ಕರ್ನಾಟಕ

karnataka

ETV Bharat / state

ನಂದಿ ಗಿರಿಧಾಮ ರೋಪ್ ವೇ ಯೋಜನೆಗೆ ತ್ವರಿತವಾಗಿ ಚಾಲನೆ ನೀಡಿ: ಅಧಿಕಾರಿಗಳಿಗೆ ಸಚಿವ ಯೋಗೇಶ್ವರ್​ ಸೂಚನೆ - ropeway Location verification in Nandi hills

ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ವಿಸ್ತರಣೆಗೆ ವಿಫುಲ ಅವಕಾಶಗಳಿವೆ. ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡಿ ದೇಶ-ವಿದೇಶಗಳ ಪ್ರವಾಸಿಗರು ಆಗಮಿಸುವಂತೆ ಮಾಡಬೇಕು ಎಂದು ಸಚಿವ ಯೋಗೇಶ್ವರ್​ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Progress Review Meeting of the Department of Tourism
ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ

By

Published : Jul 15, 2021, 11:35 PM IST

ಬೆಂಗಳೂರು: ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ನಂದಿ ಗಿರಿಧಾಮ ರೋಪ್ ವೇ ಯೋಜನೆಗೆ ತ್ವರಿತವಾಗಿ ಚಾಲನೆ ನೀಡಬೇಕು. ಜುಲೈ 23ರಂದು ಸ್ಥಳ ಪರಿಶೀಲನೆ ಮಾಡಿ ಅತೀ ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕೆಂದು ಸಚಿವ ಯೋಗೇಶ್ವರ್​ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಕುಮಾರ ಕೃಪ ಅತಿಥಿ ಗೃಹದಲ್ಲಿ ಪ್ರವಾಸೋದ್ಯಮ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಪ್ರವಾಸೋದ್ಯಮ ಸಚಿವ ಯೋಗೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಶ್ವವಿಖ್ಯಾತ ನಂದಿಬೆಟ್ಟ ಗಿರಿಧಾಮಕ್ಕೆ ರೋಪ್ ವೇ ನಿರ್ಮಾಣ ಮಾಡಲು ಇದೇ ಜುಲೈ 23ಕ್ಕೆ ಸ್ಥಳ ಪರಿಶೀಲನೆ ಮಾಡಲು ನಿರ್ಧರಿಸಲಾಯಿತು.

ಸಭೆಯಲ್ಲಿ AARCON INFRA ಸಂಸ್ಥೆಯವರು ನಂದಿ ಬೆಟ್ಟದ ರೋಪ್ ವೇ ಯೋಜನೆಯ ಪ್ರಾತ್ಯಕ್ಷಿತೆ ಪ್ರದರ್ಶಿಸಿದರು. ರೋಪ್ ವೇ ನಿರ್ಮಾಣದಲ್ಲಿ ಈ ಸಂಸ್ಥೆಗೆ 51 ವರ್ಷಗಳ ಅನುಭವವಿದ್ದು, ದೇಶ-ವಿದೇಶ ಹಾಗೂ ನಮ್ಮ ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ 64 ರೋಪ್ ವೇ ಗಳನ್ನು ನಿರ್ಮಾಣ ಮಾಡಿದ್ದಾರೆ ಎಂದು ಸಚಿವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.

ನಂದಿ ಗಿರಿಧಾಮ ರೋಪ್ ವೇ

ಅಧಿಕಾರಿಗಳಿಂದ ಯೋಜನೆ ಕುರಿತು ಮಾಹಿತಿ ಪಡೆದು ಪ್ರಾತ್ಯಕ್ಷಿಕೆ ವೀಕ್ಷಿಸಿದ ಸಚಿವ ಯೋಗೇಶ್ವರ್, ರಾಜ್ಯದ ಪ್ರಪ್ರಥಮ ರೋಪ್ ವೇಯನ್ನು ಪ್ರವಾಸಿಗರಿಗೆ ಒದಗಿಸಲು ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಸಭೆಯಲ್ಲಿ ಸೂಚಿಸಿದರು.

ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕೀಟ್ ನಿರ್ಮಾಣ: ಒರಿಸ್ಸಾದಲ್ಲಿ ಕೋನಾರ್ಕ್ ಸೂರ್ಯ ದೇವಾಲಯದಲ್ಲಿ ಪ್ರವಾಸಿಗರಿಗೆ ಸೂರ್ಯ ದೇವಾಲಯವನ್ನು ದರ್ಶನ ಮಾಡುವುದಕ್ಕೆ ಮುಂಚೆ ಅಲ್ಲಿ ನಿರ್ಮಾಣ ಮಾಡಿರುವ ಥಿಯೇಟರ್​ನಲ್ಲಿ ಸೂರ್ಯ ದೇವಾಲಯದ ಇತಿಹಾಸವನ್ನು ಚಲನಚಿತ್ರದ ಮೂಲಕ ತೋರಿಸಲಾಗುತ್ತದೆ. ನಂತರ, ಸೂರ್ಯ ದೇವಾಲಯ ದರ್ಶನ ಮಾಡಿಸಲಾಗುತ್ತದೆ.

