ಬೆಂಗಳೂರು:ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಂಡ ರಚನೆಯಾಗಿದ್ದು, ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗಿದೆ. ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕರ ಆಯ್ಕೆಯಲ್ಲಿ ಮೇಲುಗೈ ಸಾಧಿಸಿದ್ದ ಯಡಿಯೂರಪ್ಪ, ಪುತ್ರನ ತಂಡ ರಚಿಸುವಲ್ಲಿಯೂ ಮೇಲುಗೈ ಸಾಧಿಸಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಬಿಎಸ್ವೈ ಬೆಂಬಲಿಗರಿಗೇ ಮಣೆ ಹಾಕಲಾಗಿದೆ.
ನವದೆಹಲಿ ಪ್ರವಾಸದಲ್ಲಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೂತನ ರಾಜ್ಯ ಪದಾಧಿಕಾರಿಗಳ ಪಟ್ಟಿಗೆ ಹೈಕಮಾಂಡ್ನಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದು, ಪಟ್ಟಿ ಪ್ರಕಟಿಸಿದ್ದಾರೆ. ಈ ಹಿಂದಿನ ದೆಹಲಿ ಪ್ರವಾಸದ ವೇಳೆಯಲ್ಲಿಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾರಿಗೆ ಪಟ್ಟಿ ನೀಡಿದ್ದ ವಿಜಯೇಂದ್ರ ಅನುಮತಿ ಕೋರಿದ್ದರು. ಆದರೆ, ಪಕ್ಷದ ಪ್ರಮುಖರ ಜೊತೆ ಮತ್ತೊಮ್ಮೆ ಚರ್ಚಿಸಿ ಬರುವಂತೆ ನೀಡಿದ್ದ ಸಲಹೆ ಮೇರೆಗೆ ಮಲ್ಲೇಶ್ವರದಲ್ಲಿರುವ ರಾಜ್ಯ ಕಾರ್ಯಾಲಯದಲ್ಲಿ ಎರಡು ದಿನ ಪ್ರಮುಖರ ಸಭೆ ನಡೆಸಿ ಚರ್ಚಿಸಿದ್ದ ವಿಜಯೇಂದ್ರ ನಂತರ ಈಗ ಮತ್ತೆ ಹೈಕಮಾಂಡ್ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಅಮಿತ್ ಶಾ ಜೊತೆಗಿನ ಸಭೆ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜ್ಯ ಪದಾಧಿಕಾರಿಗಳ ಪಟ್ಟಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದರಂತೆ ವಿಜಯೇಂದ್ರ ಇಂದು ಪಟ್ಟಿ ಪ್ರಕಟಿಸಿದ್ದಾರೆ. ಖಜಾಂಚಿ ಹೊರತುಪಡಿಸಿ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಮೋರ್ಚಾಗಳ ಅಧ್ಯಕ್ಷರನ್ನು ಬದಲಿಸಲಾಗಿದ್ದು, ಬಿಎಸ್ವೈ ಬೆಂವಲಿಗರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ.
ಬಿಜೆಪಿ ನೂತನ ಪದಾಧಿಕಾರಿಗಳ ಪಟ್ಟಿ:ಹತ್ತು ಉಪಾಧ್ಯಕ್ಷರ ನೇಮಕ ಮಾಡಲಾಗಿದ್ದು, ಮಾಜಿ ಸಚಿವ ಮುರುಗೇಶ್ ನಿರಾಣಿ, ಬೈರತಿ ಬಸವರಾಜ್, ರಾಜುಗೌಡ ನಾಯಕ್, ಎನ್ ಮಹೇಶ್, ಅನಿಲ್ ಬೆನಕೆ, ಹರತಾಳು ಹಾಲಪ್ಪ, ರೂಪಾಲಿ ನಾಯಕ್, ಬಸವರಾಜ್ ಕೇಲಗಾರ, ಮಾಳವಿಕಾ ಅವಿನಾಶ್ ಹಾಗೂ ರಾಜೇಂದ್ರ ಅವರನ್ನು ನೇಮಕ ಮಾಡಲಾಗಿದೆ.
ರಾಜ್ಯ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಸುನಿಲ್ ಕುಮಾರ್, ಪಿ ರಾಜೀವ್, ನಂದೀಶ್ ರೆಡ್ಡಿ, ಪ್ರೀತಮ್ ಗೌಡರನ್ನು ನೇಮಕ ಮಾಡಲಾಗಿದೆ. ಕಾರ್ಯದರ್ಶಿಗಳನ್ನಾಗಿ ಶೈಲೇಂದ್ರ ಬೆಲ್ದಾಳೆ, ಡಿ.ಎಸ್ ಅರುಣ್, ಬಸವರಾಜ್ ಮತ್ತಿಮೋಡ್, ಸಿ ಮುನಿರಾಜು, ವಿನಯ್ ಬಿದರೆ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಶರಣು ತಳ್ಳಕೇರಿ, ಲಲಿತಾ ಅನಾಪುರ, ಲಕ್ಷ್ಮೀ ಅಶ್ವಿನ್ ಗೌಡ, ಅಂಬಿಕಾ ಹುಲಿನಾಯ್ಕರ್ ನೇಮಕ ಮಾಡಲಾಗಿದೆ ಆದರೆ ಖಜಾಂಚಿಯಾಗಿ ಸುಬ್ಬ ನರಸಿಂಹ ಅವರನ್ನೇ ಮುಂದುವರಿಕೆ ಮಾಡಲಾಗಿದೆ.
