ಕರ್ನಾಟಕ

karnataka

ETV Bharat / state

Live Update:ನಾಳೆ ಬೆಂಗಳೂರಿಗೆ ಅತೃಪ್ತ ಶಾಸಕರ ತಂಡ: ಬಿಎಸ್​​ಪಿ ಶಾಸಕ ಮಹೇಶ್​ ಜತೆ ಮಾತುಕತೆ ನಡೆಸುವೆ: ಬಿಎಸ್​ವೈ​

ಬೆಂಗಳೂರಿನಲ್ಲಿ ವಿವಿಧ ಸಭೆಗಳಲ್ಲಿ ಬಿಜೆಪಿ ಕಾಂಗ್ರೆಸ್​ ನಾಯಕರು

By

Published : Jul 9, 2019, 7:48 AM IST

Updated : Jul 10, 2019, 11:02 AM IST

21:17 July 09

ಕ್ರಮಬದ್ಧ ರಾಜೀನಾಮೆ ಪತ್ರ ನೀಡದ ಎಂಟು ಅತೃಪ್ತರು ನಾಳೆ ಬೆಂಗಳೂರಿಗೆ ವಾಪಸ್​

  • 8 ಶಾಸಕರ ರಾಜೀನಾಮೆ ಪತ್ರ ಕ್ರಮಬದ್ಧವಲ್ಲ ಎಂದಿದ್ದ ಸ್ಪೀಕರ್
  • ಹಾಗಾಗಿ, ನಾಳೆ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿರುವ 8 ಅತೃಪ್ತ ಶಾಸಕರು
  •  ಮತ್ತೆ ಸ್ಪೀಕರ್​ಗೆ ರಾಜೀನಾಮೆ ಪತ್ರ ನೀಡಲು ನಿರ್ಧಾರ
  • ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಮುನಿರತ್ನ, ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು, ಎಚ್.ವಿಶ್ವನಾಥ್, ಬಿ.ಸಿ.ಪಾಟೀಲ್, ಶಿವರಾಂ ಹೆಬ್ಬಾರ್​ರಿಂದ ಮತ್ತೆ ರಾಜೀನಾಮೆ ಪತ್ರ ಸಲ್ಲಿಕೆ

20:36 July 09

ಬೆಂಗಳೂರಿನಲ್ಲಿ ಕಾಂಗ್ರೆಸ್​ ನಾಯಕರ ಸಭೆ

  • ಬೆಂಗಳೂರಿನಲ್ಲಿ ಸಿದ್ದರಾಮಯ್ಯ ನಾಯತ್ವದಲ್ಲಿ ಕಾಂಗ್ರೆಸ್​ ನಾಯಕರ ಸಭೆ 
  • ಸಭೆಯಲ್ಲಿ ಕೆ.ಸಿ.ವೇಣುಗೋಪಾಲ್, ಗುಲಾಮ್ ನಬಿ ಆಜಾದ್, ಸಿದ್ದರಾಮಯ್ಯ, ದಿನೇಶ್ ಗುಂಡುರಾವ್, ಮಲ್ಲಿಕಾರ್ಜುನ್ ಖರ್ಗೆ, ಈಶ್ವರ್ ಖಂಡ್ರೆ ಮತ್ತು ಜಮೀರ್ ಅಹ್ಮದ್ ಇತರ ಕಾಂಗ್ರೆಸ್ ಮುಖಂಡರ ಉಪಸ್ಥಿತಿ

19:57 July 09

ಆಪರೇಷನ್ ಕಮಲದ ಬಗ್ಗೆ ಸುಳಿವು ನೀಡಿದ ಬಿಎಸ್​ವೈ

  • ಬಿಎಸ್​ಪಿ ಶಾಸಕ ಎನ್.ಮಹೇಶ್ ಜೊತೆ ಮಾತುಕತೆ ನಡೆಸುವುದಾಗಿ ಹೇಳಿಕೆ
  • ಕುಮಾರಸ್ವಾಮಿಗೆ ಸಿಎಂ ಆಗಿ ಮುಂದುವರಿಯಲು ನೈತಿಕ ಹಕ್ಕು ಇಲ್ಲ
  • ಮೈತ್ರಿ ಸರ್ಕಾರದ ವಿರುದ್ದ ನಮ್ಮ ಎಲ್ಲಾ ಶಾಸಕರಿಂದ ನಾಳೆ ಎರಡು ಗಂಟೆ ಧರಣಿ 
  • ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಮಾತುಕತೆ
  • ನಮ್ಮ ಪ್ರಮುಖ ನಾಯಕರಿಂದ ಸ್ಪೀಕರ್ ಭೇಟಿ ಮಾಡಿ ಚರ್ಚೆ 
  • ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆ
  • ನಾಳೆ ಅತೃಪ್ತ ಶಾಸಕರು ಬೆಂಗಳೂರಿಗೆ ಆಗಮಿಸಲಿದ್ದು, ಮತ್ತೊಮ್ಮೆ ರಾಜೀನಾಮೆ ನೀಡುವ ಸಾಧ್ಯತೆ 
  • ರಾಮಲಿಂಗಾರೆಡ್ಡಿ,ರೋಷನ್​ ಬೇಗ್​ ಮನವೊಲಿಕೆಗೆ ಕಾಂಗ್ರೆಸ್​ ಕಸರತ್ತು

19:42 July 09

ಸಿಎಂ ರಾಜೀನಾಮೆಗೆ ಆಗ್ರಹಿಸಿ ನಾಳೆ ಬಿಜೆಪಿ ಪ್ರತಿಭಟನೆ

ಅರವಿಂದ್​​ ಲಿಂಬಾವಳಿ

19:21 July 09

ಸಿಎಂ ರಾಜೀನಾಮೆಗೆ ಆಗ್ರಹಿಸಿ ನಾಳೆ ಬಿಜೆಪಿ ಪ್ರತಿಭಟನೆ

  • ನಾಳೆ ಬಿಜೆಪಿ ನಾಯಕರಿಂದ ಸಿಎಂ ರಾಜೀನಾಮೆ ನೀಡುವಂತೆ ಆಗ್ರಹಿಸಿ ಧರಣಿ
  • ನಾಳೆ 11.30ರಿಂದ ಎರಡು ಗಂಟೆಗಳ ಕಾಲ ಪ್ರತಿಭಟನೆ ನಡೆಸಲಿರುವ ಬಿಜೆಪಿ
  • ಧರಣಿ ಬಳಿಕ ಬಿಜೆಪಿ ನಾಯಕರಿಂದ ರಾಜ್ಯಪಾಲರ ಭೇಟಿ 
  • ಆದಷ್ಟು ಬೇಗ ಕಾನೂನು ಕ್ರಮಕ್ಕಾಗಿ ಮನವಿ ಮಾಡಲಿರುವ ಬಿಜೆಪಿ
  • ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಗ್ರಹಿಸಲು ಭೇಟಿ 
  • ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ್​​ ಲಿಂಬಾವಳಿ ಹೇಳಿಕೆ

19:05 July 09

ಅತೃಪ್ತರ ಭೇಟಿಗೆ ಮುಂಬೈಗೆ ತೆರಳಲಿರುವ ಡಿಕೆಶಿ

  • ಅತೃಪ್ತ ಶಾಸಕರನ್ನ ಭೇಟಿ ಮಾಡಲು ನಾಳೆ ಮುಂಬೈಗೆ ತೆರಳಲಿರುವ ಡಿ.ಕೆ ಶಿವಕುಮಾರ್​ 
  • ಅತೃಪ್ತ ಶಾಸಕರ ಜೊತೆ ಮಾತುಕತೆ ನಡೆಸಲು ನಿರ್ಧಾರ
  • ನಾಲ್ಕೈದು ಜನರೊಂದಿಗೆ ಮುಂಬೈಗೆ ತೆರಳಲಿರುವ ಡಿಕೆ ಶಿವಕುಮಾರ್​​

18:35 July 09

ಗುಲಾಂ ನಬಿ ಆಜಾದ್​ ಆಗಮನ

ಗುಲಾಂ​ ನಬಿ ಆಜಾದ್
  • ಅತೃಪ್ತ ಶಾಸಕರ ಮನವೊಲಿಕೆಗಾಗಿ ಕಾಂಗ್ರೆಸ್​  ಹಿರಿಯ ಮುಖಂಡ ಗುಲಾಂ​ ನಬಿ ಆಜಾದ್ ಬೆಂಗಳೂರಿಗೆ ಆಗಮನ
  • ಕಾಂಗ್ರೆಸ್​​​ ಹೈಕಮಾಂಡ್​ ಸೂಚನೆ ಆಧಾರದ ಮೇಲೆ ಬೆಂಗಳೂರಿಗೆ ಆಗಮಿಸಿದ ಮುಖಂಡ
  • ಅತೃಪ್ತರೊಂದಿಗೆ ಮಾತುಕತೆ ನಡೆಸಿ, ಮನವೊಲಿಸುವ ಸಾಧ್ಯತೆ

18:13 July 09

ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಸಭೆ ಆರಂಭ!

ಬೆಂಗಳೂರು: ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಮಹತ್ವದ ಸಭೆ ಆರಂಭಗೊಂಡಿದೆ, ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಪಕ್ಷದ ಶಾಸಕರು ಭಾಗಿಯಾಗಿದ್ದಾರೆ.

