ಬೆಂಗಳೂರು: ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಎರಡೂ ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು, ಮೊದಲು ಮತ್ತು ಎರಡನೇ ಪಟ್ಟಿಯಲ್ಲಿ ಕೆಲವು ಹಾಲಿ ಶಾಸಕರ ಹೆಸರನ್ನು ಘೋಷಣೆ ಮಾಡದೇ ಇದ್ದಿದ್ದು ಕುತೂಹಲ ಮೂಡಿಸಿದೆ. ಇವರಲ್ಲಿ ಪ್ರಮುಖ ಎಂದರೆ ಪಾವಗಡ ಶಾಸಕ ವೆಂಕಟರಮಣಪ್ಪ, ಶಿಡ್ಲಘಟ್ಟ ಶಾಸಕ ವಿ. ಮುನಿಯಪ್ಪ, ಕುಂದಗೋಳ ಶಾಸಕಿ ಕುಸುಮಾ ಶಿವಳ್ಳಿ, ಹರಿಹರ ಶಾಸಕ ರಾಮಪ್ಪ, ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಸಿದ್ದರಾಮಯ್ಯಗೆ ಟಿಕೆಟ್ ನೀಡಿದ್ದರಿಂದ ವರುಣಾದಿಂದ ಟಿಕೆಟ್ ಕೈ ತಪ್ಪಿದ್ದ ಡಾ.ಯತೀಂದ್ರ ಸಿದ್ದರಾಮಯ್ಯಗೂ ಟಿಕೆಟ್ ಘೋಷಣೆ ಮಾಡಲಾಗಿಲ್ಲ.
ಟಿಕೆಟ್ ಪಡೆದವರಲ್ಲಿ ಅಪ್ಜಲ್ಪುರ ಶಾಸಕ ಎಂ.ವೈ.ಪಾಟೀಲ್ ಪ್ರಮುಖರು. ತಮಗೆ ವಯಸ್ಸಾಗಿದ್ದು ತಮ್ಮ ಪುತ್ರನಿಗೆ ಇಲ್ಲವೇ ಯುವಕರಿಗೆ ಅಥವಾ ಬೇರೆಯವರಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಆದ್ದರಿಂದ ಮೊದಲ ಪಟ್ಟಿಯಲ್ಲಿ ಅವರ ಹೆಸರನ್ನು ಪೆಂಡಿಂಗ್ ಇಡಲಾಗಿತ್ತು. ಆದರೆ, ಎರಡನೇ ಪಟ್ಟಿಯಲ್ಲಿ ಅವರ ಹೆಸರನ್ನು ಕಾಂಗ್ರೆಸ್ ಪ್ರಕಟಿಸಿದೆ. ಕಾಂಗ್ರೆಸ್ 124 ಅಭ್ಯರ್ಥಿಗಳನ್ನೊಳಗೊಂಡ ತನ್ನ ಮೊದಲ ಪಟ್ಟಿಯನ್ನು, ಮಾ.25ರಂದು ರಾಷ್ಟ್ರೀಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಬಿಡುಗಡೆ ಮಾಡಿದ್ದರು.
ಕಾಂಗ್ರೆಸ್ ಮೊದಲ ಪಟ್ಟಿಯ ಪ್ರಮುಖ ಅಭ್ಯರ್ಥಿಗಳು :ಕಾಗವಾಡಕ್ಕೆ ಭರಮಗೌಡ ಆಲಗೌಡ ಕಾಗೆ, ಚಿಕ್ಕೋಡಿ- ಸದಲಗಾ ವಿಧಾನಸಭಾ ಕ್ಷೇತ್ರಕ್ಕೆ ಗಣೇಶ್ ಹುಕ್ಕೇರಿ, ಹುಕ್ಕೇರಿಗೆ ಎಬಿ ಪಾಟೀಲ್, ಕುಡಚಿ ಎಸ್ಸಿ ಕ್ಷೇತ್ರಕ್ಕೆ ಮಹೇಂದ್ರ ತಮ್ಮಣ್ಣನವರ್, ಬೆಳಗಾವಿ ಗ್ರಾಮಾಂತರಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್, ಯಮಕನಮರಡಿ ಎಸ್ಟಿ ಕ್ಷೇತ್ರಕ್ಕೆ ಸತೀಶ್ ಜಾರಕಿಹೊಳಿ, ಬೈಲಹೊಂಗಲಕ್ಕೆ ಮಹಾಂತೇಶ ಶಿವಾನಂದ ಕೌಜಲಗಿ, ಖಾನಾಪುರಕ್ಕೆ ಅಂಜಲಿ ನಿಂಬಾಳ್ಕರ್, ಜಮಖಂಡಿಗೆ ಆನಂದ ಸಿದ್ದು ನ್ಯಾಮಗೌಡ, ರಾಮದುರ್ಗದಿಂದ ಅಶೋಕ್ ಎಂ ಪಟ್ಟಣ್, ಮುದ್ದೇಬಿಹಾಳದಿಂದ ಅಪ್ಪಾಜಿ ಅಲಿಯಾಸ್ ಸಿ.ಎಸ್. ನಾಡಗೌಡ, ಹುನಗುಂದದಿಂದ ವಿಜಯಾನಂದ ಎಸ್ ಕಾಶಪ್ಪನವರ್, ಬಸವನ ಬಾಗೇವಾಡಿಯಿಂದ ಶಿವಾನಂದ ಪಾಟೀಲ್.