ಬೆಂಗಳೂರು:ಆರು ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆ ಮತ್ತು ಒಂದು ಜಿಲ್ಲಾ ಪಂಚಾಯತ್ ಹಾಗೂ ಎಂಟು ತಾಲೂಕು ಪಂಚಾಯತ್‌ಗಳಿಗೆ ರಾಜ್ಯ ಚುನಾವಣಾ ಆಯೋಗವು ಉಪಚುನಾವಣೆ ಘೋಷಿಸಿದ್ದು, ಫೆ.9ರಂದು ಚುನಾವಣೆ ನಡೆಯಲಿದೆ.
4 ನಗರಸಭೆ, 1 ಪುರಸಭೆ ಮತ್ತು 1 ಪಟ್ಟಣ ಪಂಚಾಯತ್‌ಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರಸಭೆ, ಚಿಕ್ಕಬಳ್ಳಾಪುರ ನಗರಸಭೆ, ಮೈಸೂರು ಜಿಲ್ಲೆಯ ಹುಣಸೂರು ನಗರಸಭೆ, ಬಳ್ಳಾರಿ ಜಿಲ್ಲೆಯ ಸಿರಗುಪ್ಪ ನಗರಸಭೆ, ತೆಕ್ಕಲಕೋಟೆ ಪಟ್ಟಣ ಪಂಚಾಯತ್, ವಿಜಯಪುರ ಜಿಲ್ಲೆಯ ಸಿಂಧಗಿ ಪುರಸಭೆಗೆ ಸಾರ್ವತ್ರಿಕ ಚುನಾವಣೆ ಪ್ರಕಟಿಸಲಾಗಿದೆ.
ಇದೇ ವೇಳೆ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಹೆಬ್ಬಾಳ ಜಿಲ್ಲಾಪಂಚಾಯತ್ ಮತ್ತು ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿ, ರಾಮನಗರ ಜಿಲ್ಲೆಯ ಚನ್ನಪಟ್ಟಣದ ಮತ್ತಿಕೆರೆ, ಕೋಲಾರ ಜಿಲ್ಲೆಯ ಮಾಲೂರಿನ ಲಕ್ಕೂರು, ಚಿಂತಾಮಣಿಯ ಕುರುಬೂರು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಅಲಕಾಪುರ, ಗಂಗಸಂದ್ರ, ಶ್ಯಾಂಪುರ, ಬೆಳಗಾವಿ ಜಿಲ್ಲೆಯ ರಾಮದುರ್ಗದ ಕಟಕೋಳ, ಹಾವೇರಿ ಜಿಲ್ಲೆಯ ಹಾನಗಲ್‌ನ ತಿಳವಳ್ಳಿ, ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ಕರೂರು ತಾಲೂಕು ಪಂಚಾಯತ್‌ಗಳಿಗೆ ಚುನಾವಣೆ ನಡೆಯಲಿದೆ.
ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಂಗಳವಾರದಿಂದಲೇ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ನಗರಸಭೆಯಲ್ಲಿ ಸ್ಪರ್ಧಿಸುವವರಿಗೆ 2 ಲಕ್ಷ ರೂ., ಪುರಸಭೆಯಲ್ಲಿ ಕಣಕ್ಕಿಳಿಯುವವರಿಗೆ 1.5 ಲಕ್ಷ ರೂ. ಮತ್ತು ಪಟ್ಟಣ ಪಂಚಾಯಿತಿಯಲ್ಲಿ ಸ್ಪರ್ಧಿಸುವವರಿಗೆ 1 ಲಕ್ಷ ರೂ. ಚುನಾವಣಾ ವೆಚ್ಚವನ್ನು ಮಿತಿಗೊಳಿಸಲಾಗಿದೆ.