70 ಕ್ಕೂ ಹೆಚ್ಚು ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದು ಕೆಲ ಶಾಸಕರು ಅನುಮತಿ ಪಡೆದು ಗೈರಾಗಿದ್ದಾರೆ ಎನ್ನಲಾಗಿದೆ. ಮೈತ್ರಿ ಸರ್ಕಾರದ ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ರಮೇಶ್ ಕುಮಾರ್ ವಿಳಂಬ ಧೋರಣೆ ಅನುಸರಿಸುತ್ತಿರುವ ಸುಳಿವು ಸಿಗುತ್ತಿದ್ದಂತೆ ಮುಂದಿನ ಹೆಜ್ಜೆ ಇಡುವ ಕುರಿತು ನಿರ್ಣಯ ಕೈಗೊಳ್ಳುವ ಸಂಬಂಧ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಅತೃಪ್ತ ಶಾಸಕರ ರಾಜೀನಾಮೆ ಸ್ವೀಕಾರ ವಿಳಂಬ ಹಾಗು ಕೆಲವರ ರಾಜೀನಾಮೆ ಪತ್ರ ಲೋಪದಿಂದ ಕೂಡಿರುವ ಮಾಹಿತಿ, ರಾಜ್ಯಪಾಲರ ಭೇಟಿ, ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ, ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ, ರಾಜ್ಯಪಾಲರಿಗೆ ದೂರು ನೀಡುವುದು, ಸರ್ಕಾರ ರಚನೆ ಸಂಬಂಧ ಯಾವ ಹೆಜ್ಜೆ ಇಡಬೇಕು,ನಾಳೆ ಮೈತ್ರಿ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಹೋರಾಟ ನಡೆಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ.

18:00 July 09

ಬಿಜೆಪಿ ನಿಯೋಗಕ್ಕೆ ಸಿಗದ ಸ್ಪೀಕರ್​... ವಾಪಸ್​ ಮರಳಿದ ಬಸವರಾಜ್​ ಬೊಮ್ಮಾಯಿ ನೇತೃತ್ವದ ತಂಡ

ಬೆಂಗಳೂರು: ಬಿಜೆಪಿ ಶಾಸಕ ಬಸವರಾಜ್​ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ನಿಯೋಗ ಸ್ಪೀಕರ್​ ಭೇಟಿಗೆ ತೆರಳಿತ್ತು. ಆದರೆ ಅವರು ವಿಧಾನಸೌಧದಲ್ಲಿ ಇಲ್ಲದಿರುವ ವಿಷಯ ಗೊತ್ತಾಗಿ ನಾವು ವಾಪಸ್​ ಬರುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. 

17:48 July 09

ಸ್ಪೀಕರ್ ವಿಳಂಬ ಧೋರಣೆ: ಮತ್ತೆ ರಾಜೀನಾಮೆ ಸಲ್ಲಿಸಲು ಬಂಡಾಯ ಶಾಸಕರ ನಿರ್ಧಾರ

  • ಸ್ಪೀಕರ್ ವಿಳಂಬ ಧೋರಣೆ: ಮತ್ತೊಮ್ಮೆ ಕ್ರಮ ಬದ್ಧವಾಗಿ ರಾಜೀನಾಮೆ ಸಲ್ಲಿಸಲು ಶಾಸಕರ ನಿರ್ಧಾರ
  • ಮುಂಬೈನ ಸೋಫಿಟೆಲ್​ ಹೋಟೆಲ್​​ನಲ್ಲಿ ತಂಗಿರುವ ಶಾಸಕರು ಬೆಂಗಳೂರಿಗೆ ಆಗಮಿಸಿ ರಾಜೀನಾಮೆ

17:27 July 09

ನಾಳೆ ಬಿಜೆಪಿಯಿಂದ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ

ನಾಳೆ ಬಿಜೆಪಿಯಿಂದ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ

2 ಗಂಟೆ ಪ್ರತಿಭಟನೆ ನಡೆಸಲಿರುವ ಬಿಜೆಪಿ ನಾಯಕರು 

ಬಿಜೆಪಿ ನಾಯಕರಿಂದ ತೀರ್ಮಾನ  ವಿಧಾನಸೌಧದ ಬಳಿಯ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ

ಡಾಲರ್ಸ್​ ಕಾಲೋನಿಯಲ್ಲಿ ಮಾತನಾಡಿದ ಅವರು ಈ ಘೋಷಣೆ ಮಾಡಿದ್ದಾರೆ. 

ಮತ್ತೊಮ್ಮೆ ಶಾಸಕಾಂಗ ಸಭೆ ನಡೆಸುವ ಬಗ್ಗೆಯೂ ಮಾಹಿತಿ ನೀಡಿದ ಬಿಎಸ್​ವೈ
 

17:11 July 09

ಅತೃಪ್ತ : ರಾಮಲಿಂಗಾ ರೆಡ್ಡಿ ವಿರುದ್ಧ ಕ್ರಮ‌ ಇಲ್ಲ: ದಿನೇಶ್ ಗುಂಡೂರಾವ್

ರಾಮಲಿಂಗ ರೆಡ್ಡಿ ಅವರ ವಿರುದ್ಧ ಕ್ರಮ ಇಲ್ಲ ಎಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬೆಂಗಳೂರು:ರಾಮಲಿಂಗಾ ರೆಡ್ಡಿ ಅವರ ವಿರುದ್ಧ ಕ್ರಮ ಇಲ್ಲ. ಪಕ್ಷದ ವಿರುದ್ಧವಾಗಿ :ರಾಮಲಿಂಗಾ ರೆಡ್ಡಿ ನಡೆದಿಲ್ಲ. ಹಾಗಾಗಿ ಅವರ ವಿಚಾರವನ್ನು ಪ್ರತ್ಯೇಕವಾಗಿ ಪರಿಗಣಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

16:21 July 09

ಜೆಡಿಎಸ್ ಶಾಸಕರ ಜೊತೆ ಸಿಎಂ ಗೌಪ್ಯ ಚರ್ಚೆ

ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದ ಜೆಡಿಎಸ್ ಶಾಸಕರ ಜೊತೆ ಸಿಎಂ ಗೌಪ್ಯ ಚರ್ಚೆ

ಬೆಂಗಳೂರು:ದೇವನಹಳ್ಳಿ ಗಾಲ್ಫ್ ಶೈರ್ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದ್ದ ಜೆಡಿಎಸ್ ಶಾಸಕರ ಜೊತೆಯಲ್ಲಿ ಸಿಎಂ ಕುಮಾರಸ್ವಾಮಿ ಗೌಪ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ರಾಜಕೀಯ ಬೆಳೆವಣಿಗೆ ಮತ್ತು ಮುಂದಿನ ನಿರ್ಧಾರ ಕುರಿತು ಸಮಾಲೋಚನೆ‌ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾದುನೋಡುವ ತಂತ್ರಕ್ಕೆ ಮೊರೆಹೋದ ಜೆಡಿಎಸ್​ 

ನಾಲ್ಕು ದಿನ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿಲು ನಿರ್ಧಾರ

15:56 July 09

ಸ್ಪೀಕರ್​ ಭೇಟಿಗೆ ತೆರಳಿದ ಬಿಜೆಪಿ ನಿಯೋಗ

ಶಾಸಕರ ರಾಜೀನಾಮೆ ಅಂಗೀಕಾರ ವಿಳಂಬ ಧೋರಣೆ ಹಿನ್ನೆಲೆಯಲ್ಲಿ ಸ್ಪೀಕರ್ ಭೇಟಿಗೆ ತೆರಳಿದ ಬಿಜೆಪಿ ನಿಯೋಗ

ಬೆಂಗಳೂರು: ಶಾಸಕರ ರಾಜೀನಾಮೆ ಅಂಗೀಕಾರ ವಿಳಂಬ ಧೋರಣೆ ಹಿನ್ನೆಲೆಯಲ್ಲಿ  ಸ್ಪೀಕರ್ ರಮೇಶ್ ಕುಮಾರ್ ಭೇಟಿಗೆ ಬಿಜೆಪಿ ನಿಯೋಗ ತೆರಳಿದೆ.

ಬೆಳಗ್ಗೆಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಸರಣಿ ಸಭೆ ನಡೆಸಿದ ಬಳಿಕ ಸ್ಪೀಕರ್ ಭೇಟಿಗೆ ನಿರ್ಧಾರ ಕೈಗೊಳ್ಳಲಾಯಿತು.

ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ, ಮುಖಂಡರಾದ ಅರವಿಂದ ಲಿಂಬಾವಳಿ,ಮಾಧುಸ್ವಾಮಿ,ಗೋವಿಂದ ಕಾರಜೋಳ,ಆರ್.ಅಶೋಕ್ ಸೇರಿದಂತೆ ಹಲವು ಮುಖಂಡರು
ಸ್ಪೀಕರ್ ಭೇಟಿ ಮಾಡಲು ವಿಧಾನಸೌಧಕ್ಕೆ ತೆರಳಿದರು.

ಅತೃಪ್ತ ಶಾಸಕರು ರಾಜೀನಾಮೆ ನೀಡಿದ್ದು ತಂಡ ತಂಡವಾಗಿ ಅವರನ್ನು ಕರೆಸಿ ವಿಚಾರಣೆ ನಡೆಸುವುದು,ಕೆಲವರ ರಾಜೀನಾಮೆ ಪತ್ರ ಅಸಿಂಧುವಾಗಿರುವುದು ಸೇರಿದಂತೆ ಹಕವು ವಿಷಯಗಳ ಕುರಿತು ಭೇಟಿ ವೇಳೆ ಮಾತುಕತೆ ನಡೆಯಲಿದೆ.

15:28 July 09

ಶಾಸಕರ ರಾಜೀನಾಮೆ ಕುರಿತು ಸ್ಪೀಕರ್​ ಪ್ರತಿಕ್ರಿಯೆ

ಸ್ಪೀಕರ್​ ರಮೇಶ್​ ಕುಮಾರ್​

ಶಾಸಕರ ರಾಜೀನಾಮೆ ಕುರಿತು ಸ್ಪೀಕರ್ ರಮೇಶ್​ ಕುಮಾರ್​ ಪ್ರತಿಕ್ರಿಯೆ ನೀಡಿದ್ದಾರೆ.

14:49 July 09

ರಾಜ್ಯಪಾಲರಿಗೆ ಪತ್ರ ಬರೆದ ಸ್ಪೀಕರ್​... ಅಖಾಡಕ್ಕಿಳೀತಾರಾ ಗವರ್ನರ್​... ಕೇಂದ್ರಕ್ಕೆ ವರದಿ?