ಮಹಿಳಾ ಮೋರ್ಚಾ ಅಧ್ಯಕ್ಷರನ್ನಾಗಿ ಸಿ ಮಂಜುಳಾ (ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ)ರನ್ನು ನೇಮಿಸಿದ್ದು, ಯುವಮೋರ್ಚಾ ಅಧ್ತಕ್ಷರನ್ನಾಗಿ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಓಬಿಸಿ ಮೋರ್ಚಾ ಅಧ್ಯಕ್ಷರನ್ನಾಗಿ ರಘು ಕೌಟಿಲ್ಯ, ರೈತ ಮೋರ್ಚಾ ಅಧ್ಯಕ್ಷರನ್ನಾಗಿ ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ, ಎಸ್ಟಿ ಮೋರ್ಚಾ ಅಧ್ಯಕ್ಷರನ್ನಾಗಿ ಬಂಗಾರು ಹನುಮಂತ್, ಎಸ್ಸಿ ಮೋರ್ಚಾ ಅಧ್ಯಕ್ಷರನ್ನಾಗಿ ಸಕಲೇಶಪುರ ಶಾಸಕ ಎಸ್ ಮಂಜುನಾಥ್ @ ಸೀಮೆಂಟ್ ಮಂಜು ಹಾಗು ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರನ್ನಾಗಿ ಅನೀಲ್ ಥಾಮಸ್ ಅವರನ್ನು ನೇಮಕ ಮಾಡಲಾಗಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಕರ್ನಾಟಕದ ಗೆಲುವಿನ ಕಿರೀಟ ಸಮರ್ಪಿಸುವ ಶಪಥ ಮಾಡಿ, ತಕ್ಷಣದಿಂದಲೇ ಸಂಘಟನಾತ್ಮಕ ಜವಾಬ್ದಾರಿ ನಿರ್ವಹಿಸಲು ಪ್ರಾರಂಭಿಸಿ ಎಂದು ನೂತನ ಪದಾಧಿಕಾರಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಕರೆ ನೀಡಿದ್ದಾರೆ.
ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ನಂತರ ಟ್ವೀಟ್ ಮಾಡಿರುವ ವಿಜಯೇಂದ್ರ, ಪಕ್ಷ ಸಂಘಟನೆಗೆ ಹೊಸ ಚೈತನ್ಯ ತುಂಬಲು ರಾಜ್ಯ ಬಿಜೆಪಿಗೆ ನೂತನವಾಗಿ ನೇಮಕಗೊಂಡಿರುವ ಪದಾಧಿಕಾರಿಗಳಿಗೆ ಆತ್ಮೀಯ ಅಭಿನಂದನೆಗಳು. ಬರುವ ಲೋಕಸಭಾ ಮಹಾ ಚುನಾವಣೆಯಲ್ಲಿ ಶತಕೋಟಿ ಜನರ ಅಭಿಲಾಷೆ ಹಾಗೂ ಕಾರ್ಯಕರ್ತ ಸಮೂಹದ ಅಪೇಕ್ಷೆಯಂತೆ ನಮ್ಮೆಲ್ಲರ ಸಂಕಲ್ಪದ ಗುರಿ ತಲುಪಲು ವಿರಮಿಸದೇ ಶ್ರಮಿಸೋಣ, ಮತ್ತೆ ನಮ್ಮ ಹೆಮ್ಮೆಯ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಕರ್ನಾಟಕದ ಗೆಲುವಿನ ಕಿರೀಟ ಸಮರ್ಪಿಸುವ ಶಪಥ ಮಾಡೋಣ.ಈ ಕ್ಷಣದಿಂದಲೇ ತಾವೆಲ್ಲರೂ ಕ್ರಿಯಾಶೀಲರಾಗಿ ಜವಾಬ್ದಾರಿ ಪ್ರಾರಂಭಿಸುವಂತೆ ವಿನಂತಿಸಿದ್ದಾರೆ.
ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿಜಯೇಂದ್ರ ತಂಡಕ್ಕೆ ಶುಭ ಕೋರಿ ಟ್ವೀಟ್ ಮಾಡಿದ್ದಾರೆ. ರಾಜ್ಯ ಬಿಜೆಪಿ ಘಟಕದ ನೂತನ ಪದಾಧಿಕಾರಿಗಳಾಗಿ ನೇಮಕಗೊಂಡಿರುವ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಸ್ಥಾನಗಳಲ್ಲೂ ಎನ್ ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈಬಲಪಡಿಸೋಣ, ದೇಶದಲ್ಲಿ ಮತ್ತೂಮ್ಮೆ ಕಮಲ ಅರಳಿಸೋಣ ಎಂದು ಕರೆ ನೀಡಿದ್ದಾರೆ.
ಭಾರತೀಯ ಜನತಾ ಪಾರ್ಟಿಯ ನೂತನ ರಾಜ್ಯ ಪದಾಧಿಕಾರಿಗಳಾಗಿ ಆಯ್ಕೆಯಾದ ಎಲ್ಲರಿಗೂ ಹಾರ್ದಿಕ ಅಭಿನಂದನೆಗಳು. ನಿಮ್ಮ ಅಧಿಕಾರದ ಅವಧಿಯಲ್ಲಿ ಪಕ್ಷ ಮತ್ತಷ್ಟು ಸಂಘಟನಾತ್ಮಕವಾಗಿ ಬಲಗೊಂಡು ಇನ್ನಷ್ಟು ಶಕ್ತಿಯುತವಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಹಿಜಾಬ್ ನಿಷೇಧ ವಾಪಸ್: ರಾಜ್ಯ ಸರ್ಕಾರದಿಂದ ಯುವ ಮನಸ್ಸುಗಳ ವಿಭಜನೆ ಎಂದ ವಿಜಯೇಂದ್ರ