ಮೀನಿನ ಮಳಿಗೆಗಳು ಮತ್ತು ಪಶು ಆಹಾರದ ಮಳಿಗೆಗಳು ಬೆಳಗ್ಗೆ 6 ರಿಂದ 10 ಗಂಟೆಯ ವರೆಗೆ ಮಾತ್ರ ತೆರೆಯಲಿವೆ. ಹಾಲಿನ ಬೂತ್ಗಳು ಹಾಗೂ ತಳ್ಳುಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ಅವಕಾಶ ಇರಲಿದೆ. ನ್ಯಾಯಬೆಲೆ ಅಂಗಡಿಗಳು ತೆರೆಯಲಿವೆ. ಮದ್ಯ ಮಾರಾಟ ಮಳಿಗೆಗಳು ಕೇವಲ ಪಾರ್ಸೆಲ್ ಸೇವೆಗಾಗಿ ಬೆಳಿಗ್ಗೆ 6 ರಿಂದ 10ರ ವರೆಗೆ ತೆರೆಯಲಿವೆ.