ರಾಜ್ಯಪಾಲರಿಗೆ ಪತ್ರ ಬರೆದ ಸ್ಪೀಕರ್​ ರಮೇಶ್​ ಕುಮಾರ್​ 

ರಾಜೀನಾಮೆ ನೀಡಿರುವ ಶಾಸಕರು ತಮ್ಮನ್ನು ಭೇಟಿ ಮಾಡಿಲ್ಲ

ನಾನು ಸಂವಿಧಾನದ ಆಶಯಗಳನ್ನ ಎತ್ತಿ ಹಿಡಿಯಲು ಬಯಸುತ್ತೇನೆ. 13 ಎಂಎಲ್​ಎಗಳ ಪೈಕಿ 8 ಶಾಸಕರ ರಾಜೀನಾಮೆ ಕಾನೂನು ಬದ್ಧವಾಗಿಲ್ಲ. ಅವರಿಗೆಲ್ಲ ನನ್ನ ಮುಂದೆ ಹಾಜರಾಗಲು ಸಮಯ ನೀಡಿದ್ದೇನೆ ಎಂದು ರಮೇಶ್​ ಕುಮಾರ್​ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಈ ನಡುವೆ ಕೇಂದ್ರಕ್ಕೆ ವರದಿ ಸಲ್ಲಿಸುವ ಸಾಧ್ಯತೆಗಳಿವೆ. 

13:53 July 09

ತಾಜ್​ನಿಂದ ದೇವನಹಳ್ಳಿ ರೆಸಾರ್ಟ್​ನತ್ತ ಹೊರಟ ಸಿಎಂ

ರೆಸಾರ್ಟ್​ನತ್ತ ಹೊರಟ ಸಿಎಂ ಕುಮಾರಸ್ವಾಮಿ
  • ತಾಜ್​ನಿಂದ ದೇವನಹಳ್ಳಿ ರೆಸಾರ್ಟ್​ನತ್ತ ಹೊರಟ ಸಿಎಂ ಕುಮಾರಸ್ವಾಮಿ
  • ರಾಜಭವನ ತೆರಳುವ ಸಾಧ್ಯತೆ ಇತ್ತು
  • ಆದರೆ, ರಾಜಭವನಕ್ಕೆ ಹೋಗುವ ಪ್ಲಾನ್ ಚೇಂಜ್ ಆಗಿದ್ದರಿಂದ 
  • ಜೆಡಿಎಸ್​ ಶಾಸಕರು ಉಳಿದಿರುವ ದೇವನಹಳ್ಳಿ ರೆಸಾರ್ಟ್​ಗೆ ಶಿಫ್ಟ್

13:34 July 09

ಪಕ್ಷಾಂತರ ನಿಷೇಧ ಕಾಯ್ದೆಯಡಿ ಅತೃಪ್ತರ ವಿರುದ್ಧ ಕೈ ನಾಯಕರ ದೂರು

ಸ್ಪೀಕರ್​​ಗೆ ದೂರು ನೀಡಿದ ಕಾಂಗ್ರೆಸ್ ನಾಯಕರು

ಬೆಂಗಳೂರು: ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕರು ಸ್ಪೀಕರ್​​ಗೆ ದೂರು ನೀಡಿದ್ದಾರೆ.  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಹೆಚ್​.ಕೆ. ಪಾಟೀಲ್, ಕೃಷ್ಣ ಬೈರೇಗೌಡ, ಕೆ.ಜೆ. ಜಾರ್ಜ್, ಎನ್.ಎ.ಹ್ಯಾರೀಸ್ ಸೇರಿದಂತೆ ಕಾಂಗ್ರೆಸ್ ನಾಯಕರು ಸ್ಪೀಕರ್‌ ಕಚೇರಿಗೆ ಆಗಮಿಸಿ ದೂರು ನೀಡಿದರು. 

ಕಾಂಗ್ರೆಸ್ ಅತೃಪ್ತ ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸುವಂತೆ ಸ್ಪೀಕರ್​ ಅವರಲ್ಲಿ ಈ ನಿಯೋಗ ಮನವಿ ಮಾಡಿದೆ. 

13:14 July 09

ಯಾವುದೇ ಕಾರಣಕ್ಕೂ ನಾವು ಮೈತ್ರಿ ಸರ್ಕಾರದ ಬೆದರಿಕೆಗೆ ಹೆದರುವುದಿಲ್ಲ: ರೆಬೆಲ್​ ಶಾಸಕರ ತಿರುಗೇಟು

ಎಸ್​.ಟಿ. ಸೋಮಶೇಖರ್​
  • ಯಾವುದೇ ಕಾರಣಕ್ಕೂ ನಾವು ಮೈತ್ರಿ ಸರ್ಕಾರದ ಬೆದರಿಕೆಗೆ ಹೆದರುವುದಿಲ್ಲ
  • ಅನರ್ಹತೆ ಅಸ್ತ್ರಕ್ಕೆ ನಾವು ಭಯಬೀಳಲ್ಲ - ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ 
  • ಕಾಂಗ್ರೆಸ್​​ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಸ್​.ಟಿ. ಸೋಮಶೇಖರ್​ ಹೇಳಿಕೆ
  • ನಾವು ರಾಜ್ಯದ ಅಭಿವೃದ್ಧಿಗಾಗಿ ಈ ನಿರ್ಧಾರ ಕೈಗೊಂಡಿದ್ದೇವೆ
  • ಅನರ್ಹತೆ ಬೆದರಿಕೆಗೆ ಜಗ್ಗುವ ಪ್ರಶ್ನೆಯೇ ಇಲ್ಲ 
  • ಮುಂಬೈನಲ್ಲಿರುವ ಶಾಸಕರಿಂದ ಮೈತ್ರಿ ನಾಯಕರ ಬೆದರಿಕೆಗೆ ತಿರುಗೇಟು 
  • 10ನೇ ಶಡ್ಯೂಲ್​ ಪ್ರಕಾರ ಶಾಸಕರ ಅನರ್ಹತೆಗೆ ಸ್ಪೀಕರ್​ಗೆ ಮನವಿ ಮಾಡುವ ನಿರ್ಧಾರ ಕೈಗೊಂಡಿರುವುದಾಗಿ ಸಿದ್ದರಾಮಯ್ಯ ಘೋಷಣೆ 
  • ಕಾಂಗ್ರೆಸ್​ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಸಿಎಲ್​ಪಿ ನಾಯಕ ಸಿದ್ದರಾಮಯ್ಯ 

12:38 July 09

ಕಾಂಗ್ರೆಸ್ ಶಾಸಕರಿಂದ ಧರಣಿ ಆರಂಭ

  • ಶಿವಾಜಿನಗರ ಕಾಂಗ್ರೆಸ್​ ಶಾಸಕ ಸ್ಥಾನಕ್ಕೆ ರೋಷನ್ ಬೇಗ್ ರಾಜೀನಾಮೆ
  • ವಿಧಾನಸೌಧ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಶಾಸಕರಿಂದ ಧರಣಿ ಆರಂಭ
  • ರಾಜೀನಾಮೆ ಬೆನ್ನಲ್ಲೇ ರೋಷನ್ ಬೇಗ್​ಗೆ ನೋಟಿಸ್​ ನೀಡಿದ ಎಸ್​ಐಟಿ 

12:25 July 09

ಶಾಸಕ ಸ್ಥಾನಕ್ಕೆ ರೋಷನ್​ ಬೇಗ್​ ರಾಜೀನಾಮೆ​​

ಕಾಂಗ್ರೆಸ್​ ರೆಬಲ್​ ಶಾಸಕ ರೋಷನ್​ ಬೇಗ್​ ಸ್ಪೀಕರ್​ ಕಚೇರಿಗೆ ಆಗಮಿಸಿ, ರಾಜೀನಾಮೆ ಸಲ್ಲಿಸಿದ್ದಾರೆ. ಆ ಬಳಿಕ ಮಾತನಾಡಿದ ಶಾಸಕ ರೋಷನ್ ಬೇಗ್​, ತಾವು ಸ್ಪೀಕರ್​ ಭೇಟಿ ಮಾಡಿ ರಾಜೀನಾಮೆ ನೀಡಿದ್ದೇನೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ

12:21 July 09

ರಾಜೀನಾಮೆ ನೀಡಿದ ಶಾಸಕರ ಅನರ್ಹತೆಗೆ ಶಿಫಾರಸು: ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು:10 ನೇ ಶಡ್ಯೂಲ್​ ಅಡಿ ಅತೃಪ್ತ ಶಾಸಕರ ಅನರ್ಹತೆ ಜತೆಗೆ ಚುನಾವಣೆಗೆ ನಿಲ್ಲದಂತೆಯೂ ತಡೆಯಲು ಸ್ಪೀಕರ್​ಗೆ ದೂರು ನೀಡಲು ಶಾಸಕಾಂಗ ಪಕ್ಷ ಸಭೆಯಲ್ಲಿ ತೀರ್ಮಾನ ತಗೆದುಕೊಂಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. 

ಕಾಂಗ್ರೆಸ್ ಶಾಸಕಾಂಗ ಸಭೆ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಉರುಳಿಸಲು ಬಿಜೆಪಿ ಸತತ ಪ್ರಯತ್ನ ನಡೆಸಿದೆ. ಅಮಿತ್ ಶಾ, ಪ್ರಧಾನಿ ಮೋದಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವಲ್ಲಿ ಭಾಗಿಯಾಗಿದ್ದಾರೆ. ಮೈತ್ರಿ ಸರ್ಕಾರ ಅಸ್ಥಿರಕ್ಕೆ ಬಿಜೆಪಿಯಿಂದ ಇದು ಆರನೇ ಪ್ರಯತ್ನ. 

