ಬೆಂಗಳೂರು:ಇದೇ ಮೊದಲ ಬಾರಿಗೆ ಯಾವುದೇ ವಾಹನ ಸವಾರರು ನಿಂತ ಜಾಗದಲ್ಲೇ 'ಪಂಚರ್ ಸರ್ವೀಸ್' ಪಡೆಯುವ ವಿನೂತನ ಆ್ಯಪ್ ಒಂದನ್ನು ಸಿಲಿಕಾನ್ ಸಿಟಿಯಲ್ಲಿ ಹೊರ ತರಲಾಗಿದೆ. ರಾಜಧಾನಿ ಬೆಂಗಳೂರಿನ ಬ್ಲಾಕ್ ಪೆನ್ ಕಮ್ಯೂನಿಕೇಶನ್ಸ್ ಕಂಪನಿಯ ಸಹಯೋಗದೊಂದಿಗೆ 'ಲೈವ್ ಪಂಚರ್' ಆ್ಯಪ್ ಬಿಡುಗಡೆ ಮಾಡಲಾಗಿದೆ.
ಇದರ ಬಳಕೆಯೂ ಸಂಪೂರ್ಣ ಉಚಿತವಾಗಿದ್ದು, ಪಂಚರ್ ಕಾರ್ಮಿಕರ ಮತ್ತು ವಾಹನ ಸವಾರರ ನಡುವೆ ಸಂಪರ್ಕ ಬೆಳೆಸುವುದೇ ಈ ಆ್ಯಪ್ನ ಮುಖ್ಯ ಉದ್ದೇಶವಾಗಿದೆ. ಸದ್ಯ ಆಂಡ್ರಾಯ್ಡ್ ಮೊಬೈಲ್ಗಳಲ್ಲಿ ಈ ಆ್ಯಪ್ ಲಭ್ಯವಿದ್ದು, ವಾಹನ ಸವಾರರು ಪ್ಲೇ ಸ್ಟೋರ್ ಅಪ್ಲಿಕೇಶನ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಸಹ ಸಂಸ್ಥಾಪಕ ಸಮೀರ್ ದಳಸನೂರು 'ಈಟಿವಿ ಭಾರತ'ಕ್ಕೆ ತಿಳಿಸಿದ್ದಾರೆ.
ಬಳಕೆ, ಕಾರ್ಯ ಹೇಗೆ?:ಈ ಆ್ಯಪ್ ಅನ್ನು ಡೋನ್ ಲೋಡ್ ಮಾಡಿಕೊಂಡ ಬಳಿಕ ವಾಹನ ಸವಾರರು, ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಾಹನದ ಚಕ್ರಗಳೆಷ್ಟು ಎಂದು ನಮೂದಿಸಿದ ಬಳಿಕ ಆ್ಯಪ್ ಬಳಕೆ ಮಾಡಬಹುದಾಗಿದೆ ಎಂದು ಸಮೀರ್ ಮಾಹಿತಿ ನೀಡಿದ್ದಾರೆ.
ಒಂದು ವೇಳೆ ನೀವು ಕಚೇರಿಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ನಿಮ್ಮ ವಾಹನದ ಚಕ್ರ ಪಂಚರ್ ಆಗಿ ಸಮಸ್ಯೆ ಉಲ್ಬಣಗೊಂಡಿದೆ ಎಂದುಕೊಳ್ಳಿ. ಆಗ ಈ ಆ್ಯಪ್ ತೆರೆದು ನೀವು ನಿಮ್ಮ ಹತ್ತಿರದಲ್ಲೇ ಯಾವ ಪಂಚರ್ ಅಂಗಡಿ ಇದೆ ಎಂದು ನೋಡಬಹುದು. ಬಳಿಕ ಅವರಿಗೆ ಮೊಬೈಲ್ ಕರೆ ಮಾಡಿ ನಿಮ್ಮ ವಾಹನದ ಬಳಿಯೇ ಕರೆಸಿಕೊಳ್ಳಬಹುದು. ಜೊತೆಗೆ ಎಷ್ಟು ಹೊತ್ತಿಗೆ, ಎಲ್ಲಿ ಬರುತ್ತಿದ್ದಾರೆ ಎಂಬುದನ್ನು ಲೈವ್ ನೋಡಬಹುದಾಗಿದೆ.
ಕಾರ್ಮಿಕರಿಗೆ ಅನುಕೂಲ:ಇದೊಂದು ಆ್ಯಪ್ ಅಸಂಘಟಿತ ವಲಯದ ಪಂಚರ್ ಕಾರ್ಮಿಕರ ಅನುಕೂಲಕ್ಕೆ ಮಾಡಲಾಗಿದ್ದು, ಕಂಪನಿಯು ಯಾವುದೇ ರೀತಿಯ ಶುಲ್ಕ ಅಥವಾ ಕಮಿಷನ್ ಪಡೆಯುತ್ತಿಲ್ಲ. ಬದಲಾಗಿ ನೇರವಾಗಿಯೇ ಗ್ರಾಹಕನೊಂದಿಗೆ ಆ್ಯಪ್ ಮೂಲಕ ಸಂಪರ್ಕ ಇಟ್ಟುಕೊಳ್ಳಬಹುದಾಗಿದೆ.