ಬೆಂಗಳೂರು: ಲಾಕ್ಡೌನ್ನಿಂದ ಬೆಂಗಳೂರು ಸ್ತಬ್ಧವಾಗಿದೆ. ಪ್ರಾಣಿಪ್ರಿಯರು ಆಹಾರ ಒದಗಿಸೋದರ ಮೇಲೆಯೇ ಬೀದಿನಾಯಿಗಳು ಅವಲಂಬಿತವಾಗಿದ್ದವು. ಹೀಗಾಗಿ ಮೂಕ ಪ್ರಾಣಿಗಳಿಗೆ ಆಹಾರ ಹಾಕೋಕೆ ಅಂತ ಬಿಬಿಎಂಪಿ ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಹಾಗೂ ಸಂಜೆ 6 ಗಂಟೆಯಿಂದ 9 ಗಂಟೆಯವರಿಗೆ ಆಹಾರ ಹಾಕೋಕೆ ಅನುಮತಿಸಿದೆ. ಇದಕ್ಕಾಗಿ ಪಾಸ್ ನೀಡಲು ಪಾಲಿಕೆ ನಿರ್ಧರಿಸಿದೆ.
ಬೆಂಗಳೂರು ನಗರದ ಪೂರ್ವ ವಲಯ, ದಕ್ಷಿಣ ವಲಯ, ಆರ್.ಆರ್. ನಗರ, ಮಹದೇವಪುರ, ಯಲಹಂಕ, ಬೆಂಗಳೂರು ಪಶ್ಚಿಮ ಹಾಗೂ ಬೊಮ್ಮನಹಳ್ಳಿ ವಲಯಗಳಲ್ಲಿ ಸರ್ಕಾರೇತರ ಸಂಸ್ಥೆಗಳನ್ನು ಗುರುತಿಸಿ ಆಹಾರ ನೀಡಲು ಮನವಿ ಮಾಡಲಾಗಿದೆ. ಇವರಿಗೆ ಬೇಕಾದ ವಾಹನದ ವ್ಯವಸ್ಥೆಯನ್ನು ಪಾಲಿಕೆ ಮಾಡಲಿದೆ.
ಬಿಬಿಎಂಪಿಯ ಮನವಿಗೆ ನೂರಾರು ಪ್ರಾಣಿಪ್ರಿಯರು ಕೈಜೋಡಿಸಿದ್ದಾರೆ. ಪ್ರಾಣಿ ಪ್ರಿಯರು ತಮ್ಮ ಮನೆ ಬಳಿಯ ಹತ್ತು, ಇಪ್ಪತ್ತು ನಾಯಿಗಳಿಗೆ ಬಿಸ್ಕೆಟ್, ಆಹಾರ ತಯಾರಿಸಿ ಹಾಕುತ್ತಿದ್ದಾರೆ.
ಸಿವಿಲ್ ಡಿಫೆನ್ಸ್, ಕ್ವಿಕ್ ರೆಸ್ಪಾನ್ಸ್ ತಂಡದಿಂದಲೂ ಬೀದಿ ಪ್ರಾಣಿಗಳಿಗೆ ಆಹಾರ ಒದಗಿಸಲಾಗುತ್ತಿದೆ. ನಗರದಲ್ಲಿ ಫೀಡಿಂಗ್ ಪೆಟ್ಸ್ ಎಂಬ ವಾಟ್ಸ್ ಆ್ಯಪ್ ಗ್ರೂಪ್ ರಚಿಸಿ, ಅದರಲ್ಲಿರುವ 170 ಪ್ರಾಣಿಪ್ರಿಯರು ತಮ್ಮ ಪ್ರದೇಶದಲ್ಲಿ ಆಹಾರ ನೀಡುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ಸಿವಿಲ್ ಢಿಫೆನ್ಸ್, ಕ್ವಿಕ್ ರೆಸ್ಪಾನ್ಸ್ ಟೀಂನ ಎಂ.ನಾಗೇಂದ್ರನ್, ವೈಯಕ್ತಿಕವಾಗಿ ಹಾಗೂ ಸ್ವಯಂಸೇವಾ ಸಂಸ್ಥೆಗಳು ಎಷ್ಟೇ ಬೀದಿನಾಯಿಗಳಿಗೆ ಆಹಾರ ಹಾಕಿದ್ರೂ ಹಲವು ಪ್ರದೇಶಗಳಲ್ಲಿ ನಾಯಿಗಳಿಗೆ ಆಹಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಬೊಮ್ಮನಹಳ್ಳಿ ವಲಯದಲ್ಲಿ ಮಂಜರಿ ಎಂಬುವವರು, ಪ್ರತಿ ದಿನ 2 ಸಾವಿರ ಊಟ ಸಿದ್ಧಪಡಿಸಿ ಆಹಾರವಿಲ್ಲದ ಪ್ರಾಣಿಗಳ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ.
ಇನ್ನೂ ಕೆಲವೆಡೆ ಬಿಬಿಎಂಪಿಯಿಂದ ಅಗತ್ಯ ಪ್ರೋತ್ಸಾಹ ಸಿಗುತ್ತಿಲ್ಲ, ಪಾಸ್ ನೀಡುತ್ತಿಲ್ಲ, ಗಾಯಗೊಂಡ ನಾಯಿಗಳಿಗೆ ಚಿಕಿತ್ಸೆ ಸೌಲಭ್ಯವೂ ಇಲ್ಲ ಎಂದು ಹಲವು ಪ್ರಾಣಿಪ್ರಿಯರು ದೂರಿದ್ದಾರೆ.