ಬೆಂಗಳೂರು:ಲಿವಿಂಗ್ ಟುಗೆದರ್ನಲ್ಲಿದ್ದ ಜೋಡಿಯೊಂದು ಜಗಳವಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯ ಜಿಕೆವಿಕೆ ಬಳಿ ನಡೆದಿದೆ. ಆರೋಪಿ ವ್ಯಕ್ತಿ ತನ್ನ ಸಂಗಾತಿಯ ಕೈಲಿದ್ದ ಆರು ವರ್ಷದ ಮಗನನ್ನ ಅಪಹರಿಸಿಕೊಂಡು ಹೋಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಪ್ರಕರಣದ ವಿವರ:ಇಬ್ಬರೂ ಲಿವಿಂಗ್ ಟುಗೆದರ್ನಲ್ಲಿದ್ದು, ಆರು ವರ್ಷದ ಗಂಡು ಮಗು ಇತ್ತು. ಸಂಗಾತಿಯೊಂದಿಗೆ ಜಗಳ ಮಾಡಿಕೊಂಡಿದ್ದ ಆರೋಪಿ ಇಂದು ಬೆಳಗ್ಗೆ ತನ್ನ ಮಗನನ್ನ ಶಾಲೆಗೆ ಬಿಡಲು ತೆರಳಿದ್ದಾಗ ಹಿಂಬಾಲಿಸಿದ್ದಾನೆ. ಒಂದು ಆಟೋದಲ್ಲಿ ತಾನು ಮತ್ತು ಇನ್ನೊಂದು ಆಟೋದಲ್ಲಿ ಇಬ್ಬರು ಮಹಿಳೆಯರನ್ನ ಕರೆತಂದಿದ್ದ ಆತ, ಆಕೆಯ ಕೈಯಿಂದ ಮಗುವನ್ನ ಕಿತ್ತುಕೊಂಡು ತಾನು ಬಂದಿದ್ದ ಆಟೋದಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಈ ವೇಳೆ, ಇನ್ನೊಂದು ಆಟೋದಲ್ಲಿ ಬಂದಿದ್ದ ಮಹಿಳೆಯರು ಹಾಗೂ ಮಗುವಿನ ತಾಯಿ ಜೋರಾಗಿ ಗಲಾಟೆ ಮಾಡಿಕೊಳ್ಳುತ್ತಿರುವುದನ್ನ ಗಮನಿಸಿದ್ದ ಹೊಯ್ಸಳ ಸಿಬ್ಬಂದಿ ಮೂವರೂ ಮಹಿಳೆಯರು ಹಾಗೂ ಆಟೋ ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಕೊಡಿಗೆಹಳ್ಳಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಇದು ಲಿವಿಂಗ್ ಟುಗೆದರ್ ಜೋಡಿಯ ಜಗಳದ ಕಥೆ ಎಂಬುದು ಬಯಲಾಗಿದೆ. ಸದ್ಯ ಮಗುವನ್ನ ಕರೆದೊಯ್ದಿರುವ ತಂದೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ರಾಜಧಾನಿಯ ನಿದ್ದೆಗೆಡಿಸಿದ ಲಿವಿಂಗ್ ಟುಗೆದರ್:ಇತ್ತೀಚಿನ ವರ್ಷಗಳಲ್ಲಿ ಲಿವಿಂಗ್ ಟುಗೆದರ್ ಸಂಬಂಧಗಳು ಕೊಲೆಯಲ್ಲಿ ಅಂತ್ಯವಾಗುತ್ತಿರುವ ಘಟನೆಗಳು ಹೆಚ್ಚು ವರದಿಯಾಗುತ್ತಿವೆ. ಮುಂಬೈ ಹಾಗೂ ದೆಹಲಿ ಮಾದರಿಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಹ ಪ್ರೀತಿ ಹೆಸರಿನಲ್ಲಿ ಹತ್ಯೆಗಳಾಗುತ್ತಿವೆ. ಕಳೆದ ಏಳೆಂಟು ತಿಂಗಳಲ್ಲಿ ಆರು ಕೊಲೆ ನಡೆದಿವೆ. ಪಾಶ್ಚಿಮಾತ್ಯ ಸಂಸ್ಕೃತಿಯಂತೆ ಇಂದಿನ ಆಧುನಿಕ ಯುಗದಲ್ಲಿ ಮನುಷ್ಯ ಸಂಬಂಧಗಳು ಕ್ಷೀಣಿಸುತ್ತಿವೆ. ವಿವಾಹ ಮುನ್ನವೇ ಪ್ರೀತಿ ಹೆಸರಿನಲ್ಲಿ ಯುವ ಜನಾಂಗವು ಲಿವಿಂಗ್ ಟುಗೆದರ್ ಬಲೆಗೆ ಬೀಳುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಜನರು ಲಿವ್ ಇನ್ ರಿಲೇಷನ್ಶಿಪ್ ಮಾದರಿಯನ್ನು ಅನುಸರಿಸುವುದರಲ್ಲಿ ಮುಂದಿದ್ದಾರೆ. ಅಂತೆಯೇ ಜೊತೆಯಲ್ಲೇ ಇರೋಣ ಜೊತೆಯಲ್ಲೇ ಸಂಸಾರ ಮಾಡೋಣ ಎಂಬುವರು ಪ್ರೀತಿ ಹಾಗೂ ಲಿವಿನ್ನಲ್ಲಿ ಇದ್ದು, ಜೊತೆಯಾಗಿ ಇರಲು ಹಾತೊರೆದು ಬಳಿಕ ಲೈಫ್ಗೆ ಫುಲ್ಸ್ಟಾಪ್ ಇಡುತ್ತಿದ್ದಾರೆ.
ಇದನ್ನೂ ಓದಿ:Living Together: ರಾಜಧಾನಿಯ ನಿದ್ದೆಗೆಡಿಸಿದ ಲಿವಿಂಗ್ ಟುಗೆದರ್: ಕೆಲ ತಿಂಗಳಲ್ಲಿ ನಡೆದ ಸಂಗಾತಿಗಳ ಕೊಲೆಗಳು ಎಷ್ಟು?
ಯುವತಿ ಅಪಹರಣ ಯತ್ನ: ಇತ್ತೀಚೆಗೆ ಬೆಂಗಳೂರಿನಲ್ಲಿ ಯುವತಿಯನ್ನು ಅಪಹರಿಸಲು ಯತ್ನಿಸಿದ ಆರೋಪಿಗಳನ್ನು ಕೆಐಎಸ್ಐಎಫ್ ಹಾಗೂ ಸಿಆರ್ಪಿಎಫ್ ಪೊಲೀಸರ ತಂಡ ವಶಕ್ಕೆ ಪಡೆದಿತ್ತು. ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 25ರಂದು ಈ ಘಟನೆ ನಡೆದಿತ್ತು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಆರೋಪಿಗಳು ವಿಧಾನಸೌದ ಮೆಟ್ರೋ ನಿಲ್ದಾಣದ ಬಳಿ ಆಕೆಯನ್ನು ಏಕಾಏಕಿ ಎಳೆದು ತಮ್ಮ ಕಾರಿನಲ್ಲಿ ಕೂರಿಸಿಕೊಂಡಿದ್ದರು. ಆಗ ಸ್ಥಳದಲ್ಲಿದ್ದ ಸಿಆರ್ಪಿಎಫ್ ತಂಡ ಅಲರ್ಟ್ ಆಗಿದ್ದು ತಕ್ಷಣ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಸಂಬಂಧಿಯಿಂದಲೇ ಯುವತಿ ಅಪಹರಣ ಯತ್ನ; ಆರೋಪಿ ಪೊಲೀಸ್ ವಶಕ್ಕೆ