ಸ್ಪೀಕರ್​ಗೆ ರಾಜೀನಾಮೆ ನೀಡಿದ ಕಾಂಗ್ರೆಸ್ ಶಾಸಕರನ್ನು ಅನರ್ಹ ಗೊಳಿಸಲು ಅರ್ಜಿ ಸಲ್ಲಿಸಲು ಶಾಸಕಾಂಗ ಪಕ್ ಸಭೆ ತೀರ್ಮಾನ ಮಾಡಿದೆ. ಶಾಸಕರಿಗೆ ರಾಜೀನಾಮೆ ಪತ್ರ ವಾಪಾಸ್​ ಪಡೆಯಲು ಇನ್ನೂ ಕಾಲಾವಕಾಶವಿದೆ. ವಾಪಾಸ್​ ಪಡೆಯದಿದ್ದರೆ ಅನರ್ಹಗೊಳಿಸಲು ಸ್ಪೀಕರ್​ಗೆ ಕಾಂಗ್ರೆಸ್​ನಿಂದ ಅರ್ಜಿ ಸಲ್ಲಿಸಲಾಗುತ್ತದೆ ಎಂದು ಅತೃಪ್ತ ಶಾಸಕರಿಗೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ

11:58 July 09

ಸದ್ಯಕ್ಕೆ ನಾನು ಕಾಂಗ್ರೆಸ್ ಪಕ್ಷದ ಸದಸ್ಯ ಅಷ್ಟೇ: ರಾಮಲಿಂಗಾರೆಡ್ಡಿ

ಮಾಜಿ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ ನಡುಕ ಉಂಟುಮಾಡಿದ ಶಾಸಕರಲ್ಲಿ ಪ್ರಮುಖರಾದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು, ಇಂದು ನಡೆದ ಸಿಎಲ್​ಪಿ ಸಭೆಗೂ ಹಾಜರಾಗಿಲ್ಲ. ಕಾರ್ಯಕರ್ತರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ರಾಜೀನಾಮೆ ನೀಡಿರುವ ಹಿನ್ನೆಲೆ ನಾನು ಸಭೆಗೆ ಹಾಜರಾಗಲಿಲ್ಲ. ಸ್ಪೀಕರ್ ನೋಟಿಸ್ ನೀಡಿದ ನಂತರ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಸದ್ಯಕ್ಕೆ ನಾನು ಕಾಂಗ್ರೆಸ್ ಪಕ್ಷದ ಸದಸ್ಯ ಅಷ್ಟೇ. ಸೌಮ್ಯಾ ರೆಡ್ಡಿ ಬಗ್ಗೆ ಅವರನ್ನೇ ಕೇಳುವುದು ಸೂಕ್ತ. ನಾನು ಸಚಿವ, ಡಿಸಿಎಂ, ಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ನಾನಿನ್ನೂ ಕಾಂಗ್ರೆಸ್​ನಲ್ಲೇ ಇದ್ದು, ಶಾಸಕ ಸ್ಥಾನಕ್ಕಷ್ಟೇ ರಾಜೀನಾಮೆ ನೀಡಿದ್ದೇನೆ ಎಂದರು. 

ಇಂದು ಬೆಳಗ್ಗೆ ಬಿಜೆಪಿ ನಾಯಕರು ನನ್ನ ಮನೆಗೆ ಭೇಟಿ ನೀಡಿದ್ದು ರಾಜಕೀಯ ಚರ್ಚೆಗಾಗಿ ಅಲ್ಲ. ರೆಡ್ಡಿ ಸಮುದಾಯದ ಚುನಾವಣೆ ಇದೇ ತಿಂಗಳು 18ರಂದು ನಡೆಯಲಿದ್ದು, ಅಭ್ಯರ್ಥಿಗಳ ಆಯ್ಕೆಯ ವಿಚಾರವಾಗಿ ಚರ್ಚೆ ನಡೆಯಿತು ಅಷ್ಟೇ ಎಂದು  ಹೇಳಿದರು. 

11:52 July 09

ಉಮೇಶ್ ಜಾಧವ್ ಮಾದರಿಯಲ್ಲೇ ಸಾರ್ವಜನಿಕ ಅಹವಾಲು ಸ್ವೀಕರಿಸಿ ವಿಚಾರಣೆ: ಸ್ಪೀಕರ್​ ಸ್ಪಷ್ಟನೆ

ಬೆಂಗಳೂರು:ಸ್ಪೀಕರ್‌ ವಿಧಾನಸೌಧಕ್ಕೆ ಆಗಮಿಸಿದ್ದು, ರಾಜೀನಾಮೆ ನೀಡಿದ ಅತೃಪ್ತ ಶಾಸಕರ ರಾಜೀನಾಮೆ ಪತ್ರದ ಪರಿಶೀಲನೆ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ. 

ಈಗಾಗಲೇ ವಿಧಾನಸಭೆ‌ ಕಾರ್ಯದರ್ಶಿ ವಿಶಾಲಾಕ್ಷಿ ಸೇರಿದಂತೆ ಸ್ಪೀಕರ್ ಕಚೇರಿ ಅಧಿಕಾರಿಗಳು ಕಡತಗಳನ್ನು ಸಿದ್ಧವಾಗಿಸಿದ್ದು, ರಾಜೀನಾಮೆ ಪತ್ರದ ಪರಿಶೀಲನೆ ನಡೆಯಲಿದ್ದಾರೆ. ಸ್ಪೀಕರ್ ಮೊದಲಿಗೆ 13 ಶಾಸಕರ ರಾಜೀನಾಮೆ ಪತ್ರದ ಪರಿಶೀಲನೆ ನಡೆಸಿ, ಬಳಿಕ ಮುಂದಿನ ಕಾರ್ಯವಿಧಾನವನ್ನು ಅನುಸರಿಸಲಿದ್ದಾರೆ. ಈಗಾಗಲೇ ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಹಲವು ದೂರುಗಳು ಬಂದಿವೆ.‌ ಈ ಎಲ್ಲ ದೂರುಗಳ ಕಡತಗಳನ್ನು ಸ್ಪೀಕರ್ ಪರಿಶೀಲಿಸುತ್ತಿದ್ದಾರೆ.

ಉಮೇಶ್ ಜಾಧವ್ ಮಾದರಿಯಲ್ಲೇ ಸಾರ್ವಜನಿಕ ಅಹವಾಲು ಸ್ವೀಕರಿಸಿ ವಿಚಾರಣೆ ನಡೆಸಲಿದ್ದಾರೆ. ಕಳೆದ ಎರಡು ದಿನಗಳಿಂದ ಕ್ಷೇತ್ರದಲ್ಲಿದ್ದ ಸ್ಪೀಕರ್ ಇಂದು ವಿಧಾನಸೌಧದ ತಮ್ಮ ಕಚೇರಿಗೆ ಆಗಮಿಸುತ್ತಿದ್ದಾರೆ. ಜತೆಗೆ ಇನ್ನೂ ಕೆಲ ಕೈ ಶಾಸಕರು ಇಂದು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.

ಶಾಸಕರನ್ನು ವೈಯಕ್ತಿಕವಾಗಿ ಕರೆದು ಮಾತನಾಡಿಸದೇ ಅವರ ರಾಜೀನಾಮೆ ಅಂಗೀಕಾರ ಸಾಧ್ಯವಿಲ್ಲ ಎಂದು ಇದೇ ವೇಳೆ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಕಳೆದ ಶನಿವಾರ 13 ಶಾಸಕರು ನಮ್ಮ ಕಚೇರಿಗೆ ಬರುವ ಮೊದಲು ನನ್ನ  ಪೂರ್ವಾನುಮತಿ ಪಡೆದಿರಲಿಲ್ಲ. ಅವರು ರಾಜೀನಾಮೆ ಸಲ್ಲಿಸಲು ಬರುವ ವಿಷಯವೇ ಗೊತ್ತಿರಲಿಲ್ಲ. ಹಾಗಾಗಿ ನಾನು ಕಚೇರಿಯಿಂದ ವೈಯಕ್ತಿಕ ಕೆಲಸಗಳಿಗೆ ತೆರಳಿದ್ದೆ‌. ನನ್ನ ಅನುಪಸ್ಥಿತಿಯಲ್ಲಿ ಅವರು ಬಂದು ರಾಜೀನಾಮೆ ಸಲ್ಲಿಸಿದ್ದರೆ ಅದಕ್ಕೆ ನಾನು ಹೊಣೆಯಲ್ಲ.ನಾನು ನಿಯಮಾವಳಿಗಳ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ ಎಂದು ಕಚೇರಿಯೊಳಗೆ ತೆರಳುವ ಮುನ್ನ ತಿಳಿಸಿದರು.

ಇಂದು ಅವರ ರಾಜೀನಾಮೆ ಪತ್ರಗಳನ್ನು ಪರಿಶೀಲಿಸುತ್ತೇನೆ. ನಂತರ ಕಾನೂನು ನಿಯಮಾವಳಿಗಳ ಪ್ರಕಾರ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

11:44 July 09

ಬಹಿರಂಗವಾಗಿ ಆಮಿಷ ಒಡ್ಡುವ ಮೂಲಕ ಸಿಎಂ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ: ಬಸವರಾಜ ಬೊಮ್ಮಾಯಿ

ಮಾಜಿ ಸಚಿವ ಬಸವರಾಜ ಬೊಮ್ಮಾಯಿ

ಬೆಂಗಳೂರು:ಬಹುಮತ ಕಳೆದುಕೊಂಡ ಮೈತ್ರಿ ಸರ್ಕಾರದ ಸಿಎಂ ರಾಜೀನಾಮೆ ನೀಡುವ ಬದಲು ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ಕೊಡುತ್ತೇವೆ ಎಂದು ಬಹಿರಂಗವಾಗಿ ಆಮಿಷ ಒಡ್ಡುವ ಮೂಲಕ ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರ ಸಂಖ್ಯಾಬಲ, ನೈತಿಕ ಬಲ ಕಳೆದುಕೊಂಡಿದೆ. ಸಿಎಂ ಪ್ರಜಾಪ್ರಭುತ್ವ ಮಾರ್ಗವಾಗಿ ಕೂಡಲೇ ರಾಜೀನಾಮೆ ನೀಡಬೇಕಿತ್ತು.‌

ಆದರೆ, ಪ್ರಜಾಪ್ರಭುತ್ವ ವಿರೋಧಿ ವಾಮಮಾರ್ಗ ಅನುಸರಿಸುತ್ತಿದ್ದಾರೆ. ನಾವೆಲ್ಲಾ ರಾಜೀನಾಮೆ ಕೊಟ್ಟಿದ್ದೇವೆ. ಸಚಿವ ಸ್ಥಾನ ಕೊಡುತ್ತೇವೆ ಎಂದು ಬಹಿರಂಗವಾಗಿ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪ ಮಾಡಿದರು. 

