ಬೆಂಗಳೂರು:ಸರ್ಕಾರ ಮದ್ಯದ ದರ ಹೆಚ್ಚಳ ಮಾಡಿಲ್ಲ. ಯಾವುದೇ ಅಧಿಕೃತ ಆದೇಶವೂ ಆಗಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್ ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮದ್ಯದ ದರ ಹೆಚ್ಚಳ ಮಾಡುವ ಬಗ್ಗೆ ಯಾವುದೇ ಪ್ರಸ್ತಾವನೆ ನಮ್ಮ ಮುಂದೆ ಬಂದಿಲ್ಲ. ಮದ್ಯದ ದರ ಹೆಚ್ಚಳ ಮಾಡಿದರೆ ಮಾಹಿತಿ ನೀಡುತ್ತೇನೆ ಎಂದರು.
ಅಬಕಾರಿ ಇಲಾಖೆಯಿಂದ ಯಾವುದೇ ದರ ಏರಿಕೆ ಮಾಡಿಲ್ಲ. ನನಗೆ ಮಾಹಿತಿಯೂ ಇಲ್ಲ. ದರ ಏರಿಕೆ ಇದುವರೆಗೂ ಆಗಿಲ್ಲ. ಪರಿಶೀಲನೆ ಮಾಡಿ ಹೇಳುತ್ತೇನೆ ಎಂದು ಹೇಳಿದರು. ಕಳೆದ ಒಂದು ವಾರದಿಂದ ಬಿಯರ್ ದರ 20 ರೂ. ಜಾಸ್ತಿ ಆಗಿದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೇಕಾದರೆ ನಾವು ರಿಯಾಲಿಟಿ ಚೆಕ್ ಮಾಡುತ್ತೇವೆ. ದರ ಏರಿಕೆ ಮಾಡಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.