ಕರ್ನಾಟಕ

karnataka

By

Published : Oct 13, 2022, 10:00 PM IST

ETV Bharat / state

ಪಬ್​ನಲ್ಲಿ ಉಂಟಾಗುತ್ತಿರುವ ಶಬ್ದದಿಂದ ಸ್ಥಳೀಯರಿಗೆ ತೊಂದರೆ: ಸರ್ಕಾರಕ್ಕೆ ನೋಟಿಸ್​ ಜಾರಿ

ಬೆಂಗಳೂರು ಬಿಟಿಎಂ ಬಡಾವಣೆಯ 2ನೇ ಹಂತದಲ್ಲಿರುವ ಅವೋನ್ ಪಬ್ ಅಂಡ್​ ಕಿಚನ್​ನಲ್ಲಿ ಉಂಟಾಗುತ್ತಿರುವ ಶಬ್ದ ಮಾಲಿನ್ಯದ ಬಗ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್​ ನೀಡಿದೆ.

locals-are-disturbed-by-the-noise-of-pub-hc-issued-notice-to-govt
ಪಬ್​ನಲ್ಲಿ ಉಂಟಾಗುತ್ತಿರುವ ಶಬ್ದದಿಂದ ಸ್ಥಳೀಯರಿಗೆ ತೊಂದರೆ: ಸರ್ಕಾರಕ್ಕೆ ನೋಟಿಸ್​ ಜಾರಿ

ಬೆಂಗಳೂರು: ನಗರದ ಬಿಟಿಎಂ ಬಡಾವಣೆಯ 2ನೇ ಹಂತದಲ್ಲಿರುವ ಅವೋನ್ ಪಬ್ ಅಂಡ್​ ಕಿಚನ್​ನಲ್ಲಿ ಉಂಟಾಗುತ್ತಿರುವ ಶಬ್ದ ಮಾಲಿನ್ಯದಿಂದಾಗಿ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂದು ಆಕ್ಷೇಪಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಸರ್ಕಾರ ಹಾಗೂ ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮ ಉಲ್ಲಂಘಿಸಿರುವ ಪಬ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸುವಂತೆ ಕೋರಿ ಲಲಿತಾ ಶ್ರೀನಿವಾಸನ್, ಟಿ.ಎಚ್.ಎಂ. ಶೈಲಜಾ ಸೇರಿ ಐವರು ಹಿರಿಯ ನಾಗರಿಕರು ಸಲ್ಲಿಸಿರುವ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರಿದ್ದ ವಿಭಾಗಿಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ನಗರಾಭಿವೃದ್ಧಿ ಇಲಾಖೆ, ನಗರ ಪೊಲೀಸ್ ಆಯುಕ್ತರು, ಮೈಕೋ ಲೇಔಟ್ ಠಾಣೆ ಪೊಲೀಸರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ), ಅವೋನ್ ಪಬ್ ಅಂಡ್​ ಕಿಚನ್ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಅರ್ಜಿಯಲ್ಲೇನಿದೆ: ಅವೋನ್ ಪಬ್ ಆ್ಯಂಡ್ ಕಿಚನ್‌ನಲ್ಲಿ ರಾತ್ರಿ 1ರಿಂದ 3ಗಂಟೆಯವರೆಗೂ ಜೋರಾಗಿ ಹಾಡುಗಳನ್ನು ಹಾಕುತ್ತ ಶಬ್ದ ಮಾಲಿನ್ಯ ಉಂಟು ಮಾಡಲಾಗುತ್ತಿದ್ದು, ಇದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಕಿವಿಗಪ್ಪಳಿಸುವ ಜೋರು ಶಬ್ದದಿಂದ ತಲೆ ನೋವು, ಮೈಗ್ರೇನ್ ಸಮಸ್ಯೆ ಉಂಟಾಗುತ್ತಿದೆ. ಪಬ್‌ನ ಈ ಉಪದ್ರವದಿಂದ ಹಿರಿಯ ನಾಗರಿಕರು, ಮನೆಗಳಿಂದ ಕೆಲಸ ಮಾಡುತ್ತಿರುವವರು ಹಾಗೂ ವಿದ್ಯಾರ್ಥಿಗಳಿಗೆ ಬಹಳ ಕಷ್ಟವಾಗುತ್ತಿದೆ. ಸ್ಥಳೀಯ ನಿವಾಸಿಗಳಂತೂ ರಾತ್ರಿ ಹೊತ್ತು ಶಾಂತಿಯಿಂದ ನಿದ್ರಿಸುವುದಕ್ಕೂ ಅವಕಾಶ ಇಲ್ಲದಂತಾಗಿದೆ ಎಂದು ಅರ್ಜಿದಾರರು ಅಳಲು ತೋಡಿಕೊಂಡಿದ್ದಾರೆ.

ಈ ಸಂಬಂಧ ಸ್ಥಳೀಯ ಪೊಲೀಸರು, ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಸೇರಿ ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಪಬ್ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಹಾಗೂ ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸಂಬಂಧಪಟ್ಟ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.

ಇದನ್ನೂ ಓದಿ :ಮೊದಲ ತರಗತಿಗೆ ಮಗು ಪ್ರವೇಶಕ್ಕೆ ಆರು ವರ್ಷ ವಯೋಮಿತಿ ನಿಗದಿ: 2025 - 26 ರಿಂದ ಜಾರಿಗೆ ಚಿಂತನೆ: ನಾಗೇಶ್

ABOUT THE AUTHOR

...view details