ಅದೇ ಮಾದರಿಯಲ್ಲಿ ಜೈನ ಕಾಶಿ ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಇತಿಹಾಸವನ್ನು ಹೇಳುವ ಒಂದು ಡಾಕ್ಯುಮೆಂಟರಿಯನ್ನು ನಿರ್ಮಾಣ ಮಾಡಿ ಅದನ್ನು ಥಿಯೇಟರ್‌ನಲ್ಲಿ ಪ್ರದರ್ಶಿಸಬೇಕು. ನಂತರ ಪ್ರವಾಸಿಗರು ಗೋಮ್ಮಟೇಶ್ವರ ವೀಕ್ಷಣೆ ಮಾಡಲು ವ್ಯವಸ್ಥೆ ಕಲ್ಪಿಸಬೇಕು. ಈ ಮೂಲಕ ಪ್ರವಾಸಿಗರಿಗೆ ಬಾಹುಬಲಿಯ ಸಂಪೂರ್ಣ ಇತಿಹಾಸದ ಮಾಹಿತಿಯನ್ನು ನೀಡಬೇಕು ಎಂದು ಶ್ರವಣಬೆಳಗೊಳದಲ್ಲಿ ಜೈನ ಪ್ರವಾಸಿ ಸರ್ಕೀಟ್ ನಿರ್ಮಾಣ ಮಾಡುವುದಾಗಿ ಯೋಗೇಶ್ವರ್​ ತಿಳಿಸಿದರು.

ಬಂಡವಾಳ ಆಕರ್ಷಣೆ: ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ವಿಸ್ತರಣೆಗೆ ವಿಫುಲ ಅವಕಾಶಗಳಿವೆ. ಹೀಗಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚು ಉತ್ತೇಜನ ನೀಡಿ ದೇಶ ವಿದೇಶಗಳ ಪ್ರವಾಸಿಗರು ಆಗಮಿಸುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಪ್ರವಾಸಿ ಮೇಳವನ್ನು ಏರ್ಪಡಿಸುವ ಮೂಲಕ ಬಂಡವಾಳವನ್ನು ಆಕರ್ಷಿಸಬೇಕು ಎಂದರು.

ಮೈಸೂರು ವಸ್ತು ಪ್ರದರ್ಶನ ಕೇಂದ್ರದಲ್ಲಿ ಹೈಟೆಕ್ ಹಾಥ್ ವೇ ನಿರ್ಮಾಣ: ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರದ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ವಸ್ತು ಪ್ರದರ್ಶನ ಮೈದಾನದಲ್ಲಿ ಅತ್ಯಾಧುನಿಕವಾದ ಕಲೆ, ಸಂಸ್ಕೃತಿ, ಜಾನಪದ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಹಾಥ್ವೇ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಮೂರು ಹಂತಗಳಲ್ಲಿ ಈ ಬೃಹತ್ ಹಾಥ್ವೇ ಯೋಜನೆಯನ್ನು ಅನುಷ್ಠಾನಗೊಳಿಸಬೇಕು. ಅತೀ ಶೀಘ್ರದಲ್ಲಿ ಈ ವಿಷಯವನ್ನು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಕಾಮಗಾರಿಗೆ ಚಾಲನೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಂದಾಜು ರೂ. 100.00 ಕೋಟಿ ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳಲಿದೆ. ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿಪಡಿಸಲು ಬಂಡವಾಳ ಆರ್ಕಷಿಸುವ ಸಂಬಂಧ 'ದಿ ಇಂಡಿಯಾ ಎಕ್ಸ್‌ಪೋ-2023' ಬೃಹತ್ ಮೇಳವನ್ನು ಆಯೋಜಿಸಲು ಕಾರ್ಯೋನ್ಮುಖರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಓದಿ:'ಜಕ್ಕೂರ್ ಏರೋಡ್ರಮ್ ವ್ಯಾಪ್ತಿಯಲ್ಲಿ ನಿಯಮ ಮೀರಿ ನಿರ್ಮಿಸಿದ ಕಟ್ಟಡಗಳ ತೆರವಿಗೆ ಸೂಚನೆ'

ABOUT THE AUTHOR

...view details