11:36 July 09

ಡಿಸಿಪಿ ಚಂದ್ರಗುಪ್ತ ನೇತೃತ್ವದಲ್ಲಿ ರಾಜಭವನಕ್ಕೆ ಪೊಲೀಸ್​ ಬಿಗಿ ಭದ್ರತೆ..!

ಡಿಸಿಪಿ ಚಂದ್ರಗುಪ್ತ ನೇತೃತ್ವದಲ್ಲಿ ರಾಜಭವನಕ್ಕೆ ಪೊಲೀಸ್​ ಬಿಗಿ ಭದ್ರತೆ

ಬೆಂಗಳೂರು: ಸಿಎಂ ಕುಮಾರಸ್ವಾಮಿ ರಾಜಭವನಕ್ಕೆ ಬರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಡಿಸಿಪಿ ಚಂದ್ರಗುಪ್ತ ನೇತೃತ್ವದಲ್ಲಿ ರಾಜಭವನಕ್ಕೆ ಪೊಲೀಸ್​ ಬಿಗಿ ಭದ್ರತೆ ಒದಗಿಸಲಾಗಿದೆ. ಮತ್ತೊಂದೆಡೆ ಮಾರ್ಷಲ್ ಟೀಂ ಕೂಡ ಮೊಕ್ಕಂ ಹೂಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಇನ್ನು ಇಂದು ಕೂಡ ಅತೃಪ್ತ ಶಾಸಕರು ರಾಜೀನಾಮೆ ಕೊಡುವ ಸಾಧ್ಯತೆ ಇದೆ. ಹೀಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್​ ಶಾಸಕರ ರಾಜೀನಾಮೆ ವಿಚಾರ ಕುರಿತು ಸಿಎಂ ರಾಜ್ಯಪಾಲರಿಗೆ ತಿಳಿಸಿ ಬಿಜೆಪಿ ಆಪರೇಷನ್ ಕಮಲದ ಕುದುರೆ ವ್ಯಾಪಾರದ ಬಗ್ಗೆ ದೂರು ನೀಡುವ ಸಾಧ್ಯತೆ ಇದೆ.

11:30 July 09

ನಾನು ಪಕ್ಷದ ಶಿಸ್ತಿನ ಸಿಪಾಯಿ: ಶಾಸಕ ಸಂಗಮೇಶ್

ಭದ್ರಾವತಿ ಶಾಸಕ ಸಂಗಮೇಶ್

ಬೆಂಗಳೂರು: ಪಕ್ಷ ಬಿಡೋ ಮಾತೇ ಇಲ್ಲ, ನಾನು ಪಕ್ಷದ ಶಿಸ್ತಿನ ಸಿಪಾಯಿ ಎಂದು ಭದ್ರಾವತಿ ಶಾಸಕ ಸಂಗಮೇಶ್ ಹೇಳಿದರು.

ಸಚಿವ ಸ್ಥಾನ ಕೊಟ್ಟರು ಸಂತೋಷ, ಕೊಡದಿದ್ದರೂ ಸಂತೋಷ ಹಾಗೂ ಬಿಜೆಪಿ ಪಕ್ಷದವರು ನನಗೆ ಸಂಪರ್ಕಿಸಿಲ್ಲ ಇಂದು ಶಾಸಕ ಸಂಗಮೇಶ ತಿಳಿಸಿದರು. 

ಈ ಹಿಂದೆ ಭದ್ರಾವತಿಯ ಶಾಸಕ ಸಂಗಮೇಶ್ ಪಕ್ಷ ತೊರೆಯುತ್ತಾರೆ ಎಂದು ಮಾತು ಕೇಳಿಬಂದಿತ್ತು. 

11:19 July 09

ರಾಜ್ಯಪಾಲರ ಭೇಟಿಗೆ ಅನುಮತಿ ಪಡೆದ ಸಿಎಂ: ಕುತೂಹಲ ಕೆರಳಿಸಿದ ಹೆಚ್​ಡಿಕೆ ನಡೆ

  • ರಾಜ್ಯಪಾಲರ ಭೇಟಿಗೆ ಅನುಮತಿ ತೆಗೆದುಕೊಂಡ ಸಿಎಂ ಹೆಚ್.​ ಡಿ. ಕುಮಾರಸ್ವಾಮಿ
  • ಕುತೂಹಲ ಕೆರಳಿಸಿದ ಸಿಎಂ ನಡೆ
  • ಈ ಹಿನ್ನೆಲೆಯಲ್ಲಿ ರಾಜಭವನಕ್ಕೆ ಬಿಗಿ ಭದ್ರತೆ

11:09 July 09

ಕಾಂಗ್ರೆಸ್​​ ಗೆ ಕೈಕೊಟ್ಟರಾ ಮತ್ತೆ ನಾಲ್ವರು!

ಸಭೆಯಲ್ಲಿ ಹಾಜರಿದ್ದವರು: 

  • ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ 
  • ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ 
  • ಸಚಿವ ಪ್ರಿಯಾಂಕ ಖರ್ಗೆ 
  • ಸಚಿವ ಆರ್. ವಿ. ದೇಶಪಾಂಡೆ
  • ಯಶವಂತರಾಯಗೌಡ ಪಾಟೀಲ್ 
  • ಕೆಜಿಎಫ್​ನ ರೂಪಾ ಶಶಿಧರ್ 
  • ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ 
  • ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ
  • ವರುಣಾ ಶಾಸಕ ಯತೀಂದ್ರ ಸಿದ್ದರಾಮಯ್ಯ 
  • ನರಸಿಂಹ ರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್
  • ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್
  • ಲಿಂಗಸುಗೂರು ಶಾಸಕ ಡಿ.ಎಸ್.ಹುಲಗೇರಿ
  • ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ 
  • ಜಮಖಂಡಿ ಶಾಸಕ ಆನಂದ್ ನ್ಯಾಮಗೌಡ 
  • ಬಾಗೆಪಲ್ಲಿ ಶಾಸಕ ಸುಬ್ಬಾರೆಡ್ಡಿ 
  • ಶೀಡ್ಲಘಟ್ಟ ಶಾಸಕ ವಿ.ಮುನಿಯಪ್ಪ
  • ಸಚಿವ ಶಿವಶಂಕರ ರೆಡ್ಡಿ
  • ಹೆಚ್​.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು 
  • ಸಚಿವ ಶಿವಾನಂದ ಪಾಟೀಲ್ 
  • ಅಫ್ಜಲಪುರ ಶಾಸಕ ಎಂ.ವೈ.ಪಾಟೀಲ್ 
  • ಸಚಿವ ರಾಜಶೇಖರ್ ಪಾಟೀಲ್
  • ಮುಖ್ಯಸಚೇತಕ ಗಣೇಶ್ ಹುಕ್ಕೇರಿ 
  • ಕಾಗವಾಡ ಶಾಸಕ ಶ್ರೀಮಂತ ಪಾಟೀಲ್
  • ಧಾರವಾಡದ ಪ್ರಸಾದ್ ಅಬ್ಬಯ್ಯ
  • ಸಚಿವ ವೆಂಕಟರಮಣಪ್ಪ
  • ಜಯನಗರ ಶಾಸಕಿ ಸೌಮ್ಯಾ ರಾಮಲಿಂಗಾರೆಡ್ಡಿ 
  • ಬಸವಕಲ್ಯಾಣ ಶಾಸಕ ನಾರಾಯಣ್ ರಾವ್
  • ಬೆಳಗಾವಿ ಗ್ರಾಮೀಣ ಲಕ್ಷ್ಮಿ ಹೆಬ್ಬಾಳ್ಕರ್ 
  • ಶಾಂತಿನಗರ ಶಾಸಕ ಹ್ಯಾರೀಸ್
  • ವಿಜಯನಗರ ಶಾಸಕ ಎಂ.ಕೃಷ್ಣಪ್ 
  • ಸಚಿವ ಜಮೀರ್ ಅಹ್ಮದ್ 
  • ಮಾಲೂರು ನಂಜೇಗೌಡ
  • ಹಗರಿಬೊಮ್ಮನಹಳ್ಳಿ ಭೀಮಾನಾಯ್ಕ 
  • ಜೆ.ಎನ್. ಗಣೇಶ್ ಮತ್ತಿತರರು ಆಗಮಿಸಿದ್ದಾರೆ.

