ಬೆಂಗಳೂರು: ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಚುನಾವಣಾ ಆಯೋಗವು ತಯಾರಿ ನಡೆಸಿದ್ದು, ಮತದಾನ ನಡೆಯುವ ದಿನ ಮತ್ತು ಮತ ಎಣಿಕೆಯ ದಿನದಂದು ಮದ್ಯ ಮಾರಾಟವನ್ನು ನಿಷೇಧಿಸಿ ಆದೇಶಿಸಿದೆ. ಇದೇ ವೇಳೆ ಮತದಾನ ದಿನದಂದು ತುರ್ತು ಸೇವೆ ಮತ್ತು ಚುನಾವಣೆಗೆ ನಿಯೋಜನೆಗೊಂಡ ಸಿಬ್ಬಂದಿ ಹೊರತುಪಡಿಸಿ ಇನ್ನುಳಿದ ಕಾರ್ಮಿಕ ವರ್ಗ, ಖಾಸಗಿ ಸಿಬ್ಬಂದಿಗೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ.
ಮೇ 10 ಕ್ಕೆ ಮತದಾನ ಮತ್ತು ಮೇ 13 ಕ್ಕೆ ಮತ ಎಣಿಕೆ ನಡೆಯಲಿದೆ. ಈ ಎರಡು ದಿನಗಳ 24 ಗಂಟೆ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮದ್ಯದ ಅಂಗಡಿ, ಹೋಟೆಲ್, ಪಂಚಾತಾರ, ಸಗಟು ವ್ಯಾಪಾರ ಸೇರಿದಂತೆ ಎಲ್ಲಿಯೂ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಚುನಾವಣೆ ಆಯೋಗವು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಮತದಾನ ಆರಂಭಕ್ಕೂ ಹಿಂದಿನ ದಿನ ಸಂಜೆ ಮತ್ತು ಮತ ಎಣಿಕೆಯ ಹಿಂದಿನ ದಿನ ಸಂಜೆಯಿಂದ ಡ್ರೈ ಡೇ (ಶುಷ್ಕ ದಿನ) ಎಂದು ಪರಿಗಣಿಸಲಾಗುತ್ತದೆ. ಈ ವೇಳೆಯಲ್ಲಿ ಎಲ್ಲವೂ ಸೈಲೆಂಟ್ ಆಗಿರಬೇಕು ಎಂಬುದು ಆಯೋಗದ ನಿರ್ದೇಶನವಾಗಿದೆ. ನ್ಯಾಯ ಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಈ ಅವಧಿಯು ಆಯೋಗಕ್ಕೆ ಅತಿಮುಖ್ಯ ಮತ್ತು ಸಾಕಷ್ಟು ಎಚ್ಚರಿಕೆ ವಹಿಸಬೇಕಾದ ಸಮಯ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಇದನ್ನೂ ಓದಿ:ಚುನಾವಣೆ ನೀತಿ ಸಂಹಿತೆ ಜಾರಿ: ಎಟಿಎಂಗೆ ಸಾಗಿಸುವ ವಾಹನಗಳಲ್ಲಿನ ಹಣ ಅಧಿಕೃತಗೊಳಿಸಲು ಪ್ರತ್ಯೇಕ ಆ್ಯಪ್
ಇನ್ನು ಚುನಾವಣೆಯನ್ನು ಒಂದು ರೀತಿಯಲ್ಲಿ ಹಬ್ಬವನ್ನಾಗಿ ಆಚರಣೆ ಮಾಡಬೇಕು ಎಂಬುದು ಆಯೋಗದ ಉದ್ದೇಶ. ಮತದಾನದಲ್ಲಿ ಪ್ರತಿಯೊಬ್ಬರು ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂಬ ಸದುದ್ದೇಶದಿಂದ ಮತದಾನದ ದಿನದಂದು ವೇತನ ಸಹಿತ ರಜೆ ಘೋಷಣೆ ಮಾಡಿದೆ. ತುರ್ತು ಸೇವೆಯಲ್ಲಿ ಕಾರ್ಯ ನಿರ್ವಹಿಸುವವರು ಮತ್ತು ಚುನಾವಣಾ ಕಾರ್ಯದಲ್ಲಿ ತೊಡಗಿರುವವರಿಗೆ ಮಾತ್ರ ವಿನಾಯಿತಿ ನೀಡಿ ಇನ್ನುಳಿದ ಕಾರ್ಖಾನೆ, ಸರ್ಕಾರಿ, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ವೇತನ ಸಹಿತ ರಜೆ ನೀಡಿ ಎಂದು ಆದೇಶ ಹೊರಡಿಸಿದೆ.
ಸೇನೆಯಲ್ಲಿ ಕೆಲಸ ಮಾಡುವವರು, ಎನ್‌ಆರ್‌ಐಗಳು ಎಲೆಕ್ಟ್ರಾನಿಕಲಿ ಟ್ರಾನ್ಸ್‌ಮಿಟೆಡ್ ಪೋಸ್ಟಲ್ ಬ್ಯಾಲೆಟ್ ಪೇಪರ್ ವ್ಯವಸ್ಥೆ ಮೂಲಕ ಮತ ಚಲಾಯಿಸುತ್ತಾರೆ. ಇವುಗಳ ಮತ ಎಣಿಕೆ ಪ್ರಾರಂಭಿಸುವ ವೇಳೆ ರಿಟರ್ನಿಂಗ್ ಅಧಿಕಾರಿಗಳು ಮತ್ತು ಸಹಾಯಕ ರಿಟರ್ನಿಂಗ್ ಅಧಿಕಾರಿಗಳು ಮೊಬೈಲ್ ಅನ್ನು ಪಾಸ್‌ವರ್ಡ್‌ಗಾಗಿ ಮಾತ್ರ ಬಳಕೆ ಮಾಡಬೇಕು. ಪಾಸ್‌ವರ್ಡ್ ಪ್ರಕ್ರಿಯೆ ಮುಗಿದ ಬಳಿಕ ಮೊಬೈಲ್ ಅನ್ನು ಮತ ಎಣಿಕೆ ಕೇಂದ್ರದ ಹಿರಿಯ ಅಧಿಕಾರಿಗಳಿಗೆ ನೀಡಬೇಕು. ಮತ ಎಣಿಕೆಯು ಮೇ 13 ರಂದು ನಡೆಯಲಿದ್ದು, ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ನಿಗದಿತ ಸಮಯಕ್ಕೆ ಮತ ಎಣಿಕೆಯನ್ನು ಪ್ರಾರಂಭಿಸಬೇಕು. ಇದಕ್ಕಾಗಿ ಚುನಾವಣಾ ಸಿಬ್ಬಂದಿ ತಯಾರಾಗಿರಬೇಕು ಎಂದು ಆಯೋಗ ತಿಳಿಸಿದೆ.
ಇದನ್ನೂ ಓದಿ:ರಾಜ್ಯ ಚುನಾವಣೆಗೆ ಅಖಾಡ ಸಜ್ಜು: ಅಭ್ಯರ್ಥಿಗಳ ವೆಚ್ಚದ ಮೇಲೆ ಆಯೋಗದ ಹದ್ದಿನ ಕಣ್ಣು