ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ಬಹಿರಂಗಪಡಿಸಬೇಕು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನ ಪಾಲಿಸಲು ಅಭ್ಯರ್ಥಿಗಳು ಬಾಕಿಯಿರುವ ಕ್ರಿಮಿನಲ್ ಕೇಸ್‌ಗಳ ವಿವರ ನೀಡಲು ಪ್ರತ್ಯೇಕ ನಮೂನೆಯನ್ನು ಒದಗಿಸಬೇಕು ಎಂದು ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ.
ಕ್ರಿಮಿನಲ್ ಪ್ರಕರಣಗಳ ಮಾಹಿತಿ ನೀಡುವಂತೆ ಆದೇಶಿಸಿದ್ದ ಏಕ ಸದಸ್ಯಪೀಠದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಹಾಕಿದೆ.
ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಅವರ ವಿರುದ್ಧ ಯಾವುದಾದರೂ ಕ್ರಿಮಿನಲ್ ಪ್ರಕರಣ ಬಾಕಿ ಇದ್ದರೆ ಅದರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಆ ಮಾಹಿತಿಯನ್ನು ಟಿಕೆಟ್ ನೀಡುವ ರಾಜಕೀಯ ಪಕ್ಷಕ್ಕೂ ವಿವರ ಒದಗಿಸಬೇಕು. ಆಯಾ ಪಕ್ಷದ ವೆಬ್ಸೈಟ್ನಲ್ಲೂ ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆ ತಿಳಿಸಬೇಕು. ಅಭ್ಯರ್ಥಿಗಳು ಪತ್ರಿಕೆಗಳಲ್ಲೂ ಪ್ರಕಟಿಸಬೇಕು ಎಂದು ನ್ಯಾಯಪೀಠ ಆಯೋಗಕ್ಕೆ ಸೂಚಿಸಿದೆ.
ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ತಮ್ಮ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಕೇಸ್‌ಗಳ ವಿವರಗಳನ್ನು ರಾಜ್ಯ ಚುನಾವಣಾ ಆಯೋಗ ಮತ್ತು ಇತರೆ ಸಂಸ್ಥೆಗಳಿಗೆ ಒದಗಿಸಬೇಕು. ಆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಜಾರಿಗೊಳಿಸಬೇಕು ಹಾಗು ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ನಾಮಪತ್ರ ಸಲ್ಲಿಸುವಾಗ ಕ್ರಿಮಿನಲ್ ಪ್ರಕರಣಗಳ ಉಲ್ಲೇಖಕ್ಕೆ ಪ್ರತ್ಯೇಕ ನಮೂನೆಯನ್ನು ನೀಡಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.