ಸಭೆಗೆ ಗೈರಾದವರು: 

  • ಎಸ್.ಟಿ.ಸೋಮಶೇಖರ್- ಯಶವಂತಪುರ 
  • ಭೈರತಿ ಬಸವರಾಜು- ಕೆ.ಆರ್.ಪುರಂ
  • ಮುನಿರತ್ನ- ರಾಜರಾಜೇಶ್ವರಿನಗರ
  • ರಾಮಲಿಂಗಾರೆಡ್ಡಿ- ಬಿಟಿಎಂ ಲೇಔಟ್ 
  • ಪ್ರತಾಪ್ ಗೌಡ ಪಾಟೀಲ್- ಮಸ್ಕಿ
  • ಮಹೇಶ್ ಕುಮಟಳ್ಳಿ- ಅಥಣಿ
  • ರಮೇಶ್ ಜಾರಕಿಹೊಳಿ- ಗೋಕಾಕ್ 
  • ನಾಗೇಂದ್ರ- ಬಳ್ಳಾರಿ ಗ್ರಾಮೀಣ
  • ಅಂಜಲಿ ನಿಂಬಾಳ್ಕರ್- ಖಾನಾಪೂರ
  • ಡಾ.ಸುಧಾಕರ್- ಚಿಕ್ಕಬಳ್ಳಾಪುರ 
  • ರಾಜೇಗೌಡ- ಶೃಂಗೇರಿ
  • ಬಿ.ಸಿ.ಪಾಟೀಲ್- ಹಿರೆಕೆರೂರು 
  • ಶಿವರಾಂ ಹೆಬ್ಬಾರ್- ಯಲ್ಲಾಪುರ
  • ರೋಷನ್ ಬೇಗ್- ಶಿವಾಜಿನಗರ 
  • ಎಂಟಿಬಿ ನಾಗರಾಜು- ಹೊಸಕೋಟೆ ಇದುವವರೆಗೂ ಆಗಮಿಸಿಲ್ಲ 

ರಾಜೀನಾಮೆ ನೀಡದ ಹಾಗೂ ಸಭೆಗೆ ಹಾಜರಾಗದ ಶಾಸಕರು 

  • ಅಂಜಲಿ ನಿಂಬಾಳ್ಕರ್- ಖಾನಾಪೂರ
  • ಡಾ.ಸುಧಾಕರ್- ಚಿಕ್ಕಬಳ್ಳಾಪುರ
  • ರೋಷನ್ ಬೇಗ್- ಶಿವಾಜಿನಗರ 
  • ಎಂಟಿಬಿ ನಾಗರಾಜು- ಹೊಸಕೋಟೆ 

11:03 July 09

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭ: ಕುತೂಹಲ ಘಟ್ಟಕ್ಕೆ ಬಂದು ತಲುಪಿದ ಮೈತ್ರಿ ಸರ್ಕಾರ

ಬೆಂಗಳೂರು: ವಿಧಾನಸೌಧದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಪ್ರಮುಖ ನಾಯಕರೆಲ್ಲಾ ಆಗಮಿಸಿದ್ದಾರೆ. ಸಭೆ ಆರಂಭವಾಗಿದ್ದು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿದೆ.

ಡಿಸಿಎಂ ಡಾ. ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್​ ಸೇರಿ ಮತ್ತಿತರರು ಭಾಗವಹಿಸಿದ್ದಾರೆ. ಸಭೆ ಆರಂಭವಾದ ನಂತರವೂ ಶಾಸಕರು, ಎಂಎಲ್​ಸಿಗಳು ಆಗಮಿಸುತ್ತಿದ್ದಾರೆ. 

ಮಾಜಿ ಸಿಎಂ ಸಿದ್ದರಾಮಯ್ಯ ಮೊದಲು ಬಂದರು. ಇವರ ಬೆನ್ನಲ್ಲೇ ಡಿಸಿಎಂ ಆಗಮಿಸಿದರು. ಕೆಲ ಸಮಯ ಬಿಟ್ಟು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಆನಂತರ ಕೆಸಿವಿ ಹಾಗೂ ದಿನೇಶ್ ಗುಂಡೂರಾವ್ ಒಟ್ಟಾಗಿ ಆಗಮಿಸಿದರು. 

10:56 July 09

ಶಂಕರ್ ಮನವೊಲಿಸುವಲ್ಲಿ ವಿಫಲ: ಬರಿಗೈಲಿ ವಾಪಸ್‌ ಆದ ಡಿಕೆಶಿ

ಬೆಂಗಳೂರಿಗೆ ಆಗಮಿಸಿದ ಸಚಿವ ಡಿ.ಕೆ. ಶಿವಕುಮಾರ್

ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ದೆಹಲಿಯಿಂದ 9:25ರ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.  

ನೆನ್ನೆ ಸಂಜೆ ದೆಹಲಿಗೆ ಹೋಗಿದ್ದ ಡಿಕೆಶಿ ಇಂದು ಬೆಂಗಳೂರಿಗೆ ವಾಪಸಾದರು. ಸಚಿವ ಶಂಕರ್ ಮನವೊಲಿಸುವಲ್ಲಿ ವಿಫಲರಾಗಿದ್ದ ಶಿವಕುಮಾರ್, ದೆಹಲಿಗೆ ತೆರಳಿದ್ದರು. ರಾತ್ರಿ ದೆಹಲಿಯಲ್ಲಿಯೇ ತಂಗಿದ್ದು, ಇಂದು ಮುಂಬೈಗೆ ಹೋಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ದಿಢೀರ್​ ಬೆಂಗಳೂರಿಗೆ ಆಗಮಿಸಿರೋದು ಮತ್ತಷ್ಟು ಕುತೂಹಲ ಸೃಷ್ಟಿಸಿದೆ.

10:50 July 09

ವಿಧಾನಸೌಧಕ್ಕೆ ಆಗಮಿಸಿದ ಸ್ಪೀಕರ್​.. ಇನ್ನೆಷ್ಟು ಎಂಎಲ್​ಎಗಳು ರಿಸೈನ್​?

ಸ್ಪೀಕರ್​ ರಮೇಶ್​ ಕುಮಾರ್​ ವಿಧಾನಸೌಧಕ್ಕೆ ಆಗಮಿಸಿದ್ದು, ರಾಜೀನಾಮೆ ನೀಡಿದ ಶಾಸಕರ ರಾಜೀನಾಮೆ ಪತ್ರಗಳ ಪರಿಶೀಲನೆ ನಡೆಸಿ ತಮ್ಮ ಮುಂದಿನ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. 

ಸ್ಪೀಕರ್​ ಅವರ ನಡೆ ಈಗ ತೀವ್ರ ಕುತೂಹಲ ಕೆರಳಿಸಿದೆ.

10:41 July 09

ಮಗನ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ದೇವರ ಮೊರೆ ಹೋದ ಮಾಜಿ ಪ್ರಧಾನಿ

ದೇವಸ್ಥಾನಕ್ಕೆ ತೆರಳಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ

ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ದೇವಸ್ಥಾನಕ್ಕೆ ತೆರಳಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇದೀಗ ಮನೆಗೆ ವಾಪಸ್​ ಆಗಿದ್ದಾರೆ. 

ರಾಜಕೀಯ ವಿದ್ಯಮಾನಗಳಿಂದ ಬೇಸತ್ತಿರುವ ದೇವೇಗೌಡರು, ತಮ್ಮ ಮಗನ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ದೇವರ ಮೊರೆ ಹೋಗಿದ್ದರು. ಬೆಂಗಳೂರಿನ ಹೆಚ್.ಎಸ್.ಆರ್ ಲೇಔಟ್​ನಲ್ಲಿರುವ ಈಶ್ವರ ದೇವಸ್ಥಾನಕ್ಕೆ ಬೆಳಗ್ಗೆ 7 ಗಂಟೆ ಸುಮಾರಿಗೆ ತೆರಳಿದ್ದ ಗೌಡರು, 10.15 ರ ಸುಮಾರಿಗೆ ವಾಪಸ್ಸು ಆದರು.
  

10:35 July 09

ಗುಂಡೂರಾವ್ ಜೊತೆ ವಿಧಾನಸೌನಕ್ಕೆ ತೆರಳಿದ ವೇಣುಗೋಪಾಲ್

ಬೆಂಗಳೂರು:ಇಂದು ರಾಜಭವನಕ್ಕೆ ಬಿಜೆಪಿ ನಾಯಕರು ಭೇಟಿ ಹಿನ್ನೆಲೆ ರಾಜಭವನ ಸುತ್ತಾ ಮುತ್ತಾ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಮತ್ತೊಂದೆಡೆ ಇಂದು ಕೂಡ ಅತೃಪ್ತ ಕೆಲ ಶಾಸಕರು ರಾಜಿನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಜೊತೆ ವಿಧಾನಸೌನಕ್ಕೆ ತೆರಳಿದ ವೇಣುಗೋಪಾಲ್, ರಾಮಲಿಂಗಾರೆಡ್ಡಿ ಜೊತೆ ಮಾತನಾಡಿದ್ದೀನಿ, ನನಗೆ ಗೊತ್ತಿದೆ. ರಾಮಲಿಂಗಾರೆಡ್ಡಿ ಕಾಂಗ್ರೆಸ್ ಬಿಡೋಲ್ಲ ಎಂದಿದ್ದಾರೆ. ಅಲ್ಲದೆ ಎಷ್ಟು ಜನ ಶಾಸಕರು ರಾಜೀನಾಮೆ ಕೊಟ್ಟಿದ್ದಾರೆ ಎಂಬುದರ ನನಗೆ ಗೊತ್ತಿಲ್ಲ ಎಂದಿದ್ದಾರೆ.

10:30 July 09

ಇಂದು ಶಾಸಕರ ರಾಜೀನಾಮೆ ಅಂಗೀಕಾರ ಸಾಧ್ಯತೆ ತೀರಾ ಕಡಿಮೆ?

ಸ್ಪೀಕರ್​ 13 ಶಾಸಕರ ರಾಜೀನಾಮೆ ಅಂಗೀಕರಿಸುವುದು ಅನುಮಾನ ಎನ್ನಲಾಗಿದೆ. ಎಲ್ಲ ಶಾಸಕರಿಗೆ ಸಮನ್ಸ್​ ನೀಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಮಾತನಾಡಿರುವ ಸ್ಪೀಕರ್​ ರಮೇಶ್​ ಕುಮಾರ್ ಸಂವಿಧಾನ ಬದ್ಧವಾಗಿ ನಡೆದುಕೊಳ್ಳುವುದಾಗಿ ಹೇಳಿದ್ದಾರೆ. 

10:17 July 09

ತಾಜ್ ​ವೆಸ್ಟೆಂಡ್ ಹೋಟೆಲ್​ಗೆ ಆಗಮಿಸಿದ ಸಿಎಂ ಕುಮಾರಸ್ವಾಮಿ

ದೇವೇಗೌಡರ ನಿವಾಸದಿಂದ ತಾಜ್ ​ವೆಸ್ಟೆಂಡ್ ಹೋಟೆಲ್​ಗೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ
  • ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರ ನಿವಾಸದಿಂದ ತಾಜ್ ​ವೆಸ್ಟೆಂಡ್ ಹೋಟೆಲ್​ಗೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ
  • ತಾಜ್ ವೆಸ್ಟೆಂಡ್ ಹೋಟೆಲ್​ಗೆ ಪೊಲೀಸ್​ ಬಿಗಿಭದ್ರತೆ
  • ನಿನ್ನೆ ಸಂಪೂರ್ಣ ಜೆಡಿಎಸ್ ಶಾಸಕರಿಂದ ಕೂಡಿದ್ದ ಹೋಟೆಲ್ 

10:07 July 09

ಸಮ್ಮಿಶ್ರ ಸರ್ಕಾರ ಮುಂದುವರೆಯುತ್ತೆ: ಗುಂಡೂರಾವ್

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬೆಂಗಳೂರು:ಸರ್ಕಾರ ಯಾವುದೇ ಕಾರಣಕ್ಕೂ ಬಿಳೋಲ್ಲ. ಕಾಂಗ್ರೆಸ್​ ಹಾಗೂ ಜೆಡಿಎಸ್​ ಸಮ್ಮಿಶ್ರ ಸರ್ಕಾರ ಮುಂದುವರೆಯುತ್ತೆ. ಬಿಜೆಪಿ ಪ್ರಜಾಪ್ರಭುತ್ವವನ್ನ ಕಗ್ಗೊಲೆ ಮಾಡುತ್ತಿದೆ. ಇದರಲ್ಲಿ ಬಿಜೆಪಿ ರಾಷ್ಟ್ರೀಯ ನಾಯಕರ ಕೈವಾಡವಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನೇರವಾಗಿ ಆರೋಪ ಮಾಡಿದರು.

ಕೃಮಾರಕೃಪಾ ಗೆಸ್ಟ್ ಹೌಸ್​ನಲ್ಲಿ ವೇಣುಗೋಪಾಲ್ ಅವರನ್ನು ಭೇಟಿ ಆಗಲು ಬಂದಾಗ ಸುದ್ದಿಗಾರರ ಜೊತೆ ಅವರು ಮಾತನಾಡಿದರು. 

10:02 July 09

ವಿಧಾನಸೌಧದತ್ತ ತೆರಳಿದ ಕೈ ನಾಯಕರು

ಬೆಂಗಳೂರು:ಸಿಎಲ್​ಪಿ ಮೀಟಿಂಗ್​ನಲ್ಲಿ ಭಾಗವಹಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ವೇಣುಗೋಪಾಲ್ ಸೇರಿದಂತೆ ಇತರೆ ಕೈ ಮುಖಂಡರು ವಿಧಾನಸೌಧದತ್ತ ತೆರಳಿದರು. ಇದೀಗ ನಡೆಯಲಿರುವ ಸಭೆಯಲ್ಲಿ ಕೊನೆಯ ಹಂತೆದ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. 

09:56 July 09

ಜನರ ನಿರೀಕ್ಷೆಯಂತೆ; ಜವಾಬ್ದಾರಿಯುತವಾಗಿ ನಾನು ನಡೆದುಕೊಳ್ಳುವೆ: ಸ್ಪೀಕರ್

ಸ್ಪೀಕರ್​ ರಮೇಶ್​ ಕುಮಾರ್

ಬೆಂಗಳೂರು: ನಾನು ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದೇನೆ. ಹಾಗಾಗಿ ಗೌರಯುತವಾಗಿ ನಡೆದುಕೊಳ್ಳುವೆ. ಸಂವಿಧಾನ ಹೇಳಿಕೆಯಂತೆ ನಾನು ಮುದುವರೆಯುತ್ತೇನೆ ಎಂದು ಸ್ಪೀಕರ್​ ರಮೇಶ್​ ಕುಮಾರ್​ ಹೇಳಿದ್ದಾರೆ. 
 

09:48 July 09

ಮಹತ್ವದ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ ಆರಂಭ

ಬೆಂಗಳೂರು: ಸಾಲು ಸಾಲು ರಾಜೀನಾಮೆ ಕೊಟ್ಟು ಪಕ್ಷತ್ಯಜಿಸುತ್ತಿರುವ ಶಾಸಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಕರೆದಿರುವ ಮಹತ್ವದ ಶಾಸಕಾಂಗ ಪಕ್ಷದ ಸಭೆಗೆ ಕ್ಷಣಗಣನೆ ಆರಂಭವಾಗಿದೆ. ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಹರಸಾಹಸದ ಜೊತೆಗೆ ಇನ್ನಷ್ಟು ಶಾಸಕರು ಕೈತಪ್ಪಿಹೋಗದಂತೆ ತಡೆಯಲು ಕಾಂಗ್ರೆಸ್ ಪಕ್ಷ ಇಂದು ಶಾಸಕಾಂಗ ಪಕ್ಷದ ಸಭೆ ಕರೆದಿದ್ದು ಇದರಲ್ಲಿ ಎಷ್ಟು ಶಾಸಕರು ಪಾಲ್ಗೊಳ್ಳಲಿದ್ದಾರೆ ಎನ್ನುವುದೇ ದೊಡ್ಡ ಕುತೂಹಲದ ಪ್ರಶ್ನೆಯಾಗಿದೆ. 

ಇಂದು ಪಕ್ಷಕ್ಕೆ ಇನ್ನಷ್ಟು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಇವರನ್ನು ಉಳಿಸಿಕೊಳ್ಳುವ ಹಾಗೂ ಮನವೊಲಿಸುವ ಯತ್ನ ಇಂದು ನಡೆಯಲಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಡಿಸಿಎಂ ಡಾ ಜಿ ಪರಮೇಶ್ವರ್ ಪಾಲ್ಗೊಳ್ಳಲಿದ್ದಾರೆ.

09:40 July 09

ಮಾಜಿ ಸ್ಪೀಕರ್ ಜೊತೆ ಬಿಎಸ್​ವೈ ಸಮಾಲೋಚನೆ

ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ

ಬೆಂಗಳೂರು:ಶಾಸಕರ ರಾಜೀನಾಮೆ ಅಂಗೀಕಾರ ಸಂಬಂಧ ವಿಧಾನಸಭೆ ಅಧ್ಯಕ್ಷ ರಮೇಶ್ ಕುಮಾರ್ ಇಂದು ನಿರ್ಧಾರ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಮಾಜಿ ಸ್ಪೀಕರ್ ಜೊತೆ ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಮಾಲೋಚನೆ ನಡೆಸಿದರು.

ಮುಂಜಾನೆ ಎಂದಿನಂತೆ ವಾಕಿಂಗ್ ಮುಗಿಸಿಕೊಂಡು ಬಂದ ಯಡಿಯೂರಪ್ಪ, ನಂತರ ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಗೆ ಮಾಜಿ ಸ್ಪೀಕರ್ ಕೆ.ಜಿ ಬೋಪಯ್ಯ ಅವರನ್ನು ಕರೆಸಿಕೊಂಡರು. ಕಳೆದ ಮೂರು ದಿನದಿಂದ ನಿರಂತರವಾಗಿ ಬೋಪಯ್ಯ ಜೊತೆ ಬಿಎಸ್​ವೈ ಸಮಾಲೋಚನೆ ನಡೆಸುತ್ತಿದ್ದಾರೆ.

09:25 July 09

ರಾತ್ರಿ 11 ಗಂಟೆಗೆ ಮನೆಗೆ ಬಂದ ಡಿಸಿಎಂ ಪರಮೇಶ್ವರ್

ಡಿಸಿಎಂ ಪರಮೇಶ್ವರ್

ಬೆಂಗಳೂರು: ನಿನ್ನೆ ತಡರಾತ್ರಿಯವರೆಗೆ ಕಾಂಗ್ರೆಸ್​​ ನಾಯಕರ ಜೊತೆ ಚರ್ಚೆ ನಡೆಸಿದ ಡಿಸಿಎಂ ಪರಮೇಶ್ವರ್, ರಾತ್ರಿ 11 ಗಂಟೆಗೆ ತಮ್ಮ ಮನೆಗೆ ವಾಪಸಾಗಿದ್ದಾರೆ. ಇದೀಗ ಸದಾಶಿವನಗರದ ತಮ್ಮ ಸ್ವಂತ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅವರು, 11 ಗಂಟೆಯ ಬಳಿಕ ಮತ್ತೆ ಕಾಂಗ್ರೆಸ್​​ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. 
 

09:19 July 09

ದೇವೇಗೌಡರ ನಿವಾಸಕ್ಕೆ ಸಿಎಂ ಆಗಮನ

ದೇವೇಗೌಡರನ್ನು ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು : ಜೆಡಿಎಸ್​ ವರಿಷ್ಠ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ಸಿಎಂ ಕುಮಾರಸ್ವಾಮಿ ಇಂದು ಭೇಟಿ ನೀಡಿದ್ದಾರೆ. ಇಂದಿನ ರಾಜಕೀಯ ವಿದ್ಯಮಾನಗಳ ಕುರಿತು ದೇವೇಗೌಡರ ಜೊತೆ ಸಿಎಂ ಕುಮಾರಸ್ವಾಮಿ ಅವರು ಚರ್ಚೆ ನಡೆಸುತ್ತಿದ್ದಾರೆ.

ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ಆಗಮಿಸಿರುವ ಸಿಎಂ, ದೇವೇಗೌಡರ ಜೊತೆ ಮುಂದಿನ ಹೆಜ್ಜೆ ಕುರಿತು ಗಹನವಾದ ಚರ್ಚೆಯಲ್ಲಿ ತೊಡಗಿದ್ದಾರೆ.

09:08 July 09

ಕೊನೆಯ ಹಂತದ ಕಸರತ್ತಿಗೆ ಮುಂದಾದ ಮೈತ್ರಿ ಮುಖಂಡರು

ಬೆಂಗಳೂರು:ನಿನ್ನೆ ತಡರಾತ್ರಿಯವರೆಗೆ ಕಾಂಗ್ರೆಸ್​​ ನಾಯಕರ ಜೊತೆ ಚರ್ಚೆ ನಡೆಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಬೆಳಗಿನ ಜಾವ 4 ಗಂಟೆಗೆ ಮನೆಗೆ ವಾಪಸಾಗಿದ್ದಾರೆ. ಇದೀಗ ತಮ್ಮ ಕಾವೇರಿ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಅವರು, 11 ಗಂಟೆಯ ಬಳಿಕ ಮತ್ತೆ ಕಾಂಗ್ರೆಸ್​​ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. 

