ಬೆಂಗಳೂರು: "ಲಿಂಗಾಯತರ ಕಡೆಯಿಂದ ಕಾಂಗ್ರೆಸ್‌ಗೆ ಬಂದಿರುವ ಮತಗಳು ಕೇವಲ ಶೇ.20ರಷ್ಟು ಮಾತ್ರ. ಹೀಗಿದ್ದರೂ ರಾಜ್ಯ ಸಂಪುಟದಲ್ಲಿ ಲಿಂಗಾಯತರಿಗೆ 7 ಸ್ಥಾನ ನೀಡಲಾಗಿದೆ" ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ್ ಹೇಳಿದ್ದಾರೆ.
ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂಬ ಶಾಮನೂರು ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು, "ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಕರ್ನಾಟಕದ ಪಾಲಿಗೆ ಪಕ್ಷದ ಆಸ್ತಿಯೂ ಆಗಿರುವ ಮಾಜಿ ಸಚಿವರಾದ ಶಾಮನೂರು ಶಿವಶಂಕರಪ್ಪನವರ ಹೇಳಿಕೆ ನನಗೆ ಅತೀವ ನೋವು ತಂದಿದೆ. ಶಿವಶಂಕರಪ್ಪ ಅವರ ರೀತಿಯೇ ನಾನೂ ಕೂಡ ಪಾರ್ಟಿ ಮ್ಯಾನ್. 92 ವರ್ಷ ವಯಸ್ಸಿನ ಶಿವಶಂಕರಪ್ಪನವರು ತಮ್ಮ ಮುಕ್ಕಾಲು ಆಯಸ್ಸನ್ನು ಕಾಂಗ್ರೆಸ್ ಮನೆಯಲ್ಲೇ ಕಳೆದಿದ್ದಾರೆ. ಈ ಮನೆಯಲ್ಲೇ ಬೆಳೆದಿದ್ದಾರೆ. ಹೀಗಾಗಿ ಸಾಮಾಜಿಕ ನ್ಯಾಯ ಕಾಂಗ್ರೆಸ್ ಪಕ್ಷದ ಜೀವಾಳ ಎನ್ನುವುದನ್ನು ಶಿವಶಂಕರಪ್ಪನವರಿಗೆ ಯಾರೂ ತಿಳಿ ಹೇಳುವ ಅಗತ್ಯವಿಲ್ಲ."
"ಸ್ವಾತಂತ್ರ್ಯ ಪೂರ್ವದಿಂದಲೂ ನಮ್ಮದೂ ಕಾಂಗ್ರೆಸ್ ಕುಟುಂಬ. ಸಾಮಾಜಿಕ ನ್ಯಾಯ ಕಾಂಗ್ರೆಸ್ ಪಕ್ಷದ ರಕ್ತದಲ್ಲಿದೆ ಎನ್ನುವುದನ್ನು ನಮ್ಮ ತಂದೆ ಕೆ.ಟಿ.ರಾಠೋಡ್ ಅವರ ಕಾಲದಿಂದಲೂ ಸ್ವತಃ ಕಂಡುಕೊಂಡಿದ್ದೇನೆ. ಸಾಮಾಜಿಕ ನ್ಯಾಯದ ಕಾರಣಕ್ಕೇ ನಾನು ಮತ್ತು ನನ್ನಂತಹ ಸಾವಿರಾರು ಮಂದಿ ಪಕ್ಷದಲ್ಲಿ ಅವಕಾಶಗಳನ್ನು ಪಡೆದುಕೊಂಡಿದ್ದೇವೆ. ಆದರೆ ರಾಜ್ಯದ ಪ್ರಚಲಿತ ಕಾಂಗ್ರೆಸ್ ಆಡಳಿತದಲ್ಲಿ ಲಿಂಗಾಯತರು ಕಂಗಾಲಾಗಿದ್ದಾರೆ".
"ಪ್ರಮುಖ ಹುದ್ದೆಗಳಿಗೆ ಲಿಂಗಾಯತ ಸಮುದಾಯದ ಸದಸ್ಯರನ್ನು ಪರಿಗಣಿಸುತ್ತಿಲ್ಲ ಎಂದು ಇತ್ತೀಚಿಗೆ ನೀಡಿದ ಸಾರ್ವಜನಿಕ ಹೇಳಿಕೆಯು ನನಗೆ ತೀರಾ ನಿರಾಶೆ ಉಂಟುಮಾಡಿದೆ. ಈ ರೀತಿ ಹೇಳಿಕೆ ನೀಡಿ ಸ್ವತಃ ನಿಮಗೆ ದೊಡ್ಡ ಸಂಖ್ಯೆಯಲ್ಲಿ ಮತ ನೀಡಿದ ಮತ್ತು ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದ ವರ್ಗದವರ ಕೊಡುಗೆಯನ್ನು ಮರೆತು ಕೇವಲ ತಮ್ಮ ಸಮುದಾಯದವರ ಬಗ್ಗೆ ಮಾತನಾಡಿದ್ದರಿಂದ ಉಳಿದೆಲ್ಲ ಸಮುದಾಯವರಿಗೆ ನೋವು ತಂದಿದೆ".
