ಬೆಂಗಳೂರು :ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಕ್ಯಾಬಿನೆಟ್‌ನಲ್ಲಿ ಲಿಂಗಾಯತ ಸಮುದಾಯ ಮೇಲುಗೈ ಸಾಧಿಸಿದೆ. ಬಿಎಸ್‌ವೈ ಸಚಿವ ಸಂಪುಟದಲ್ಲಿ ಸ್ವಜಾತಿ ಪ್ರೇಮ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಮತ್ತು ಚರ್ಚೆಗೆ ಗ್ರಾಸವಾಗಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ 11 ಮಂದಿ ಲಿಂಗಾಯತ ಸಮುದಾಯವರು ಬಿಜೆಪಿ ಸರ್ಕಾರದಲ್ಲಿದ್ದಾರೆ. ಸ್ವಜಾತಿಯವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಚಿವ ಸ್ಥಾನವನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ.
ಇನ್ನುಳಿದಂತೆ 7 ಒಕ್ಕಲಿಗ ಸಮುದಾಯಕ್ಕೆ ಸೇರಿದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಐವರು ದಲಿತರು, ಮೂವರು ಕುರುಬರು, ಇಬ್ಬರು ಬ್ರಾಹ್ಮಣರಿಗೆ, ರಜಪೂತ, ಮರಾಠ ಮತ್ತು ಈಡಿಗ ಸಮುದಾಯಕ್ಕೆ ತಲಾ ಒಂದು ಸ್ಥಾನ ನೀಡಿ ಒಟ್ಟು 32 ಸಚಿವರನ್ನು ಒಳಗೊಂಡ ಸರ್ಕಾರ ರಚನೆಯಾಗಿದೆ.
ಯಾವ ಸಮುದಾಯ ಎಷ್ಟು?:
ಲಿಂಗಾಯತ ಸಮುದಾಯ : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಸಚಿವರಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ವಿ. ಸೋಮಣ್ಣ, ಜೆ ಸಿ ಮಾಧುಸ್ವಾಮಿ, ಸಿ ಸಿ ಪಾಟೀಲ್, ಶಶಿಕಲಾ ಜೊಲ್ಲೆ, ಬಿ ಸಿ ಪಾಟೀಲ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಲಿಂಗಾಯಿತ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಒಕ್ಕಲಿಗ ಸಮುದಾಯ :ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥ್ ನಾರಾಯಣ, ಸಚಿವರಾದ ಆರ್. ಅಶೋಕ್, ಕೆ. ಗೋಪಾಲಯ್ಯ, ಎಸ್ ಟಿ ಸೋಮಶೇಖರ್, ಕೆ. ಸುಧಾಕರ್, ನಾರಾಯಣಗೌಡ, ಸಿ ಪಿ. ಯೋಗೇಶ್ವರ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ದಲಿತ ಸಮುದಾಯ : ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವರಾದ ಶ್ರೀರಾಮುಲು, ಎಸ್. ಅಂಗಾರ, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಜೊಳಿ ದಲಿತ ಸಮುದಾಯಕ್ಕೆ ಸೇರಿದ್ದಾರೆ.
ಇನ್ನು ಸಚಿವರಾದ ಕೆ ಎಸ್ ಈಶ್ವರಪ್ಪ, ಎಂಟಿಬಿ ನಾಗರಾಜ್, ಆರ್ ಶಂಕರ್ ಕುರುಬ ಸಮುದಾಯಕ್ಕೆ ಸೇರಿದ್ದಾರೆ. ಸುರೇಶ್ ಕುಮಾರ್, ಶಿವರಾಮ ಹೆಬ್ಬಾರ್ ಅವರು ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದಾರೆ. ಆನಂದ್ ಸಿಂಗ್ ರಜಪೂತ, ಪ್ರಭು ಚೌಹಾಣ್ ಲಂಬಾಣಿ, ಶ್ರೀಮಂತ ಪಾಟೀಲ್ ಅವರು ಮರಾಠ ಮತ್ತು ಕೋಟ ಶ್ರೀನಿವಾಸ ಪೂಜಾರಿ ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ.