ಬೆಂಗಳೂರು:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಅಟ್ಟಹಾಸ ಹೆಚ್ಚಾದ ಹಿನ್ನೆಲೆ ಒಂದು ವಾರ ಲಾಕ್ಡೌನ್ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ನ ಎರಡು ದ್ವಾರಗಳನ್ನೂ ಬಂದ್ ಮಾಡಲಾಗಿದೆ.
ಬೆಂಗಳೂರಿನ ಮೆಜೆಸ್ಟಿಕ್ ನಿಲ್ದಾಣದ ದ್ವಾರಗಳು ಬಂದ್: ಅಗತ್ಯ ಸೇವೆಗಷ್ಟೇ ಬಿಎಂಟಿಸಿ ಸಂಚಾರ - ಬೆಂಗಳೂರಿನಲ್ಲಿ ಲಾಕ್ಡೌನ್
ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಹಾವಳಿ ನಿಯಂತ್ರಿಸಲು ಒಂದು ವಾರದ ಮಟ್ಟಿಗೆ ಲಾಕ್ಡೌನ್ ಹೇರಲಾಗಿದ್ದು, ಸಾರಿಗೆ ಸಂಪರ್ಕ ಬಂದ್ ಆಗಲಿದೆ.
ಮೆಜೆಸ್ಟಿಕ್ ಒಳಗೆ ಯಾರೂ ಪ್ರವೇಶಿಸದಂತೆ ಬ್ಯಾರಿಕೇಡ್ ಹಾಕಲಾಗಿದೆ. ಅಗತ್ಯ ಸೇವೆಗೆ ಒಳಪಡುವ ಬಿಎಂಟಿಸಿಯಲ್ಲಿ ಸಾಮಾನ್ಯ ಪ್ರಯಾಣಿಕರಿಗೆ ಅವಕಾಶ ಇರುವುದಿಲ್ಲ. ಸರ್ಕಾರಿ ಸಿಬ್ಬಂದಿ ಹಾಗೂ ಕೊರೊನಾ ವಾರಿಯರ್ಸ್ಗೆ ಮಾತ್ರವೇ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆಟೋ, ಟ್ಯಾಕ್ಸಿ, ಓಲಾ, ಉಬರ್, ಮೆಟ್ರೋ ಸೇರಿದಂತೆ ಎಲ್ಲ ಸಾರಿಗೆ ಸೇವೆ ಬಂದ್ ಆಗಿದೆ. ಡಿಪೋಗಳಲ್ಲೇ ಬಹುತೇಕ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳು ನಿಂತಿವೆ. ಕೇವಲ 134 ಬಿಎಂಟಿಸಿ ಬಸ್ಗಳು ಮಾತ್ರ ಅಗತ್ಯ ಸೇವೆಗೆ ಲಭ್ಯವಿರಲಿದ್ದು, ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಮಾತ್ರ ಓಡಾಟ ನಡೆಸಲಿವೆ.