"ತಾವು ಎಲ್ಲಾ ಸಮುದಾಯವನ್ನು ಒಳಪಡಿಸಿ ಅವರಿಗೂ ಸಹ ಪ್ರಾತಿನಿಧ್ಯವನ್ನು ನೀಡಬೇಕೆಂದು ಕೋರಿದ್ದರೆ, ಅದರಿಂದ ನಿಮ್ಮ ಹಿರಿತನ ಮತ್ತು ಘನತೆ ಹೆಚ್ಚಾಗುತ್ತಿತ್ತು. ಏಕೆಂದರೆ ನೀವು ಕೇವಲ ಒಂದು ಸಮುದಾಯದ ಮತಗಳಿಂದ 7 ಬಾರಿ ಆಯ್ಕೆಯಾದವರಲ್ಲ ಎನ್ನುವುದನ್ನೂ ನೀವೇ ಹತ್ತಾರು ಬಾರಿ ಹೇಳಿದ್ದೀರಿ. ಆದರೂ ಕೇವಲ ಒಂದು ಸಮುದಾಯದ ಬೆರಳೆಣಿಕೆಯಷ್ಟು ಅಧಿಕಾರಿಗಳ ಪರವಾಗಿ ನೀವು ಧ್ವನಿ ಎತ್ತಿರುವ ವಿಷಯ ನನಗೆ ಬೇಸರ ತಂದಿದೆ. ಸಮೀಕ್ಷೆಯೊಂದರ ಪ್ರಕಾರ ಕಾಂಗ್ರೆಸ್ ಪರವಾಗಿ ಅತ್ಯಧಿಕ ಅಂದರೆ ಶೇಕಡಾ 88 ರಷ್ಟು ಮತ ಚಲಾಯಿಸಿದವರು ಮುಸ್ಲಿಮರು. ಅದಕ್ಕೆ ಹೋಲಿಸಿದರೆ ಲಿಂಗಾಯತರ ಕಡೆಯಿಂದ ಕಾಂಗ್ರೆಸ್‌ಗೆ ಬಂದಿರುವ ಮತಗಳು ಕೇವಲ ಶೇಕಡಾ 20ರಷ್ಟು ಮಾತ್ರ. ಇಷ್ಟಿದ್ದರೂ ರಾಜ್ಯ ಸಂಪುಟದಲ್ಲಿ ಲಿಂಗಾಯತರಿಗೆ 7 ಸ್ಥಾನಗಳನ್ನು ನೀಡಲಾಗಿದೆ".
"ಮುಸ್ಲಿಂ ಸಮುದಾಯವರಿಗೆ ಕೇವಲ 2 ಸ್ಥಾನಗಳನ್ನು ಮಾತ್ರ ನೀಡಲಾಗಿದೆ. ಲಂಬಾಣಿ ಸಮುದಾಯವು ಶೇ.80ರಷ್ಟು ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ ಹಲವಾರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ಪ್ರಮುಖ ಪಾತ್ರ ವಹಿಸಿದೆ. ಆದರೂ ಲಂಬಾಣಿ ಸಮುದಾಯದವರಿಗೆ ಮಂತ್ರಿಸ್ಥಾನ ಸಿಕ್ಕಿಲ್ಲ. ಉಪ್ಪಾರ, ಬಲಜಿಗ ಹಾಗೂ ಯಾದವ ಸಮುದಾಯಕ್ಕೂ ಸಹಾ ಮಂತ್ರಿಸ್ಥಾನ ನೀಡಿಲ್ಲ. ಈ ಎಲ್ಲಾ ಸಮುದಾಯದ ಮುಖಂಡರು ಪಕ್ಷದ ಒಳಗಡೆ ಶಿಸ್ತಿನಿಂದ ತಮ್ಮ ಬೇಡಿಕೆಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ, ಕೆ.ಪಿ.ಸಿ.ಸಿ ಅಧ್ಯಕ್ಷರಿಗೆ ಮತ್ತು ಎಐಸಿಸಿ ಮುಖಂಡರುಗಳಿಗೆ ಮನವಿ ಮಾಡಿದ್ದಾರೆ."