ಈ ಸಭೆಯಲ್ಲಿ ಕೊನೆಯ ಹಂತದ ಚರ್ಚೆಗಳು ನಡೆಯಲಿವೆ ಎನ್ನಲಾಗುತ್ತಿದೆ. ಕೆ.ಕೆ.ಗೆಸ್ಟ್​ ಹೌಸ್​ನಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಎಂ.ಬಿ.ಪಾಟೀಲ್, ಡಿಸಿಎಂ ಪರಮೇಶ್ವರ್ ಸೇರಿದಂತೆ ಹಲವು ಹಿರಿಯ ನಾಯಕರು ಭಾಗಿಯಾಗುವ ಸಾಧ್ಯತೆ ಇದೆ. 

08:54 July 09

ಬಿಎಸ್​ವೈ ನಿವಾಸದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆಗಳು!

ಬೆಂಗಳೂರು: ಒಂದು ಕಡೆ ಮೈತ್ರಿ ಸರ್ಕಾರದ ಆಯಸ್ಸು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಮತ್ತೊಂಡೆಡೆ ಬಿಜೆಪಿ ನಾಯಕರು ಸಭೆ ಸಭೆ ಮೇಲೆ ನಡೆಸುತ್ತಿದ್ದು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ ಎನ್ನಲಾಗುತ್ತಿದೆ. 

ಮೈತ್ರಿ ಕೆಡವಲು ತುದಿಗಾಲ ಮೇಲೆ ನಿಂತಿರುವ ಬಿಜೆಪಿ ಕಾಯಕರು ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪನವರ ನಿವಾಸಕ್ಕೆ ಆಗಮಿಸಿದ್ದಾರೆ. ಬಿಜೆಪಿ ನಾಯಕರಾದ ಮುರುಗೇಶ್​ ನಿರಾಣಿ, ಉಮೇಶ್​ ಕತ್ತಿ, ಜೆ.ಸಿ. ಮಾಧುಸ್ವಾಮಿ ಹಾಗೂ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಬಿಎಸ್​ವೈ ಮನೆಗೆ ಆಗಮಿಸಿದ್ದಾರೆ. 

08:08 July 09

ಸ್ಪೀಕರ್​ ತೀರ್ಮಾನದ ಮೇಲೆ ದೋಸ್ತಿ ಸರ್ಕರದ ಭವಿಷ್ಯ..!

ಸಂಗ್ರಹ ಚಿತ್ರ

ಬೆಂಗಳೂರು:ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಸ್ಪೀಕರ್ ರಮೇಶ್ ಕುಮಾರ್​ ತಗೆದುಕೊಳ್ಳುವ ತೀರ್ಮಾನದ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರದ ಭವಿಷ್ಯ ನಿಂತಿದೆ.

ವಿಧಾನಸಭಾದ್ಯಕ್ಷರು ಅತೃಪ್ತ ಶಾಸಕರು ನೀಡಿರುವ ರಾಜೀನಾಮೆ ಅಂಗೀಕರಿಸಿದರೆ ದೋಸ್ತಿ ಸರ್ಕಾರ ಅಲ್ಪ ಮತಕ್ಕೆ ಕುಸಿಯಲಿದೆ. ತಾಂತ್ರಿಕ ಕಾರಣಗಳಿಂದ ಅಥವಾ ಮೈತ್ರಿ ಪಕ್ಷಗಳ ಶಾಸಕರು ಆಸೆ- ಆಮಿಷಗಳಿಗೆ ಒಳಗಾಗಿ ರಾಜೀನಾಮೆ ಸಲ್ಲಿಸಿದ್ದಾರೆಂದು ಅವುಗಳನ್ನು ತಿರಸ್ಕರಿಸಿದರೆ ಅಪಾಯದಿಂದ ಕುಮಾರಸ್ವಾಮಿ ಸರ್ಕಾರ ಸದ್ಯಕ್ಕೆ ಪಾರಾಗಲಿದೆ. 

07:57 July 09

ವಿಧಾನಸೌಧದಲ್ಲಿ ಇಂದು ಮಹತ್ವದ ಸಭೆ..!

ವಿಧಾನಸೌಧ

ಬೆಂಗಳೂರು: ಕಾಂಗ್ರೆಸ್​ ಪಕ್ಷದ ಅತ್ಯಂತ ಮಹತ್ವದ ಶಾಸಕಾಂಗ ಸಭೆ ಇಂದು ವಿಧಾನಸೌಧದಲ್ಲಿ ನಡೆಯಲಿದೆ. ಬೆಳಗ್ಗೆ 9.30 ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದೆ.

ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಪಕ್ಷದ ಸಭೆ ಅತ್ಯಂತ ಮಹತ್ವದ್ದಾಗಿದ್ದು, ಇದೀಗ ಎದುರಾಗಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ನಡೆಸಿರುವ ಮಧ್ಯೆಯೇ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಈ ಸಭೆ ಮಹತ್ವದ ಪಾತ್ರ ನಿರ್ವಹಿಸಲಿದೆ. ಶತಾಯಗತಾಯ ಪಕ್ಷದ ಶಾಸಕರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಇಂದು ಎಲ್ಲರನ್ನು ವಿಶ್ವಾಸಕ್ಕೆ ಪಡೆಯುವ ಕಾರ್ಯವನ್ನು ಸಿದ್ದರಾಮಯ್ಯ ಮಾಡಲಿದ್ದಾರೆ.

ಅತೃಪ್ತರು ಅನುಮಾನ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಾಗೂ ನೀಡಲು ನಿರ್ಧರಿಸಿರುವ ಶಾಸಕರು ಇಂದಿನ ಸಭೆಗೆ ಆಗಮಿಸುವುದು ಅನುಮಾನ ಎನ್ನಲಾಗಿದೆ. ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಸೇರಿರುವ ಎಲ್ಲಾ ಶಾಸಕರು ಇಂದು ಸಭೆಗೆ ಹಾಜರಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಶಾಸಕ ರೋಷನ್ ಬೇಗ್ ಸೇರಿದಂತೆ ಹಲವು ಶಾಸಕರು ಇಂದು ಸ್ಪೀಕರ್ ಭೇಟಿಮಾಡಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಹೆಚ್ಚಿದ್ದು ಇವರು ಶಾಸಕಾಂಗ ಪಕ್ಷದ ಸಭೆಗೆ ಆಗಮಿಸುವುದು ಅನುಮಾನ ಎನ್ನಲಾಗುತ್ತಿದೆ.

07:48 July 09

ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರ ಆಗುತ್ತದೆಯೋ? ಇಲ್ಲವೋ?

ಬೆಂಗಳೂರು:ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟ ತೀವ್ರ ಕುತೂಹಲ ಕೆರಳಿಸಿದೆ. ಕಾಂಗ್ರೆಸ್​ ಹಾಗೂ ಜೆಡಿಎಸ್​ನ 13 ಅತೃಪ್ತ ಶಾಸಕರು ಈಗಾಗಲೇ ರಾಜೀನಾಮೆ ನೀಡಿದ್ದು ರೆಸಾರ್ಟ್ ರಾಜಕೀಯ ಶುರುವಾಗಿದೆ.

ಅಲ್ಲದೆ ಇಂದು ಸಹ ಅತೃಪ್ತರಾದ ಕಾಂಗ್ರೆಸ್​ನ ಶಾಸಕರಾದ ಬಿ.ನಾಗೇಂದ್ರ, ಸೌಮ್ಯಾರೆಡ್ಡಿ, ಶ್ರೀನಿವಾಸಗೌಡ, ಸುಬ್ಬಾರೆಡ್ಡಿ, ಎಂ.ಟಿ.ಬಿ ನಾಗರಾಜ್, ಶಿರಾ ಸತ್ಯನಾರಾಯಣ್ ಹಾಗೂ ಜೆಡಿಎಸ್​ನ ಅಶ್ವಿನ್ ಕುಮಾರ್ ಸೇರಿದಂತೆ ಇನ್ನೂ ಹಲವರು ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡುವ ಸಾಧ್ಯತೆ ಇದೆ. 

ಕಳೆದೆರಡು ದಿನಗಳಿಂದ ಖಾಸಗಿ ಕಾರ್ಯಕ್ರಮದ ನಿಮಿತ್ತ ರಾಜಕೀಯದಿಂದ ಕೊಂಚ ದೂರ ಇದ್ದ ಸ್ಪೀಕರ್ ರಮೇಶ್ ಕುಮಾರ್, ಇಂದು ವಿಧಾನಸೌಧಕ್ಕೆ ಆಗಮಿಸಲಿದ್ದಾರೆ. ಅಲ್ಲದೆ ಈಗಾಗಲೇ ರಾಜೀನಾಮೆ ನೀಡಿರುವ ಕಾಂಗ್ರೆಸ್​-ಜೆಡಿಎಸ್​ನ ಅತೃಪ್ತ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುತ್ತಾರಾ ಅಥವಾ ನಿರಾಕರಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಅಲ್ಲದೆ ಈಗಾಗಲೇ ಕೆಪಿಸಿಸಿ ಘಟಕ 13 ಶಾಸಕರ ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಸ್ಪೀಕರ್​​ಗೆ ಪತ್ರವನ್ನು ಸಹ ಬರೆದಿದೆ.

07:21 July 09

ಕಾನೂನು ತಜ್ಞರ ಜೊತೆ ಸತತ ಸಂಪರ್ಕದಲ್ಲಿ ಬಿಜೆಪಿ ಲೀಡರ್ಸ್​

Last Updated : Jul 10, 2019, 11:02 AM IST

ABOUT THE AUTHOR

...view details